ಮುಂಡರಗಿ ಸಕ್ಕರೆ, ದಾಳಿಂಬೆ ಬೀಡಾಗಲಿದೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 1
ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವ ಮೂಲಕ ಅತಿ ಹಿಂದುಳಿದ ತಾಲೂಕು ಹಣೆಪಟ್ಟಿ ಅಳಿಸುವಷ್ಟು ಸಾಧನೆ ಮಾಡಿದ ಮುಂಡರಗಿ ತಾಲೂಕು ಸಿಂಗಟಾಲೂರು ಏತ ನೀರಾವರಿ ಪೂರ್ಣಗೊಂಡರೆ ಇಡಿ ತಾಲೂಕು ಹಸಿರು ನಾಡಾಗಿ, ಸಕ್ಕರೆ, ದಾಳಿಂಬೆ ಬೀಡಾಗಲಿದೆ ಎಂದು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಜಗದ್ಗುರು ತೋಂಟದಾರ್ಯ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ. ಶಾಲೆ ನೂತನ ಕಟ್ಟಡ, ತೋಂಟದಾರ್ಯ ಪದವಿಪೂರ್ವ ವಿಜ್ಞಾನ ಕಾಲೇಜು ಉದ್ಘಾಟಿಸಿ ಮಾತನಾಡಿದರು.
ಜಗದ್ಗುರು ತೋಂಟದಾರ್ಯ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ. ಶಾಲೆ ನೂತನ ಕಟ್ಟಡ, ತೋಂಟದಾರ್ಯ ಮಠದ ಮಹಾದ್ವಾರ ಉದ್ಘಾಟಿಸಿದ ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ನಮ್ಮೆಲ್ಲರ ಏಳ್ಗೆಗೆ ಶಿಕ್ಷಣ ಅತಿ ಅವಶ್ಯ. ನಮ್ಮ ಜ್ಞಾನ ಪರಂಪರೆ ಹೆಚ್ಚಳಕ್ಕೆ ಇಂಗ್ಲಿಷ್ ಭಾಷೆ ಅಗತ್ಯವಿದೆ. ನಮ್ಮ ಭಾಷೆ ಪೂಜಿಸುವ ಜೊತೆಗೆ ಇಂಗ್ಲಿಷ್ ಭಾಷೆ ಗೌರವದಿಂದ ಕಾಣಬೇಕು. ವಿಜ್ಞಾನ-ಅಧ್ಯಾತ್ಮಕ್ಕೆ ಸಂಬಂಧವಿಲ್ಲ. ವಿಜ್ಞಾನ ಕಲಿತಷ್ಟು ಧರ್ಮ, ಅಧ್ಯಾತ್ಮ, ದೈವ ಬಗ್ಗೆ ತಿಳಿಯುತ್ತ ಹೋಗುತ್ತದೆ. ಧರ್ಮ, ವಿಜ್ಞಾನ ಎರಡೂ ಬೇಕು. ಧರ್ಮವಿಲ್ಲದ ವಿಜ್ಞಾನ ಯಾವತ್ತೂ ಸರಿದಾರಿಗೆ ಒಯ್ಯುವುದಿಲ್ಲ. ನಾವೆಲ್ಲ ಗಿಡಮರಗಳನ್ನು ರಕ್ಷಿಸುವ ಕೆಲಸ ಸಾಗರೋಪಾದಿಯಲ್ಲಿ ನಡೆಯಬೇಕು. ಅದಾಗದಿದ್ದರೆ ಮನುಕುಲಕ್ಕೆ ಉಳಿವಿಲ್ಲ. ಕನ್ನಡದ ಜಗದ್ಗುರು ಖ್ಯಾತಿಯ ಗದುಗಿನ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಸೇವೆ ಅನನ್ಯ. ಕುವೆಂಪು ಸಾಹಿತ್ಯವನ್ನು ನಾಡಿನ ಉದ್ದಗಲಕ್ಕೂ ಪಸರಿಸಿದ ಕೀರ್ತಿ ಶ್ರೀಗಳಿಗಿದೆ ಎಂದರು.
ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲವೇ ತಿಂಗಳಲ್ಲಿ ಸಿಂಗಟಾಲೂರ ಏತ ನೀರಾವರಿ ಯೋಜನೆಯಿಂದ 12000 ಎಕರೆ ಪ್ರದೇಶ ನೀರಾವರಿಯಾಗಲಿದೆ. ಗದಗ ಜಿಲ್ಲೆಯ 352 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ # 1030.60 ಕೋಟಿ ವೆಚ್ಚದ ಯೋಜನೆಯನ್ನು ಸಚಿವ ಎಚ್.ಕೆ. ಪಾಟೀಲ ತಂದಿದ್ದಾರೆ. ಅದರಿಂದ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ಪರಿಹಾರವಾಗಲಿದೆ ಎಂದರು.
ನಿಜಗುಣಾನಂದ ಶ್ರೀ, ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ ಮಾತನಾಡಿದರು. ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಚಿವ ಎಚ್.ಕೆ. ಪಾಟೀಲ, ಆದಿಚುಂಚನಗಿರಿ ಶ್ರೀಗಳಿಗೆ ಪುರಸಭೆಯಿಂದ ಪೌರಸನ್ಮಾನ ನಡೆಯಿತು.
ಪುರಸಭಾಧ್ಯಕ್ಷೆ ಭಾರತಿ ಹಕ್ಕಿ, ಉಪಾಧ್ಯಕ್ಷ ಸೋಮನಗೌಡ ಗೌಡ್ರ, ಸದಸ್ಯರು, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ, ವಾಸಣ್ಣ ಕುರಡಗಿ, ಡಿಡಿಪಿಐ ಬಿ.ವಿ. ರಾಜೇಂದ್ರಪ್ರಸಾದ, ಡಿಡಿಪಿಯು ಎಸ್.ಬಿ. ಗೌಡರ, ಬಿಇಒ ಎಂ.ಎ. ರಡ್ಡೇರ, ಈಶ್ವರಪ್ಪ ಹಂಚಿನಾಳ, ನಾರಾಯಣಪ್ಪ ಇಲ್ಲೂರ, ನಾಗೇಶ ಹುಬ್ಬಳ್ಳಿ, ಧ್ರುವಕುಮರ ಹೊಸಮನಿ, ಕೊಟ್ರೇಶ ಅಂಗಡಿ, ಅಶೋಕ ಹುಬ್ಬಳ್ಳಿ, ಕಲ್ಲಯ್ಯ ಹಿರೇಮಠ, ಡಿ.ಡಿ. ಮೋರನಾಳ, ಪ್ರಾಚಾರ್ಯ ಮಹೇಶ ಮಾಲಗತ್ತಿ, ಸೊಲಬಣ್ಣ ಜೋಬಾಳಿ ಇತರರಿದ್ದರು.
ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಸ್ವಾಗತಿಸಿ, ಪ್ರೊ. ಎಸ್.ಎನ್. ಆದಿ ನಿರೂಪಿಸಿದರು. ಮೃತ್ಯುಂಜಯ ಹಿರೇಮಠ ವಚನಹಾಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

