ಶಾಲೆಬಿಟ್ಟ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿ
ಗದಗ: ಶಾಲೆಬಿಟ್ಟ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಕರೆ ತಂದು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಪಾಲಕರ, ಶಿಕ್ಷಕರ, ಸಮುದಾಯ ಹಾಗೂ ಇಲಾಖೆ ಮೇಲಿದೆ ಎಂದು ಗ್ರಾಮೀಣ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.
ಅವರು ಮಂಗಳವಾರ ತಾಲೂಕಿನ ಅಡವಿಸೋಮಾಪುರ ದೊಡ್ಡ ತಾಂಡಾ (ಜಲಶಂಕರ ನಗರ)ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2014-15ನೇ ಸಾಲಿನ ಚಿಣ್ಣರ ಅಂಗಳ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಯಾವ ಮಗು ಶಿಕ್ಷಣದಿಂದ ವಂಚಿತ ಆಗಬಾರದು ಎಂಬ ಉದ್ದೇಶದಿಂದ ಮಕ್ಕಳ ಹಕ್ಕು ಕಾಯಿದೆ ಜಾರಿಯಲ್ಲಿದೆ. ಆದ್ದರಿಂದ ಶಾಲೆಯಿಂದ ಯಾವ ಮಗು ಹೊರಗುಳಿಯದಂತೆ ಕಾರ್ಯತಂತ್ರ ರೂಪಿಸಿ ಶಾಲೆಬಿಟ್ಟ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಪಾಲಕರು ಸಹಕರಿಸಿ ತಮ್ಮ ಮಕ್ಕಳನ್ನು ಶಾಲೆಯಲ್ಲಿರುವ ಚಿಣ್ಣರ ಅಂಗಳ ವಿಶೇಷ ತರಬೇತಿ ಕೇಂದ್ರಕ್ಕೆ ಕಳುಹಿಸಲು ವಿನಂತಿಸಿಕೊಂಡರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಬಿ. ಕೊಣ್ಣೂರ, ಅಡವಿಸೋಮಾಪುರ ಸಿಆರ್ಸಿ ಜಿ.ಎಸ್. ಸರಖಾಜಿ, ಸಣ್ಣ ತಾಂಡೆಯ ಪ್ರಧಾನಗುರು ಮಲ್ಲೇಶ ಡಿ.ಎಚ್., ಶಾಂತವ್ವ ರಜಪೂತ, ಇಂದಿರಾ ಲಮಾಣಿ ಮುಂತಾದವರು ಪಾಲ್ಗೊಂಡಿದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಶಿಕ್ಷಕ ಎಸ್.ಎಸ್. ತಟ್ಟಿ ಸ್ವಾಗತಿಸಿದರು. ಸ್ವಯಂ ಸೇವಕ ಸೋಮಪ್ಪ ಲಮಾಣಿ ವಂದಿಸಿದರು.
ಇಂದು ಡಾ. ರಾಜಕುಮಾರ 86ನೇ ಜನ್ಮ ದಿನೋತ್ಸವ
ಗಜೇಂದ್ರಗಡ: ಸ್ಥಳೀಯ ಡಾ. ರಾಜಕುಮಾರ ಅಭಿಮಾನಿ ಬಳಗ ವತಿಯಿಂದ ಪದ್ಮಭೂಷಣ ದಿ. ಡಾ. ರಾಜಕುಮಾರ 86ನೇ ಜನ್ಮ ದಿನೋತ್ಸವ, ಉಚಿತ ಕರಾಟೆ ತರಬೇತಿ ಮುಕ್ತಾಯ ಸಮಾರಂಭ ಹಾಗೂ ಚೈತ್ರಾ ಮೆಲೋಡಿಸ್ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏ. 24ರಂದು ಸಂಜೆ 7ಕ್ಕೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾಲಕಾಲೇಶ್ವರ ದೇಗುಲ ಅರ್ಚಕ ಕಲ್ಲಪ್ಪಜ್ಜನವರು ಪುಜಾರ ಸಾನ್ನಿಧ್ಯ ವಹಿಸುವರು. ಬಾಗಮಾರ ಸೇವಾ ಸಮಿತಿ ಅಧ್ಯಕ್ಷ ಅಶೋಕ ಬಾಗಮಾರ ಉದ್ಘಾಟಿಸುವರು. ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ ಅಧ್ಯಕ್ಷತೆ ವಹಿಸುವರು. ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ವಿಶೇಷ ತಹಸೀಲ್ದಾರ್ ಸಿ.ಎಂ. ಕಲಹಾಳ, ಡಾ. ಮಂಜುನಾಥ ವಿಶ್ವಬ್ರಾಹ್ಮಣ ಮುಂತಾದವರು ಪಾಲ್ಗೊಳ್ಳುವರು ಎಂದು ಸಂಘದ ಅಧ್ಯಕ್ಷ ಸಂಗಪ್ಪ ಯಲಬುಣಚಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಿಚಿತ ಶವ ಪತ್ತೆ
ನರಗುಂದ: ನರಗುಂದದಿಂದ ಅರಿಷಣಗೋಡಿ ಹೋಗುವ ರಸ್ತೆಯ ಮಲಪ್ರಭಾ ಮುಖ್ಯ ಕಾಲುವೆ ಪಕ್ಕದ ಉಪ ಕಾಲುವೆ ಪೈಪ್ನಲ್ಲಿ 30ರಿಂದ 40 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿ ಹಾಕಿದ ಮೃತದೇಹ ಪತ್ತೆಯಾಗಿದೆ. ಸಿಪಿಐ ಎಸ್.ಆರ್. ಪಾಟೀಲ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಖೆ ಕೈಗೊಂಡಿದ್ದಾರೆ.
