ಗದಗ

ತೋಂಟದಾರ್ಯ ಜಾತ್ರೆ ವೈಚಾರಿಕತೆ ಪ್ರಸಾರ ಸಾಧನ

Published On :

ಗದಗ: ಅತಿಯಾದ ಭೋಗಲಾಲಸೆ, ಸಂಪ್ರದಾಯಿಕತೆ ಮತ್ತು ವ್ಯರ್ಥ ಆಚರಣೆಗಳಲ್ಲಿ ಇಂದಿನ ಸಮಾಜ ಅರಿವು-ವೈಚಾರಿಕತೆ ಕಳೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ತೋಂಟದಾರ್ಯ ಮಠ ಜನಪರ ಹಾಗೂ ಜ್ಞಾನಪರವಾದ ಜಾತ್ರೋತ್ಸವ ಮೂಲಕ ಅರಿವು-ವೈಚಾರಿಕತೆಯ ಪ್ರಸಾರಕ್ಕೆ ತನ್ನದೆ ಆದ ಕೊಡುಗೆ ನೀಡುತ್ತಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜ. ಬಸವ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಅವರು ಗುರುವಾರ ಸಂಜೆ ಜ. ತೋಂಟದ ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ 4 ದಿನಗಳಿಂದ ಅದ್ಧೂರಿ-ಅರ್ಥಪೂರ್ಣತೆಯೊಂದಿಗೆ ನೆರವೇರಿದ ಜ. ತೋಂಟದಾರ್ಯ ಜಾತ್ರಾ ಮಹೋತ್ಸವದ ಮಂಗಲೋತ್ಸವ ಸಮಾರಂಭದ ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು.
ಗದುಗಿನ ಜ. ತೋಂಟದಾರ್ಯ ಮಠದ ಜಾತ್ರೆ ಉಳಿದ ಜಾತ್ರೆಗಳಿಗಿಂತ ವಿಭಿನ್ನವಾಗಿದೆ. ತೋಂಟದ ಶ್ರೀಗಳು ಉತ್ಕೃಷ್ಟ ಸಾಹಿತ್ಯ ಕೃತಿಗಳ ಬಿಡುಗಡೆ ಹಾಗೂ ವೈಚಾರಿಕ ಚಿಂತನ ಕಾರ್ಯಕ್ರಮಗಳ ಮೂಲಕ ಮುಖ್ಯವಾಗಿ ಆರೋಗ್ಯ, ಕೃಷಿ ಕುರಿತ ವಿಚಾರ ಸಂಕಿರಣ ಮೂಲಕ ಜಾತ್ರೆಯನ್ನು ಜನಪರ ಕಾಳಜಿಯ ಜನೋತ್ಸವವನ್ನಾಗಿಸಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಜ. ತೊಂಟದ ಡಾ. ಸಿದ್ಧಲಿಂಗ ಶ್ರೀಗಳು ಮಾತನಾಡಿ, ಲಿಂಗಾಯತ ಅಧ್ಯಯನ ಸಂಸ್ಥೆಯಿಂದ ಉತ್ಕೃಷ್ಟ ಪುಸ್ತಕಗಳ ಪ್ರಕಟಣೆಗೆ ಚಾಲನೆ ನೀಡಲಾಗಿದೆ. ಲಿಂಗಾಯತ ಪುಣ್ಯಪುರುಷ ಮಾಲೆಯ ಕೃತಿಗಳು ಆಧುನಿಕ ಗಣಂಗಳ ಹಾಗೂ ಪುರಾತನರ ಚರಿತ್ರೆಗಳಂತಿವೆ. ಸಮಾಜದಲ್ಲಿ ಕಾಯಕನಿಷ್ಠೆ, ಆದರ್ಶ ಜೀವನ ಸಾಧನೆ, ಸೇವಾ ಮನೋಭಾವ ನಮ್ಮೆಲ್ಲರಿಗೂ ಸ್ಫೂರ್ತಿದಾಯಕ. ಇಂತಹ ಪುಸ್ತಕಗಳನ್ನು ಅವರ ನೇರ ಸಂಬಂಧಿಗಳು ಅಥವಾ ನಿಕಟವರ್ತಿಗಳಿಂದ ವಸ್ತುನಿಷ್ಟವಾಗಿ ಬರೆಯಿಸುವ ಮೂಲಕ ಗ್ರಂಥದ ಬರೆಹಕ್ಕೆ ಅಧಿಕೃತತೆ ತಂದುಕೊಡಲಾಗಿದೆ ಎಂದರು.
ಹಾರಕೂಡದ ಹಿರೇಸಂಸ್ಥಾನಮಠದ ಡಾ. ಚನ್ನವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ನಾಡೋಜ ಬೆಳಗಲ್ ವೀರಣ್ಣ, ಪ್ರಾ. ಚಂದ್ರಶೇಖರ ವಸ್ತ್ರದ ಮುಂತಾದವರು ಉಪಸ್ಥಿತರಿದ್ದರು. ಲಿಂಗಾಯತ ಅಧ್ಯಯನ ಸಂಸ್ಥೆ ವತಿಯಿಂದ ಲಿಂಗಾಯತ ಸಾಹಿತ್ಯ ರತ್ನಮಾಲೆಯಡಿ ಪ್ರಕಟಿತ ಡಾ. ಜಿ.ಎಂ. ಹೆಗಡೆ ಬರೆದ ಎಸ್.ಬಿ. ಶಾಪೇಟ, ಡಾ. ಉಜ್ವಲಾ ಧಾರವಾಡ ಬರೆದ ಪದ್ಮಾವತಿ ಅಂಗಡಿ, ಡಾ. ಮಲ್ಲಿಕಾರ್ಜುನ ಹುಲಗಬಾಳಿ ಬರೆದ ದು.ನಿಂ. ಬೆಳಗಲಿ ಹಾಗೂ ಗದುಗಿನ ಡಾ. ರಶ್ಮಿ ಅಂಗಡಿ ಬರೆದ ಕ.ಬ. ಅಂಗಡಿ ಈ 4 ಗ್ರಂಥಗಳ ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಯಶಸ್ಸಿಗೆ ಶ್ರಮಿಸಿದ ಜಾತ್ರಾ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳೊಳ್ಳಿ, ಕಾರ್ಯದರ್ಶಿ ಎಂ.ಸಿ. ಐಲಿ, ಕೆ.ಎಚ್. ಬೇಲೂರ, ಅಶೋಕ ಲಕ್ಕುಂಡಿ, ಗಣಾಚಾರಿ, ಶಿವಕುಮಾರ ಪಾಟೀಲ, ಶಿವಯೋಗಿ ತಡಸದ, ಪ್ರಕಾಶ ಉಗಲಾಟದ, ಸಂಗಣ್ಣ ಲಕ್ಕುಂಡಿ ಮುಂತಾದವರನ್ನು ಸನ್ಮಾನಿಸಲಾಯಿತು. ಹೊಂಬಳದ ಬಸವರಾಜ ಅಡವಳ್ಳಿ ಅವರಿಂದ ವಚನ ಸಂಗೀತ ನಡೆಯಿತು. ಜಾತ್ರಾ ಸಮಿತಿ ಕಾರ್ಯದರ್ಶಿ ಎಂ.ಸಿ. ಐಲಿ ಸ್ವಾಗತಿಸಿದರು. ಡಿ.ಎಲ್. ಪಾಟೀಲ ಹಾಗೂ ಡಾ. ವೀಣಾ ಹೂಗಾರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.