ಗದಗ

ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಕ್ಕೆ ಆದ್ಯತೆ ನೀಡಿ

Published On :

ಕನ್ನಡಪ್ರಭ ವಾರ್ತೆ, ಗದಗ, ಜ. 3
ಸರ್ಕಾರ ಸಾಕಷ್ಟು ಸೌಲಭ್ಯ ನೀಡಬಹುದು ಆದರೆ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಶೌಚಾಲಯ ನಿರ್ಮಿಸಿಕೊಂಡು ಅದನ್ನು ಬಳಸಬೇಕೆಂದು ತಾಪಂ ಸದಸ್ಯ ಪ್ರಹ್ಲಾದ ಹೊಸಳ್ಳಿ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಅಡವಿಸೋಮಾಪುರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸ್ಥಳೀಯ ಗ್ರಾಪಂ ಸಹಕಾರದಲ್ಲಿ ಜರುಗಿದ ನಿರ್ಮಲ ಭಾರತ ಅಭಿಯಾನ ಯೋಜನೆ ಅಡಿ ಗ್ರಾಮಸ್ಥರಿಗೆ ಶೌಚಾಲಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಕ್ಷಾಂತರ ವೆಚ್ಚದಲ್ಲಿ ಮನೆ ನಿರ್ಮಿಸಿಕೊಂಡು ಅದರಲ್ಲಿ ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಪ್ರಯೋಜನವಿಲ್ಲ. ಟಿವಿ, ಮೊಬೈಲ್, ಬೈಕ್ ಮುಂತಾದ ವಸ್ತುಗಳನ್ನು ಪಡೆದುಕೊಂಡು ಆರೋಗ್ಯಕ್ಕಾಗಿ ಶೌಚಾಲಯ ನಿರ್ಮಿಸಿಕೊಳ್ಳದಿರುವುದು ದುರದೃಷ್ಟಕರ ಸಂಗತಿ. ಕುಟುಂಬದ ಮಹಿಳೆಯರ ಗೌರವ ಕಾಪಾಡುವುದು ಹಿರಿಯರ ಕರ್ತವ್ಯ. ಶೌಚಕ್ಕೆ ಬಯಲಿಗೆ ಹೋಗುವ ಸಂಸ್ಕೃತಿಯನ್ನು ನಾವು ತಪ್ಪಿಸಬೇಕು. ನಮ್ಮ ಅಂಗಳ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಮನೆಯ ಗರ್ಭಿಣಿಯರಿಗೆ, ಬಾಣಂತಿಯರಿಗೆ, ವೃದ್ಧರಿಗೆ, ಹದಿಹರೆಯದ ಹೆಣ್ಣು ಮಕ್ಕಳಿಗೆ, ಮಹಿಳೆಯರ ಮಾನ, ಮರ್ಯಾದೆ ಕಾಪಾಡುವುದು ಮಹತ್ವದ ಕಾರ್ಯವಾಗಿದೆ. ಇದನ್ನು ಕುಟುಂಬದ ಗೌರವಕ್ಕಾಗಿ ಹಿರಿಯರು, ಪ್ರಜ್ಞಾವಂತ ನಾಗರಿಕರು, ಯುವಕರು ಯೋಚಿಸಬೇಕು. ಶೌಚಾಲಯ ನಿರ್ಮಿರ್ಮಿಸಿಕೊಂಡು ಅದನ್ನು ಬಳಸುವುದರಿಂದ ಪರಿಸರ ಹಾಗೂ ಜನರ ಆರೋಗ್ಯ ಕಾಪಾಡಬಹುದು. ಶೌಚಾಲಯ ನಿರ್ಮಿಸಿಕೊಂಡರೆ ಸರ್ಕಾರ ಹಣ ಕೊಡಲಿ ಅಥವಾ ಬಿಡಲಿ ನಮಗೋಸ್ಕರವಾಗಿ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದರು.
ಜಿಪಂ ಯೋಜನಾ ನಿರ್ದೇಶಕ ಟಿ. ದಿನೇಶ ಮಾತನಾಡಿ, ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆಗಳು ಹಾಗೂ ರಸ್ತೆಯ ಬದಿ ಶೌಚ ಸ್ಥಳಗಳಾಗಿ ಪರಿಣಮಿಸಿರುವುದು ನೋವಿನ ಸಂಗತಿ. ಸ್ವಚ್ಛತೆ ವಿಷಯಕ್ಕೆ ನಾವು ಹೆಚ್ಚಿನ ಗಮನ ನೀಡಬೇಕು. ಸರ್ಕಾರ ನಿರ್ಮಲ ಭಾರತ ಅಭಿಯಾನ ಯೋಜನೆ ಅಡಿ ರು. 4700 ಪ್ರೋತ್ಸಾಹಧನ ಜತೆಗೆ ಕೇಂದ್ರ ಸರ್ಕಾರದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ರು. 4500 ನೀಡಲಾಗುವುದು. ಇನ್ನೂ ಪರಿಶಿಷ್ಟ ಜಾತಿ ಜನಾಂಗಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ರು. 5 ಸಾವಿರ ನೀಡಲಾಗುವುದು. ಒಟ್ಟಾರೆಯಾಗಿ ಶೌಚಾಲಯಗಳನ್ನು ನಿರ್ಮಿಸಿ ಅವುಗಳನ್ನು ಬಳಸಿದರೆ ಅದರಿಂದ ಆಗುವ ಪ್ರಯೋಜನಗಳನ್ನು ಜನರಿಗೆ ತಿಳಿಸಿದರು.
ಗ್ರಾಪಂ ಪಿಡಿಒ ಅಶ್ವಿನಿ ಕುರಡಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಮೇಶ ಲಮಾಣಿ, ಉಪಾಧ್ಯಕ್ಷೆ ನಾಗವ್ವ ಹುಡೇದ, ಸದಸ್ಯ ಚನ್ನಪ್ಪ ಅಂಗಡಿ, ಫಕೀರಪ್ಪ ಜಡಿ, ಮಲ್ಲಪ್ಪ ಹೊಸಳ್ಳಿ, ತಿಮ್ಮರೆಡ್ಡಿ ವಡ್ಡರ, ಮಾಬುಸಾಬ್ ಹರಿವಾಣ ಮುಂತಾದವರು ಉಪಸ್ಥಿತರಿದ್ದರು. ತುಕಾರಾಮ ಹುಲಗಣ್ಣವರ ಸ್ವಾಗತಿಸಿ, ನಿರೂಪಿಸಿದರು. ಹನುಮಂತ ಹೊಂಬಳ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.