ಫಲಾನುಭವಿಗಳಿಗೆ ಚೆಕ್ ವಿತರಣೆ, ಧರಣಿ ಹಿಂದಕ್ಕೆ
ಗಜೇಂದ್ರಗಡ: ಫಲಾನುಭವಿಗಳಿಗೆ ಸಹಾಯಧನ ಚೆಕ್ ವಿತರಿಸುವಲ್ಲಿ ಪುರಸಭೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಸಿಪಿಐ (ಎಂ) ನಗರ ಘಟಕ ಕಾರ್ಯಕರ್ತರು 2 ದಿನಗಳಿಂದ ಪುರಸಭೆ ಆವರಣದಲ್ಲಿ ನಡೆಸುತ್ತಿದ್ದ ಸತ್ಯಾಗ್ರಹವನ್ನು ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಮಂಗಳವಾರ ಹಿಂಪಡೆದರು. ಸಿಪಿಐಎಂನ ಪುರಸಭೆ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ವಾಜಪೇಯಿ ವಸತಿ ಯೋಜನೆ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ನೀಡಿ 1 ವರ್ಷ ಕಳೆದಿದೆ. ಜಿಪಿಎಸ್ ತಂತ್ರಜ್ಞಾನದ ಗೊಂದಲ ಉಂಟಾಗಿ ಕೆಲವರು ಮನೆ ನಿರ್ಮಿಸಿಕೊಳ್ಳಲು ವಿಳಂಬವಾಗಿ, ಬಳಿಕ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಫಲಾನುಭವಿಗಳು ಮನೆ ನಿರ್ಮಾಣದಲ್ಲಿ ತೊಡಗಿದ್ದಾರೆ. ಜಿಪಿಎಸ್ ಅಳವಡಿಕೆಯಾಗಿ 3 ತಿಂಗಳಾದರೂ ಕೆಲವರಿಗೆ 1ನೇ ಕಂತಿನ ಸಹಾಯಧನದ ಚೆಕ್ ದೊರೆತಿಲ್ಲ. ಪುರಸಭೆ ವಿಳಂಬ ನೀತಿಯಿಂದ ಬಡವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆಂದು ಆರೋಪಿಸಿದರು. ಧರಣಿ ಸತ್ಯಾಗ್ರಹ ಸ್ಥಳಕ್ಕೆ ಪ್ರಭಾರಿ ಮುಖ್ಯಾಧಿಕಾರಿ ಬಿ.ಟಿ. ಬಂಡಿವಡ್ಡರ್ ಧರಣಿ ನಿರತರ ಜೊತೆ ಮಾತನಾಡಿ, ವಾಜಪೇಯಿ ವಸತಿ ಯೋಜನೆ ಅಡಿ ಆಯ್ಕೆಯಾದ 1386 ಫಲಾನುಭವಿಗಳಲ್ಲಿ 699 ಮನೆಗಳ ಜಿಪಿಎಸ್ ಮಾಡಿದೆ. 193 ಫಲಾನುಭವಿಗಳಿಗೆ ಚೆಕ್ ವಿತರಿಸಿದೆ. 107 ಫಲಾನುಭವಿಗಳ 2ನೇ ಕಂತಿನ ಚೆಕ್ ವಿತರಿಸುತ್ತಿದ್ದೇವೆ. ಉಳಿದ ಫಲಾನುಭವಿಗಳಿಗೆ ಕ್ರಮೇಣ ವಿತರಿಸುತ್ತೇವೆ. ಚುನಾವಣಾ ನೀತಿ ಸಂಹಿತೆಯಿಂದ ವಿಳಂಬವಾಗಿದೆ ಎಂದರು. ಕೆಲ ಫಲಾನುಭವಿಗಳಿಗೆ ಸ್ಥಳದಲ್ಲೇ ಚೆಕ್ ವಿತರಿಸಿದರು. ನಾಯಕ ಶಿವರಾಜ ಘೋರ್ಪಡೆ, ಶ್ರೀಧರ ಗಂಜಿಗೌಡ್ರ, ದಾದು ಹಣಗಿ, ಸಿ.ವಿ. ಕುಲಕರ್ಣಿ, ಪೀರು ರಾಠೋಡ, ಬಾಲು ರಾಠೋಡ, ಬಿ.ಎಸ್. ಶೀಲವಂತರ, ಮಾರುತಿ ಚಿಟಗಿ, ಫಯಾಜ ತೋಟದ, ಬಾಲಕೃಷ್ಣ ಜಾಡಬಂಡಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

