ಉದ್ಯೋಗ ಖಾತ್ರಿಯಲ್ಲಿ ಅವ್ಯವಹಾರ: ಶಂಕೆ
ರೋಣ: 2011-12 ಮತ್ತು 13ನೇ ಸಾಲಿನ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಬಳಕೆಯಾಗದೇ ದುರ್ಬಳಕೆಯಾಗಿದೆ. ಖಾತ್ರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಗ್ರಾಪಂ ಮತ್ತು ತಾಪಂ ಅಧಿಕಾರಿಗಳು ವಿವರಣೆ ನೀಡಬೇಕು ಎಂದು ಸವಡಿ ಗ್ರಾಪಂ ಸದಸ್ಯ ರಫೀಕ ಸೊಟಕನಾಳ, ಬಸವರಾಜ ಯಲಿಗಾರ, ಮಂಜುನಾಥ ಗದಗ ಆರೋಪಿಸಿದರು. ಅವರು ಶನಿವಾರ ತಾಲೂಕಿನ ಸವಡಿ ಗ್ರಾಮದ ಗ್ರಾಪಂ ಕಾರ್ಯಾಲಯದಲ್ಲಿ ಜರುಗಿದ ತಾಲೂಕು ಮಟ್ಟದ ಜನಸ್ಪಂದನಾ ಸಭೆಯಲ್ಲಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬುವುದಕ್ಕೆ ಕಳೆದ ಸಾಲಿನಲ್ಲಿ ಗ್ರಾಮದಲ್ಲಿನ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮೈದಾನದ ಅಭಿವೃದ್ಧಿ ಹೆಸರಲ್ಲಿ ರು. 50 ಸಾವಿರ ಅನಗತ್ಯ ಖರ್ಚು ಹಾಕಲಾಗಿದೆ. ಅಲ್ಲದೆ ಖಾತ್ರಿ ಯೋಜನೆಯಲ್ಲಿ ಇಂತಹ ಅನೇಕ ಖರ್ಚುಗಳನ್ನು ಅನಗತ್ಯವಾಗಿ ಹಾಕಲಾಗಿದೆ. ಈ ಕುರಿತು ಗ್ರಾಪಂ ಸದಸ್ಯರಿಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ. 2012-13 ರಲ್ಲಿ ಖಾತ್ರಿ ಯೋಜನೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ತಿಳಿಸಿ ಎಂದು 8 ತಿಂಗಳಿನಿಂದ ದುಂಬಾಲು ಬಿದ್ದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಪಂ ಸದಸ್ಯ ರಫೀಕ ಸೊಟಕನಾಳ ಅಸಮಾಧಾನ ವ್ಯಕ್ತಪಡಿಸಿದರು. ಆಗ ತಾಪಂ ಇಒ ಎಸ್.ಎಂ. ಪಿಡಶೆಟ್ಟಿ ಮಾತನಾಡಿ, 2012-13ನೇ ಸಾಲಿನಲ್ಲಿ ಖಾತ್ರಿ ಯೋಜನೆಯಲ್ಲಿ ರು. 36 ಲಕ್ಷ ಅನುದಾನ ಮಂಜೂರಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಖರ್ಚು ಮಾಡಲಾಗಿದೆ. ಖಾತ್ರಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು.
