ಗದಗ

ಕಳಪೆ ಬೀಜ: ಅನಿರ್ದಿಷ್ಟಾವಧಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜ. 3
ಕಳಪೆ ಬಿಟಿ ಹತ್ತಿ ಬೀಜದಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಶುಕ್ರವಾರ ಪಟ್ಟಣದಲ್ಲಿ ಅನಿರ್ದಿಷ್ಟಾವಧಿ ಧರಣಿ  ಕೈಗೊಂಡಿದ್ದಾರೆ. ಮುಖ್ಯಮಂತ್ರಿಯವರೇ ರೈತರ ಬಳಿ ಬರಲಿ ಎಂದು ಪಟ್ಟು ಹಿಡಿದಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಸಾಗಿದ ರೈತರು ಬಸ್ ನಿಲ್ದಾಣದ ಎದುರು ಸ್ವಲ್ಪ ಹೊತ್ತು ರಸ್ತೆ ತಡೆ ನಡೆಸಿದರು. ಪೊಲೀಸ್ ಹಾಗೂ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು.
ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿ, ಸಭೆ ನಡೆಸಿದ ರೈತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಮಹಿಕೋ, ನಿಕ್ಕಿ ಪ್ಲಸ್, ಕನಕ, ಕಾವೇರಿ ಕಂಪನಿಗಳು ರೈತರಿಗೆ ನೀಡಿದ ಹತ್ತಿ ಬೀಜಗಳು ಕಳಪೆಯಾಗಿವೆ. ಇದನ್ನು ವಿರೋಧಿಸಿ ರಸ್ತೆ ತಡೆ, ಅನಿರ್ದಿಷ್ಟ ಕಾಲ ಧರಣಿ ನಡೆಸಲಾಗುವುದು. ಕಳೆಪೆ ಬೀಜ ಬಿತ್ತನೆ ಮಾಡಿ ಕೈ ಸುಟ್ಟಕೊಂಡ ರೈತರು ಆತ್ಮಹತ್ಯೆಯ ದಾರಿ ಹಿಡಿಯಬೇಕಾಗಿದೆ. ರೈತರು ಮಾಡಿದ ಬ್ಯಾಂಕ್ ಹಾಗೂ ಕೈಗಡ ಸಾಲ ತೀರಿಸಲಾಗದೆ ಒದ್ದಾಡುತ್ತಿದ್ದು, ಸರ್ಕಾರ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಭೇಟಿ
ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಹಾಗೂ ಮಾಜಿ ಶಾಸಕ ಬಿ.ಸಿ. ಪಾಟೀಲ, ಪ್ರತಿಭಟನೆ ಹಿಂಪಡೆಯುವಂತೆ ರೈತರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿ ಮಾತನಾಡಿ, ಶನಿವಾರ ಪಟ್ಟಣಕ್ಕೆ ಆಗಮಿಸುವ ಸಿಎಂಗೆ ಬೇಡಿಕೆ ಕುರಿತು ಮನವಿ ಸಲ್ಲಿಸಲು ರೈತರಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು. 15 ನಿಮಿಷ ಚರ್ಚೆಗೂ ಅವಕಾಶ ಕೊಡಿಸುವುದಾಗಿ ಬಿ.ಸಿ. ಪಾಟೀಲ ಹೇಳಿದರು. ಆದರೆ, ಇದಕ್ಕೆ ರೈತರು ಒಪ್ಪಲಿಲ್ಲ. ಸರ್ಕಾರ ರಚನೆಯಾಗಿ ಹಲವಾರು ತಿಂಗಳು ಗತಿಸಿದರೂ ರೈತರ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ. ಹಾರಿಕೆ ಉತ್ತರ, ಆಶ್ವಾಸನೆ ನೀಡುತ್ತಿದ್ದಾರಷ್ಟೇ. ರೈತರ ಪರವಾಗಿ ಕೆಲಸ ಮಾಡದೆ ವಂಚಿಸುತ್ತಿರುವ ಮುಖ್ಯಮಂತ್ರಿಗಳೇ ರೈತರ ಬಳಿ ಬರಲಿ ಎಂದು ರಾಮಣ್ಣ ಕೆಂಚಳ್ಳೇರ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಬಸನಗೌಡ ಗಂಗಪ್ಪನವರ, ಗೌರವಾಧ್ಯಕ್ಷ ಸೋಮಶೇಖಪ್ಪ ಚಪ್ಪರದಳ್ಳಿ, ಹಸಿರು ಸೇನೆ ತಾಲೂಕಾಧ್ಯಕ್ಷ ಮಹೇಶ ಕೊಟ್ಟೂರ, ರೈತರಾದ ಗಂಗನಗೌಡ ಮುದಿಗೌಡ್ರ, ಶಂಕರಗೌಡ ಮಕ್ಕಳ್ಳಿ, ಲೋಕಪ್ಪ ಹುಲ್ಲತ್ತಿ, ಶಂಕ್ರಗೌಡ ಶಿರಗಂಬಿ, ಒದನಗೌಡ ಸೊರಟೂರ, ಪ್ರಭುಗೌಡ ಪ್ಯಾಟಿ, ಶಾಂತನಗೌಡ ಪಾಟೀಲ, ಹೂವನಗೌಡ ಮಳವಳ್ಳಿ, ರುದ್ರಪ್ಪ ಆಣೂರ ವೆಂಕಟೇಶ ಸೇರಿದಂತೆ ನೂರಾರು ರೈತರು, ರೈತ ಮುಖಂಡರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.