ಗದಗ

ಯೋಧನ ಕುಟುಂಬಕ್ಕೆ ದೊರೆಯದ ನೌಕರಿ

Published On :

ಕನ್ನಡಪ್ರಭ ವಾರ್ತೆ, ಗದಗ, ಜ. 2
2013ರಲ್ಲಿ ಉತ್ತರಾಖಂಡ್ ಜಲಪ್ರಳಯದಲ್ಲಿ ಸಿಲುಕಿದ್ದ ಸಂತ್ರಸ್ತರ ರಕ್ಷಣೆಗೆಂದು ತೆರಳಿದ್ದ ಹೆಲಿಕಾಪ್ಟರ್ ಪತನವಾಗಿ 19 ಜನರು ಅಸುನೀಗಿದರು. ಈ ದುರಂತದಲ್ಲಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಜಗಾಪುರ ಗ್ರಾಮದ ಬಸವರಾಜ ಯರಗಟ್ಟಿ ಎಂಬ ಯೋಧ ಪ್ರಾಣತೆತ್ತಿದ್ದು, ಅವನ ಅಂತ್ಯ ಸಂಸ್ಕಾರದ ವೇಳೆಯಲ್ಲಿ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಸರ್ಕಾರ ಭರವಸೆ ನೀಡಿದ್ದು, ಇಂದಿಗೂ ಅದು ಭರವಸೆಯಾಗಿಯೇ ಉಳಿದಿದೆ.
ಬಸವರಾಜನದ್ದು ಬಡತನ ಕುಟುಂಬ. ತಂದೆ ತುಳಸಪ್ಪ, ತಾಯಿ ಗಿರಿಜವ್ವ ಗ್ರಾಮದ ರೈತರ ಹೊಲಗಳಲ್ಲಿ ಕೃಷಿ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದಾರೆ. ಈ ದಂಪತಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದರು. ಮೊದಲನೆಯ ಮಗನೇ ಈ ಬಸವರಾಜ. 2007ನೇ ಸಾಲಿನಲ್ಲಿ ಐಟಿಬಿಪಿ ಬಟಾಲಿಯನ್‌ನಲ್ಲಿ ಸೇನೆಗೆ ಭರ್ತಿಯಾಗಿ ನೌಕರಿ ಸೇರಿದಾಗ ತಂದೆ-ತಾಯಿಗೆ ಬಹಳ ಸಂತೋಷವಾಗಿತ್ತು. ನಮ್ಮ ಬಡತನ ಇನ್ನು ಮುಂದಾದರೂ ದೇವರು ದೂರ ಮಾಡಿದನೆಂಬ ಸಂತೃಪ್ತಿ ಅವರಿಗಿತ್ತು. ಆದರೆ, ಮಗ ಮೃತಪಟ್ಟಿದ್ದರಿಂದ ಅವರಿಗೆ ದಿಕ್ಕೇ ತೋಚದಂತಾಗಿದೆ. 7 ತಿಂಗಳಾದರೂ ಸರ್ಕಾರಿ ನೌಕರಿ ಲಭ್ಯವಾಗಿಲ್ಲ.
ಕಚೇರಿಗೆ ಅಲೆದು ಬೇಸತ್ತ ಕುಟುಂಬ: ಯೋಧನ ಅಂತ್ಯಕ್ರಿಯೆ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ಜಿಲ್ಲಾಡಳಿತ ಸರ್ಕಾರದ ಪರವಾಗಿ ಗೌರವ ಸಲ್ಲಿಸಿ, ಕುಟುಂಬದ ಇಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಲಾಗಿತ್ತು. ಮೃತ ಯೋಧನ ಸಹೋದರಿಯೋರ್ವಳು ಅಂಗವಿಕಲೆಯಾಗಿದ್ದು, ಅವಳಿಗೆ ಹಾಗೂ ಯೋಧನ ಪತ್ನಿ ಯಶೋದಾಳಿಗೂ ಸರ್ಕಾರಿ ನೌಕರಿ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಇದನ್ನೇ ನಂಬಿ ಕುಟುಂಬದ ಸದಸ್ಯರು ಸರ್ಕಾರಿ ನೌಕರಿಗಾಗಿ ನರಗುಂದ ತಹಸೀಲ್ದಾರ್ ಕಚೇರಿಗೆ ಅಲೆದು ಬೇಸತ್ತಿದ್ದಾರೆ.
ಮನವಿಗೆ ಸ್ಪಂದಿಸಿಲ್ಲ: ಮೃತ ಯೋಧನ ತಂದೆ ತುಳಸಪ್ಪ ತನ್ನ ಅಂಗವಿಕಲ ಮಗಳನ್ನು ಕರೆದುಕೊಂಡು ಹಲವಾರು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ನರಗುಂದ ತಹಸೀಲ್ದಾರ್‌ಗೆ ಖುದ್ದಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಇವರು ಕಚೇರಿಗೆ ಹೋದಾಗಲೆಲ್ಲ ನಾವು ನಮ್ಮ ಕೆಲಸ ಮಾಡಿದ್ದೇವೆ. ಇನ್ನುಳಿದ ಕೆಲಸ ಸರ್ಕಾರದ ಹಂತದಲ್ಲಿ ಆಗಬೇಕಿದೆ ಎಂದು ಸಾಗ ಹಾಕಿ ಕಳುಹಿಸಿದ್ದಾರೆ. ಇದು ಕುಟುಂಬಸ್ಥರಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದೆ.
ಸಚಿವರ ಮಾತಿಗಿಲ್ಲ ಕಿಮ್ಮತ್ತು: ಮೃತ ಯೋಧನ ದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಸಾಕಷ್ಟು ತೊಂದರೆ ಉಂಟಾಗಿ, ನಂತರ ಸೇನೆಯ ಹಿರಿಯ ಅಧಿಕಾರಿಗಳು ಡಿಎನ್‌ಎ ಪರೀಕ್ಷೆ ಮಾಡಿಸಿದರೂ ಯೋಧನ ದೇಹ ಮಾತ್ರ ಪತ್ತೆಯಾಗಲಿಲ್ಲ. ನಂತರ ಯೋಧನ ಬಟ್ಟೆಗಳನ್ನೇ ಅಂತ್ಯ ಸಂಸ್ಕಾರ ಮಾಡುವ ಮೂಲಕ ಜಿಲ್ಲಾಡಳಿತ ಅಂತಿಮ ಗೌರವ ಸಲ್ಲಿಸಿತು. ಈ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಕ್ಷಣವೇ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿ 7 ತಿಂಗಳು ಗತಿಸಿದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.
-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.