ಕೆಇಬಿ ಅಧಿಕಾರಿ ತರಾಟೆಗೆ: ಲೋಡ್ ಶೆಡ್ಡಿಂಗ್ ನೆಪದಲ್ಲಿ ಅನಿಯಮಿತವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಾರೆ. ರಾತ್ರಿ ತೀವ್ರ ತೊಂದರೆಯಾಗುತ್ತಿದೆ. ಗ್ರಾಮದಲ್ಲಿ ಸುಮಾರು 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ದುಸ್ಥಿತಿಯಲಿದ್ದು, ಬೀಳುವ ಹಂತದಲ್ಲಿವೆ. ದುರಸ್ತಿಗೆ ಆಗ್ರಹಿಸಿದರೂ ಕೆಇಬಿ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಈರಪ್ಪ ಮುರಗಿ, ಬಸಪ್ಪ ಹಕ್ಕಿ, ಮೇಘರಾಜ ಬಾವಿ ಯಮನೂರಸಾಬ ಬಿಚ್ಚೂಮನಿ ಸೇರಿದಂತೆ ಗ್ರಾಮಸ್ಥರು ಕೆಇಬಿ ಎಇಇ ಪ್ರಕಾಶ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಚಹಾ ಅಂಗಡಿಯಲ್ಲಿ ಸಾರಾಯಿ: ಇಲ್ಲಿನ ಬಹುತೇಕ ಚಹಾ ಅಂಗಡಿಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಕುಡಿಯಲು ಗ್ರಾಮದಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆದರೆ, ಸಾರಾಯಿ ಮಾತ್ರ ನಿತ್ಯ ಎಗ್ಗಿಲ್ಲದೆ ಎಲ್ಲೆಂದರಲ್ಲಿ ದೊರೆಯುತ್ತಿದೆ. ಇದರ ವಿರುದ್ಧ ಯೋಗ್ಯ ಕ್ರಮ ಜರುಗಿಸಬೇಕು ಎಂದು ಗ್ರಾಮದ ಶಿವಪ್ಪ ಹುನಗುಂದ, ಪ್ರಕಾಶ ಜೋಗರಡ್ಡಿ, ಶರಣಪ್ಪ ಇಟಗಿ ಅವರು ತಾಲೂಕು ಅಬಕಾರಿ ನಿರೀಕ್ಷಕ ಎ.ಬಿ. ಮಠಪತಿಗೆ ಒತ್ತಾಯಿಸಿದರು.
ಗೊಂದಲದ ಗೂಡಾದ ಸಭೆ: ಕೆಲ ವಿಷಯಗಳು ಚರ್ಚೆಗೊಳ್ಳದೇ ಸಭೆ ಗೊಂದಲದ ಗೂಡಾಗಿ ಮಾರ್ಪಟ್ಟಿತು. ಇನ್ನು ಸಭೆಗೆ ಕೆಲ ಇಲಾಖೆಯ ಮುಖ್ಯ ಅಧಿಕಾರಿಗಳು ಬಾರದಿದ್ದರಿಂದ ಸಭೆ ಕಾಟಾಚಾರಕ್ಕೆ ಎಂಬಂತೆ ನಡೆಯಿತು. ಸಭೆಯು ಕೇವಲ ಗದ್ದಲ, ಗುಂಪು ಚರ್ಚೆಯಲ್ಲಿಯೇ ಗೊಂದಲದ ಗೂಡಾಗಿ ಮಾರ್ಪಟ್ಟು ಅಂತ್ಯಗೊಂಡಿತು. ಉಪತಹಸೀಲ್ದಾರ್ ಎನ್.ಎಸ್. ಕೂಡಲ, ಗ್ರಾಪಂ ಅಧ್ಯಕ್ಷ ವಿ.ಎಸ್.ಪರಡ್ಡಿ, ಉಪಾಧ್ಯಕ್ಷೆ ಎಸ್.ಎಸ್. ಜಕ್ಕಲಿ, ಬಿಇಒ ಡಿ.ಐ. ಅಸೂಂಡಿ, ಸಿಡಿಪಿಒ ಬಿ.ಎಸ್. ಮೋಕಾಶಿ, ಅಬಕಾರಿ ನಿರೀಕ್ಷಕ ಎ.ಬಿ. ಮಠಪತಿ, ಸಮಾಜ ಕಲ್ಯಾಣ ಅಧಿಕಾರಿ ಮೇಸ್ತಾ, ಆರ್.ಎಸ್.ದೊಡ್ಡಮನಿ, ವಿ.ಎಸ್. ಬಾವಿ ಸೇರಿದಂತೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಸಭೆಯಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

