ಮನೋವಿಕಾಸಕ್ಕೆ ಎನ್ನೆಸ್ಸೆಸ್ ಪೂರಕ: ಕಟ್ಟಿಮನಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಏ. 24
ದಾರಿದ್ರ್ಯ, ಮೌಢ್ಯ, ಅಜ್ಞಾನಗಳ ಅಂಧಕಾರದಲ್ಲಿ ಹೊರಳಾಡುತ್ತಿರುವ ಭಾರತೀಯರ ಉದ್ಧಾರಕ್ಕಾಗಿ ನಾವೆಲ್ಲ ಸಂಕಲ್ಪ ಬದ್ಧರಾಗಬೇಕೆಂದು ಪಿಎಸ್ಐ ಆರ್.ಎಚ್. ಕಟ್ಟಿಮನಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗುರುವಾರ ಪಟ್ಟಣದ ಶ್ರೀ ಜಗದ್ಗುರು ಫಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ 2013-14ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್ಎಸ್ಎಸ್ ಚಟುವಟಿಕೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಯುವಕರು, ವಿದ್ಯಾರ್ಥಿಗಳು ಜಾಗೃತರಾಗಬೇಕಾಗಿದೆ ಎಂದರು. ವಿದ್ಯಾರ್ಥಿಗಳು ನಾಲ್ಕು ಗೋಡೆಯ ಮಧ್ಯೆದಲ್ಲಿ ಶಿಕ್ಷಣ ಕಲಿತ ಮಾತ್ರಕ್ಕೆ ಶಿಕ್ಷಣ ಪರಿಪೂರ್ಣವಾಗದು. ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯೂ ಸಾಧ್ಯವಾಗಬೇಕಾದರೆ ಕ್ರೀಡೆ, ಸಾಂಸ್ಕೃತಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮನೋ ದೌರ್ಬಲ್ಯಗೊಂಡು ಮೈಗಳ್ಳರಾಗುತ್ತಾರೆ. ವಿದ್ಯಾರ್ಥಿಗಳೆಲ್ಲರ ದೇಹ, ಬುದ್ಧಿ, ಮನಸ್ಸು ಸರ್ವಾಭಿಮುಖ ಬೆಳವಣಿಗೆ ಸಾಧಿಸಲೆಂದೇ ಶಾಲಾ, ಕಾಲೇಜುಗಳಲ್ಲಿ ಎನ್ಎಸ್ಎಸ್, ಸ್ಕೌಟ್ಸ್, ಗೈಡ್ಸ್, ಎಸ್ಸಿಸಿ, ಸೇವಾದಳದಂತಹ ಸಂಘಟನೆಗಳ ಬಗ್ಗೆ ತಿಳಿಸಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ಜಗತ್ತಿನ ಜ್ಞಾನ ಪರ್ವತದಷ್ಟು ವಿಶಾಲವಾಗಿದ್ದು, ಇದನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳು ಜ್ಞಾನದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಮಸ್ಯೆಗಳ ಮಧ್ಯೆಯೂ ಛಲಬಿಡದೇ ಸಾಧನೆಗೆ ಮುಂದಾಗಬೇಕು. ಎನ್ಎಸ್ಎಸ್ ಘಟಕವು ಯುವ ಶಕ್ತಿಯ ಸದುಪಯೋಗದ ಸಂಗಮ ಎಂದ ಅವರು, ವಿದ್ಯಾರ್ಥಿಗಳು ತಮ್ಮ ಅಂತರಂಗದಲ್ಲಿ ಸೂಕ್ತವಾಗಿರುವ ವಿಶ್ವ ಸಮ್ಮತವಾದ ವಿಚಾರಗಳನ್ನು ಹೊರಸೂಸುವುದರೊಂದಿಗೆ ಸಮಾಜಕ್ಕೆ ಸ್ಪಂದಿಸವಲ್ಲಿ ಸಹಕಾರಿಯಾಗಬಲ್ಲದು ಎಂದರು. ಇಂದಿನ ಶಿಕ್ಷಣ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಕ್ತಿ ಸಾಮರ್ಥ್ಯದ ಮಹತ್ವ ಅರಿಯದೇ ಅಮೂಲ್ಯವಾದ ಅವರ ಶಕ್ತಿ ದುರುಪಯೋಗವಾಗುತ್ತದೆ. ಅಲ್ಲದೆ ಅವರಲ್ಲಿರುವ ಉದ್ಧಟತನವೆಂಬ ಮನೋರೋಗದಿಂದ ಶಿಕ್ಷಣ ಕ್ಷೇತ್ರವೆಂಬ ಪವಿತ್ರತೆ ನಾಶ ಹೊಂದುತ್ತದೆ. ವಿದ್ಯಾರ್ಥಿಗಳಲ್ಲಿರುವ ಈ ಗುಣ ಹೋಗಲಾಡಿಸಿ ಗೌರವ, ಸತ್ಯ, ಅಹಿಂಸೆ, ತ್ಯಾಗ, ಪ್ರಾಮಾಣಿಕತೆ, ಧೈರ್ಯ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ಎನ್ಎಸ್ಎಸ್ ಘಟಕವು ಮಹತ್ತರ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಪ್ರಾಚಾರ್ಯ ವಿ.ಪಿ. ಸಮೋರೆಕರ, ಪಂಪಾಪತಿರಡ್ಡಿ ಪಿ. ಪಾಟೀಲ, ಎಸ್.ಎಚ್. ಬಡೇಖಾನ್ನವರ, ಅನುಪಮ, ಸಂತೋಷ ಮುರಶಿಳ್ಳಿ, ಶಿವಲೀಲಾ ಉಳ್ಳಾಗಡ್ಡಿ, ಹನುಮಂತ ತಳ್ಳಳ್ಳಿ, ಫಜಲ್ ಖತೀಬ, ಶಿವಾನಂದ ಕೊರವರ, ಕವಿತಾ ಮುಗಳಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

