ಧರ್ಮಗ್ರಂಥಗಳಿಗಿಂತ ಸಂವಿಧಾನವೇ ಮಿಗಿಲು
ಗದಗ: ಆಧುನಿಕ ಭಾರತದ ಪುನರುತ್ಥಾನದ ಹಿಮಾಲಯವೇ ಡಾ. ಬಿ.ಆರ್. ಅಂಬೇಡ್ಕರ್ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಸೋಮವಾರ ಸ್ಥಳೀಯ ತಳಗೇರಿ ಓಣಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದ ಸಂವಿಧಾನದಲ್ಲಿ ಬಹುಜನ, ಬಹುಜಾತಿ, ಬಹುಸಂಸ್ಕೃತಿ, ರಕ್ಷಣೆಯಿದೆ. ಕಾರಣ ಸಂವಿಧಾನವೇ ಮಹಾಧರ್ಮಗ್ರಂಥ, ಎಲ್ಲ ಧರ್ಮಗ್ರಂಥಗಳಿಗಿಂತ ಸಂವಿಧಾನವೇ ಮಿಗಿಲು. ಅದರಂತೆ ಎಲ್ಲ ಮಠಗಳಿಗಿಂತ ದೊಡ್ಡಮಠವೇ ಪಾರ್ಲಿಮೆಂಟ್. 5000 ವರ್ಷಗಳಿಂದ ಶೋಷಣೆಗೊಳಗಾದ ದಲಿತ ಜನರು ಈ ದೇಶದಲ್ಲಿ ಬೃಹತ್ ಸಂಖ್ಯೆಯಲ್ಲಿದ್ದಾರೆ. ಅವರೂ ಈ ದೇಶ ಆಳಲು ಹಕ್ಕು ಹೊಂದಿದ್ದಾರೆ. ಆದರೆ, ದಲಿತರಲ್ಲಿ ಒಗ್ಗಟ್ಟು, ಸಂಘಟನೆ ಇಲ್ಲ. ಶಿಕ್ಷಣ, ಸಂಘಟನೆ, ಸಂಘರ್ಷ ಈ ಮೂರು ದಲಿತರಿಗೆ ಅಂಬೇಡ್ಕರರು ಕೊಟ್ಟ ಜೀವನದ ಸೂತ್ರಗಳು. ಕಾರಣ ದಲಿತರು ವಿದ್ಯಾವಂತರಾಗಬೇಕು, ಸಂಘಟನೆಯಾಗಬೇಕು. ಆತ್ಮಗೌರವಕ್ಕೆ ಧಕ್ಕೆ ಬಂದಾಗ ಸಂಘರ್ಷ ಮಾಡಬೇಕು. ಸಂವಿಧಾನ ಬಂದ ನಂತರವೇ ದೇಶಕ್ಕೆ ಏಕತೆ ಬಂದಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಯಾವುದೇ ಜಾತಿಗೆ ಸೀಮತರಾದ ವ್ಯಕ್ತಿಯಲ್ಲ, ಅವರು ಎಲ್ಲ ಜನಾಂಗದವರಿಗೂ ಮಾರ್ಗದರ್ಶಕರಾಗಿದ್ದಾರೆ. ಅಂತಹ ಆದರ್ಶ ವ್ಯಕ್ತಿಗಳ ವ್ಯಕ್ತಿತ್ವ ಪ್ರತಿಯೊಬ್ಬರ ಮನೆ, ಮನಕ್ಕೂ ಮುಟ್ಟಿಸುವಂತಾಗಬೇಕು ಎಂದರು. ದೆಹಲಿ ದಲಿತ ಸಂಘಟನೆಗಳ ನೇತಾರ ಮನೋಜಕುಮಾರ ಮಾತನಾಡಿ, ಬಸವ ಚಳವಳಿ ದಲಿತರಿಗಾಗಿ ಹುಟ್ಟಿದ್ದರಿಂದ ತಾವು ತೋಂಟದ ಶ್ರೀಗಳಿಂದ ಲಿಂಗದೀಕ್ಷೆ ಪಡೆದು ತಮ್ಮ ಜನಾಂಗದಲ್ಲಿ ಬಹಳಷ್ಟು ಜನ ಲಿಂಗವಂತರಾಗಿದ್ದಾರೆ. ದಲಿತರಿಗೆ ಬಸವ ಮತ್ತು ಅಂಬೇಡ್ಕರ ಎರಡು ಕಣ್ಣುಗಳಿದ್ದಂತೆ. ಈಗಲೂ ಉತ್ತರ ಭಾರತದಲ್ಲಿ ಜಾತಿ ವ್ಯವಸ್ಥೆ ಕ್ರೂರವಾಗಿದ್ದು, ಕರ್ನಾಟಕದಲ್ಲಿ ಬಸವಭೂಮಿ ಇರುವುದರಿಂದ ಉತ್ತರ ಭಾರತದಷ್ಟು ಜಾತಿ ವ್ಯವಸ್ಥೆ ಇಲ್ಲಿ ಕಾಣದು ಎಂದರು. ಎಸ್.ಎನ್. ಬಳ್ಳಾರಿ, ಗಣೇಶ ಹುಬ್ಬಳ್ಳಿ, ದೆಹಲಿ ದಲಿತ ಸಂಘಟನೆಗಳ ಮುಖ್ಯಸ್ಥ ಲೇಖರಾಜ, ಶ್ಯಾಮ ಪವಾರ, ಶಿವಾನಂದ ಪಟ್ಟಣಶೆಟ್ಟಿ, ರಾಘವೆಂದ್ರ ಪರಾಪುರ, ಮಂಜುನಾಥ ಕೌಜಲ್, ಒಬಳೇಶ ಯಶವಂತಪುರ, ಸಂಗಾಪುರ ಮುಂತಾದವರು ಇದ್ದರು. ಮಂಜುನಾಥ ಬಳ್ಳಾರಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

