ಬೇವಿನಕಟ್ಟಿ: ಎಲ್ಲೆಡೆ ಕಸ, ಕೊಳಚೆ ನೀರು
ಗಜೇಂದ್ರಗಡ: ಎಲ್ಲೆಂದರಲ್ಲಿ ಕಸದ ರಾಶಿಗಳ ಗುಡ್ಡೆ, ರಸ್ತೆ ಪಕ್ಕದಲ್ಲಿ ಅಗೆದ ಚರಂಡಿ ಗುಂಡಿಯಲ್ಲಿ ರಾರಾಜಿಸುವ ಕೊಳಚೆ ನೀರು, ನೈರ್ಮಲ್ಯಕ್ಕೆ ಸಂಚಕಾರ, ಆತಂಕದಲ್ಲಿ ಗ್ರಾಮಸ್ಥರು. ಇದು ಸಮೀಪದ ಸೂಡಿ ಗ್ರಾಪಂ ವ್ಯಾಪ್ತಿಯ ಬೇವಿನಕಟ್ಟಿ ಗ್ರಾಮದ ದುಸ್ಥಿತಿಯ ಚಿತ್ರಣ.
ಗ್ರಾಮದ ಚರಂಡಿ ನಿರ್ಮಾಣಕ್ಕಾಗಿ ರಸ್ತೆ ಬದಿ ಗುಂಡಿ ಅಗೆದು ಹಲವಾರು ತಿಂಗಳು ಗತಿಸಿವೆ. ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಗಟಾರು ನೀರು ಸರಾಗವಾಗಿ ಹರಿಯದೇ ನಿಂತಲ್ಲೇ ನಿಂತು ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ. ಇನ್ನೊಂದೆಡೆ ಚರಂಡಿ ನಿರ್ಮಾಣಕ್ಕೆ ಅಗೆದ ಗುಂಡಿಗೆ ಹೊಂದಿಕೊಂಡು ಶಾಲಾ ಕಟ್ಟಡವಿದ್ದು ಇದೀಗ ಕೊಳಚೆ ನೀರು ಶಾಲಾ ಕಟ್ಟಡದ ತಳಪಾಯಕ್ಕೆ ಸೇರಿ ಶಾಲಾ ಕಟ್ಟಡಕ್ಕೆ ಧಕ್ಕೆಯಾಗುವ ಭೀತಿ ಜನರನ್ನು ಕಾಡುತ್ತಿದೆ.
ಯೋಜನೆಗಳು ಫಲ ತಲುಪಿಲ್ಲ: ಸರ್ಕಾರ ಗ್ರಾಮಗಳ ಶುಚಿತ್ವ ಕಾಪಾಡಲು ಹಾಗೂ ಗ್ರಾಮಸ್ಥರ ಆರೋಗ್ಯ ರಕ್ಷಣೆ, ನೈರ್ಮಲ್ಯಕ್ಕಾಗಿ ಗ್ರಾಪಂ ಮೂಲಕ ಕೋಟ್ಯಂತರ ರು. ಹಣ ವೆಚ್ಚ ಮಾಡುತ್ತಿದೆ. ಆದರೆ, ಅಂತಹ ಯೋಜನೆಗಳು ಫಲ ವಾಸ್ತವವಾಗಿ ಬೇವಿನಕಟ್ಟಿ ಜನತೆಗೆ ತಲುಪಿಲ್ಲ ಎಂಬುದಕ್ಕೆ ಈ ಗ್ರಾಮದ ಹಲವಾರು ಜ್ವಲಂತ ಸಮಸ್ಯೆಗಳ ಚಿತ್ರಣಗಳು ಸಾಕ್ಷಿಯಾಗಿವೆ.
ಗ್ರಾಮದಲ್ಲಿ ಓಣಿಯ ಗಲೀಜು ನೀರು ರಸ್ತೆಗೆ ನುಗ್ಗಿ ದುರ್ನಾತ ಹರಡುತ್ತಿದೆ. ರಸ್ತೆಯಲ್ಲಿ ಹರಿಯುವ ಗಲೀಜು ನೀರಿನಿಂದ ಜನರು ನಿತ್ಯ ಮೂಗು ಮುಚ್ಚಿಕೊಂಡು ನಡೆದಾಡುವ ದುಸ್ಥಿತಿ ಎದುರಾಗಿದೆ. ಇಷ್ಟಾದರೂ ಗ್ರಾಪಂ ಸದಸ್ಯರು ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದೇ ತೆಪ್ಪಗೆ ಕುಳಿತ್ತಿದ್ದಾರೆ. ಇನ್ನೊಂದೆಡೆ ಸೂಡಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಈ ಗ್ರಾಮದ ಶಾರದಾ ಆಡಿನ ಗ್ರಾಪಂ ಉಪಾಧ್ಯಕ್ಷೆ. ಆದರೆ, ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವು ನಡೆದಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
ಜನರ ಆರೋಗ್ಯಕ್ಕೂ ಕುತ್ತು: ಗ್ರಾಮ ಎಲ್ಲ ಚರಂಡಿಯಿಂದ ಹರಿದು ಬರುವ ಕೊಳಚೆ ನೀರು ದೊಡ್ಡ ಚರಂಡಿ ತುಂಬಿ ರಸ್ತೆ ಮೇಲೆ ಹರಿದು ಗಬ್ಬೆದ್ದು ನಾರುತ್ತಿದ್ದರೂ ಯಾರೂ ಕೇಳುವರಿಲ್ಲದಂತಾಗಿದೆ. ಸೃಷ್ಟಿಯಾಗಿರುವ ಇಂತಹ ದುರ್ಬಲಾವಸ್ತೆಗೆ ಶಾಶ್ವತ ಪರಿಹಾರ ಇಲ್ಲವೇ ಎನ್ನುವ ಪ್ರಶ್ನೆ ನಿವಾಸಿಗಳನ್ನು ಕಾಡುತ್ತಿದೆ. ಬೀದಿಯಲ್ಲಿ ಚರಂಡಿ ತುಂಬಿ ಹರಿದಾಗ ಸುತ್ತಲಿನ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದರೂ ಯಥಾಸ್ಥಿತಿ ನಿರ್ಮಾಣವಾಗಿದೆ.
ಉಗ್ರ ಪ್ರತಿಭಟನೆಯ ಎಚ್ಚರಿಕೆ
ಚರಂಡಿ ತುಂಬಿ ಹರಿದು ರಸ್ತೆ ಮೇಲೆಲ್ಲ ಹರಿದ ಪರಿಣಾಮ ಗಬ್ಬೆದ್ದು ನಾರುತ್ತಿದೆ. ಜನ, ವಾಹನಗಳು ಕೊಳಚೆಯಲ್ಲಿ ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡುವ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಂಡ ಪರಿಣಾಮ ಜನತೆಗೆ ತೊಂದರೆಯಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಗ್ರಾಮದಲ್ಲಿ ಮೂಲ ಸೌಲಭ್ಯ ಒದಗಿಸಲು ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಅನಿವಾರ್ಯ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
- ಡಿ.ಜಿ. ಮೋಮಿನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

