ಅಂಗವಿಕಲರಿಗೆ ದೊರೆಯದ ಸಹಾಯಧನ
ಶಿರಹಟ್ಟಿ: ಸರ್ಕಾರ ಅಂಗವಿಕಲರಿಗೆ ಶೈಕ್ಷಣಿಕ, ವೈದ್ಯಕೀಯ, ಕ್ರೀಡೆ ಅವರ ಶ್ರೇಯೋಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಗೆ ಬಂದ ಅಭಿವೃದ್ಧಿ ಅನುದಾನದಲ್ಲಿ ಶೇ. 3ರಷ್ಟು ಹಣವನ್ನು ಅಂಗವಿಕಲ ಫಲಾನುಭವಿಗಳಿಗೆ ನೀಡಬೇಕೆಂಬ ಸರ್ಕಾರದ ಆದೇಶವಿದ್ದರೂ ಪಂಚಾಯಿತಿ ಪಿಡಿಒ ಆರ್.ಎಂ. ಮಾದರ ಅವರಿಗೆ ಮನವಿ ಸಲ್ಲಿಸಿದರೂ ನೀಡುತ್ತಿಲ್ಲ ಎಂದು ವಿಠ್ಠಲಗೌಡ ಪಾಟೀಲ ಆರೋಪಿಸಿದರು.
ಶನಿವಾರ ತಾಲೂಕಿನ ರಣತೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಜನಸಂಪರ್ಕ ಸಭೆಯಲ್ಲಿ ಈ ಕುರಿತು ಗಂಭೀರ ಆರೋಪ ಮಾಡಿದ ಅವರು, ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಅಂಗವಿಕಲ ಫಲಾನುಭವಿಗಳಿದ್ದು, ಕಳೆದ 6 ತಿಂಗಳ ಹಿಂದೆಯೇ ಗ್ರಾಮಸಭೆಯಲ್ಲಿ ಶೇ. 3ರ ಸಹಾಯಧನ ನೀಡುವಂತೆ ಅರ್ಜಿ ಸಲ್ಲಿಸಿದ್ದರೂ ಬರೀ ಹಾರಿಕೆ ಉತ್ತರ ನೀಡುತ್ತಿದ್ದು, ಪಿಡಿಒ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಗ್ರಾಮದಲ್ಲಿ ಪಡಿತರ (ರೇಷನ್) ವಿತರಕರು ಪಡಿತರ ಚೀಟಿ ಹೊಂದಿದ ಅರ್ಹರಿಗೆ ಸರಿಯಾಗಿ ಸೀಮೆ ಎಣ್ಣೆ ನೀಡುತ್ತಿಲ್ಲ. ಒಂದೆರಡು ದಿನ ವಿತರಣೆ ಮಾಡಿ ಖಾಲಿಯಾಗಿದೆ. ಮುಂದಿನ ತಿಂಗಳು ಕೊಡುವುದಾಗಿ ಹೇಳಿ ಕಳುಹಿಸುತ್ತಾರೆ. ಸೀಮೆ ಎಣ್ಣೆ ಉಳಿತಾಯ ಮಾಡಿಕೊಂಡು ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಆಹಾರ ನಿರೀಕ್ಷಕರ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಎಚ್ಚರಪ್ಪ ಬಳ್ಳಾರಿ ಆರೋಪಿಸಿದರು. ಪಿಡಿಒ ಆರ್.ಎಂ. ಮಾದರ ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕಳೆದ ಒಂದು ವರ್ಷದ ಹಿಂದೆಯೇ ಗ್ರಾಮದಲ್ಲಿರುವ ಸ್ವಂತ (ಮಾಲ್ಕಿ) ಖುಲ್ಲಾ ಜಾಗೆಯ (ಪ್ಲಾಟಿನ) ಉತಾರ ನೀಡುವಂತೆ ಎಲ್ಲ ಮೂಲ ಧಾಖಲೆ ಹಾಗೂ ಈ ಹಿಂದೆ ಗ್ರಾಮ ಪಂಚಾಯಿತಿಯಲ್ಲಿಯೇ ಠರಾವ್ ಮಾಡಿದ ಪ್ರತಿಯನ್ನು ಲಗತ್ತಿಸಿ ಅರ್ಜಿ ಸಲ್ಲಿಸಿದ್ದರೂ ಪರಿಶೀಲನೆ ನಡೆಸಿ ಉತಾರ ನೀಡುತ್ತಿಲ್ಲ. ಸದ್ಯ ನಮ್ಮ ಜಾಗೆಯಲ್ಲಿ ಬೇರೊಬ್ಬರು ವಾಸ ಮಾಡುತ್ತಿದ್ದು, ಸಂಘರ್ಷಕ್ಕೆ ಮುಂದಾಗಿದ್ದಾರೆ.
ತುರ್ತಾಗಿ ಉತಾರ ನೀಡುವಂತೆ ಎಚ್ಚರಪ್ಪ ಬಳ್ಳಾರಿ ಮತ್ತೊಮ್ಮೆ ಮನವಿ ನೀಡಿದರು. ರಣತೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ರು. 80 ಲಕ್ಷ ಅನುದಾನವನ್ನು ಕ್ರಿಯಾ ಯೋಜನೆಯಲ್ಲಿ ತೆಗೆದಿರಿಸಿದ್ದು, ಅದರಲ್ಲಿ ಕೇವಲ ರು. 12 ಲಕ್ಷ ಮಾತ್ರ ಖರ್ಚಾಗಿದೆ. ಮಾರ್ಚ್ ತಿಂಗಳ ಒಳಗಾಗಿ ಅನುದಾನ ಬಳಕೆ ಮಾಡಿಕೊಳ್ಳಬೇಕು. ವೈಯಕ್ತಿಕ ಫಲಾನುಭವಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬದು ನಿರ್ಮಾಣ, ಚೆಕ್ ಡ್ಯಾಂ, ಕೃಷಿಹೊಂಡ ಕಾಮಗಾರಿ ಕೈಗೊಳ್ಳುವ ಜತೆಗೆ ಸಾಮೂಹಿಕ ಕೆಲಸ ಕಾರ್ಯಕ್ಕೂ ಮುಂದಾಗುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಸೂಚಿಸಿದರು.
ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದ್ದು, ರೈತರ ನೀರಾವರಿ ಬೆಳೆಗಳು ಒಣಗುತ್ತಿವೆ. ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲವಾಗಲೆಂದು ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳುತ್ತಿದ್ದು, ಸರಿಯಾಗಿ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಸಭೆಯಲ್ಲಿ ಹಾಜರಿದ್ದ ಹೆಸ್ಕಾಂನ ಎಇಇಬಿ ಆಂಜನಪ್ಪ ಮಾತನಾಡಿ, ರಾಜ್ಯಾದ್ಯಂತ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಲೋಡಶೆಡ್ಡಿಂಗ್ ಪ್ರಾರಂಭವಾಗಿದ್ದರಿಂದ ಸಮಸ್ಯೆಯಾಗಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ ಕಾಶಣ್ಣವರ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ಕಮಲಮ್ಮ ಪೂಜಾರ, ಸದಸ್ಯ ಮಂಜುನಾಥಗೌಡ ಪಾಟೀಲ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹಾಂತೇಶ ಸ್ವಾಗೀಹಾಳ, ಹನುಮಂತಪ್ಪ ಗೋಪಾಳಿ, ತಹಸೀಲ್ದಾರ್ ಆರ್.ಬಿ. ನಿಂಗನಗೌಡ್ರ, ಜಿ.ಪಂ. ಜೆ.ಆರ್. ಹೆಗಡೆ, ಸಮಾಜ ಕಲ್ಯಾಣ ಇಲಾಖೆಯ ಬಿ.ಎನ್. ರಾಟಿ, ಸಿಡಿಪಿಒ ಎಸ್.ಕೆ. ಹೊನ್ನೆಗೌಡರ, ತಾಲೂಕು ವೈದ್ಯಾಧಿಕಾರಿ ಶ್ರೀಕಾಂತ ಕಾಟೆವಾಲೆ ಮತ್ತಿತರರು ಇದ್ದರು. ಮುಖ್ಯೋಪಾಧ್ಯಾಯ ವಿ.ಜಿ. ಅಂಗಡಿ ಸ್ವಾಗತಿಸಿದರು. ಎಚ್.ಎಸ್. ಜಕ್ಕಲಿ ನಿರೂಪಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

