ಮೋದಿ ಸ್ವಾಭಿಮಾನಿ ಭಾರತದ ಸಂಕೇತ: ವಿಪ ಸದಸ್ಯ ಭಾಂಡಗೆ
ಕನ್ನಡಪ್ರಭ ವಾರ್ತೆ, ಗದಗ, ಫೆ. 2
ಸ್ವಾಭಿಮಾನಿ ಭಾರತ ನಿರ್ಮಾಣ ಗುರಿಯೊಂದಿಗೆ ಅಭಿವೃದ್ಧಿಯ ಸಂಕೇತವಾದ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿ ಸ್ಥಾನಕ್ಕೆ ಆಯ್ಕೆಗೊಳಿಸುವ ನಿಟ್ಟಿನಲ್ಲಿ ಸರ್ವರೂ ಒಂದಾಗಿ ಸಾಗುವ ಸಂಕಲ್ಪ ತೊಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.
ಅವರು ನಗರದ ಜ. ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಸ್ವಾಭಿಮಾನಿ ಸಮಾವೇಶದ ಎಸ್‌ಸಿ, ಎಸ್‌ಟಿ ಸ್ಲಂ ಹಾಗೂ ಹಿಂದುಳಿದ ವರ್ಗದ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಫೆ. 23ರಂದು ತುಮಕೂರಿನಲ್ಲಿ ನಡೆಯುತ್ತಿರುವ ಸ್ವಾಭಿಮಾನಿ ಸಮಾವೇಶ ಕೇವಲ ಸಮಾವೇಶವಾಗಿರದೇ ಬದಲಾವಣೆ ಬಯಸುತ್ತಿರುವ ಜನರಿಗೆ ದಿಕ್ಸೂಚಿಯಾಗಲಿದೆ. ಕಳೆದ 5 ವರ್ಷದ ಬಿಜೆಪಿ ಅಧಿಕಾರದಲ್ಲಿ ಗದಗ ಸೇರಿದಂತೆ ರಾಜ್ಯದೆಲ್ಲೆಡೆ ಹಲವಾರು ಅಭಿವೃದ್ಧಿಪರ ಕಾರ್ಯಗಳು ಜರುಗಿವೆ. ಪಕ್ಷದ ನಾಯಕರಲ್ಲಿದ್ದ ಗೊಂದಲ ಮತದಾರನ ಮುನಿಸಿಗೆ ಕಾರಣವಾಗಿದ್ದು, ಪರಾಭವಕ್ಕೆ ಕಾರಣವಾಯಿತು ಎಂದರು.
ತತ್ವ ಸಿದ್ಧಾಂತಗಳೊಂದಿಗೆ ಕಾರ್ಯಕರ್ತರೇ ಕಟ್ಟಿ ಬೆಳೆಸಿದ ಪಕ್ಷ ಬಿಜೆಪಿಯಾಗಿದ್ದು, ಕೇವಲ ಅಧಿಕಾರಕ್ಕಾಗಿ ಹುಟ್ಟಿಕೊಂಡ ಪಕ್ಷವಲ್ಲ. ಜನ ಬದಲಾವಣೆ ಬಯಸಿ ಪರಿವರ್ತನೆಗೆ ಸಿದ್ಧತೆ ನಡೆಸುತ್ತಿದ್ದು, ನರೇಂದ್ರ ಮೋದಿ ಭವಿಷ್ಯದ ಆಶಾಕಿರಣವಾಗಿದ್ದಾರೆ. ಮುಂಬರುವ 60 ದಿನಗಳ ಕಾಲ ಕಾರ್ಯಕರ್ತರು ಪಡುವ ಶ್ರಮ 60 ತಿಂಗಳ ಅಧಿಕಾರಕ್ಕೆ ಪ್ರೇರಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಸಿದ್ಧಾಂತಗಳು ಹಾಗೂ ಮೋದಿ ಜನಪರ ಕಾರ್ಯಗಳ ಕುರಿತು ಸಾರ್ವಜನಿಕರಿಗೆ ತಿಳಿಹೇಳುವ ಕಾರ್ಯಕ್ಕೆ ಕಾರ್ಯಕರ್ತ ಪಡೆ ಸನ್ನದ್ಧಗೊಳ್ಳಬೇಕಿದೆ ಎಂದರು.
ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ರಾಮಣ್ಣ ಲಮಾಣಿ, ರಾಜು ಕುರಡಗಿ, ಎಂ.ಎಸ್. ಕರಿಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಬಿಜೆಪಿ-ಕೆಜೆಪಿ ವಿಲೀನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಜಿಲ್ಲಾ ಕೆಜೆಪಿ ಅಧ್ಯಕ್ಷ ರಾಜು ಕುರಡಗಿ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಕಾರ್ಯಕರ್ತರು ಕೆಜೆಪಿಯಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಕಾಂತ ಖಟವಟೆ, ಕಾಂತಿಲಾಲ ಬನ್ಸಾಲಿ, ಎಂ.ಎಂ. ಹಿರೇಮಠ, ಶ್ರೀನಿವಾಸ ಹುಬ್ಬಳ್ಳಿ, ಅರವಿಂದ ಹುಲ್ಲೂರ, ನಾಮದೇವ ಚಿಕ್ಕಣ್ಣವರ, ಚಂದ್ರು ತಡಸದ, ಅನಿಲ ಅಬ್ಬಿಗೇರಿ, ಶಹರ ಬಿಜೆಪಿ ಅಧ್ಯಕ್ಷ ಈಶಣ್ಣ ಮುನವಳ್ಳಿ, ಪರಶುರಾಮ ಹೆಬಸೂರ, ಸಿರಾಜ ಬಳ್ಳಾರಿ, ಲಕ್ಷ್ಮಣ ದೊಡ್ಡಮನಿ, ವಿಜಯಲಕ್ಷ್ಮಿ ಅಂಗಡಿ, ದಾನು ದಾನಪ್ಪಗೌಡ್ರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

