ಗುಡಿಸಲು ಪ್ರದೇಶಗಳ ಸಮರ್ಪಕ ಸಮೀಕ್ಷೆ ನಡೆಸಿ
ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ಗುಡಿಸಲು ಪ್ರದೇಶಗಳ ಸಮೀಕ್ಷೆ ಸಮರ್ಪಕವಾಗಿ ನಡೆಸಲು ಆಗ್ರಹಿಸಿ ಶುಕ್ರವಾರ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ರಾಜ್ಯದ ಗುಡಿಸಲು ಪ್ರದೇಶಗಳ ಸಮೀಕ್ಷೆ ಕಾರ್ಯ ಕೈಗೊಂಡಿದ್ದು, ಅದರಂತೆ ಜಿಲ್ಲಾಡಳಿತದಿಂದ ಗದಗ-ಬೆಟಗೇರಿ ನಗರದ ಗುಡಿಸಲು ಪ್ರದೇಶಗಳ ಕುಟುಂಬಗಳ ