ಗದಗ

48 ಗಂಟೆಯಲ್ಲಿ 25 ಎಕರೆ ನೇಗಿಲು ಹೊಡೆದ!

Published On :

ನರಗುಂದ: ತಾಲೂಕಿನ ರೈತರು ಕೃಷಿ ಕಾಯಕದಲ್ಲಿ ಹಲವು ಸಾಧನೆ ಮಾಡಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಹುಣಸಿಕಟ್ಟಿ ಗ್ರಾಮದ ಚನ್ನಪ್ಪ ಚಲವಾದಿ ದಾಖಲೆ. ಟ್ರ್ಯಾಕ್ಟರ್ ಮೂಲಕ ಸತತ 48 ಗಂಟೆ ಕಾಲ 25 ಎಕರೆ ಜಮೀನು ನೇಗಿಲು ಹೊಡೆದು ಅಚ್ಚರಿ ಮೂಡಿಸಿದ್ದಾನೆ.
ಬಡ ಕುಟಂಬದ ಚನ್ನಪ್ಪ ಚಲವಾದಿ ಗ್ರಾಮದ ಮಲ್ಲನಗೌಡ ಪಾಟೀಲ್ ಎಂಬುವರ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ನಿರ್ವಹಿಸಿ, ಕುಟುಂಬ ಪೋಷಣೆ ಮಾಡುತ್ತಿದ್ದ. ತನ್ನ ಕಾಯಕದಲ್ಲೇ ದೊಡ್ಡ ಸಾಧನೆ ಮಾಡಬೇಕೆಂಬ ಹಂಬಲದಿಂದ ಈ ಸಾಹಸ ಪ್ರದರ್ಶಿಸಿದ್ದಾನೆ.
ಅವಿರತ ಪ್ರಯತ್ನ: ಈ ಭಾಗದಲ್ಲಿ ಪ್ರತಿ ಬೇಸಿಗೆಯ ಹಂಗಾಮು ಪ್ರಾರಂಭವಾಗುತ್ತಿದ್ದಂತೆ ಬಹುತೇಕ ರೈತರು ತಮ್ಮ ನೀರಾವರಿ ಜಮೀನು ಭರಪೂರ ಫಸಲು ನೀಡಲಿ ಎಂದು ಟ್ರ್ಯಾಕ್ಟರ್ ಮೂಲಕ ನೇಗಿಲು ಹೊಡಿಸಿ ಸ್ವಚ್ಛ ಮಾಡುತ್ತಾರೆ. ಒಂದು ಎಕರೆ ನೇಗಿಲು ಹೊಡೆಯಲು ಕನಿಷ್ಠ ಮೂರು ತಾಸು ಬೇಕು. ಅಷ್ಟರೊಳಗೇ 3-4 ಬಾರಿ ಟ್ರ್ಯಾಕ್ಟರ್ ನಿಲ್ಲಿಸಿ, ವಿಶ್ರಾಂತಿ ಪಡೆಯುವುದು ವಾಡಿಕೆ. ಇದನ್ನು ಲೆಕ್ಕ ಹಾಕಿದರೆ, 25 ಎಕರೆ ಜಮೀನು ನೇಗಿಲು ಹೊಡೆಯಲು ಚನ್ನಪ್ಪಗೆ 75 ತಾಸು ಬೇಕಿತ್ತು. ಆದರೆ, ಕೇವಲ 48 ಗಂಟೆಗಳಲ್ಲಿ ಈ ಸಾಧನೆ ಮಾಡಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ಸಹಕಾರ ದೊಡ್ಡದು: ಮಾಲೀಕರಿಗೆ ತಿಳಿಸಿ, ನೇಗಿಲು ಪ್ರಾರಂಭ ಮಾಡಿದಾಗನಿಂದ ಗ್ರಾಮದ ಜನತೆ ಚಲಿಸುವ ಟ್ರ್ಯಾಕ್ಟರ್‌ಗೆ ಡೀಸೆಲ್, ಆಯಿಲ್ ಹಾಕಿದ್ದಾರೆ. ಕುಡಿಯಲು ಹಾಲು, ತಿನ್ನಲು ಹಣ್ಣು ಕೊಟ್ಟು ಪ್ರೋತ್ಸಾಹಿಸಿದ್ದಾರೆ. ಇದರಿಂದಾಗಿ ಸಾಧನೆ ಮಾಡುವುದು ಸುಲಭವಾಯಿತೆಂದು ಚನ್ನಪ್ಪ ಕೃತಜ್ಞತೆಯಿಂದ ಹೇಳುತ್ತಾನೆ. ಈ ಸಾಹಸ ನೋಡಲು ಸುತ್ತಲಿನ ಗ್ರಾಮಗಳಿಂದ ಜನಸಾಗರವೇ ಹರಿದು ಬಂದಿತ್ತು.
- ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.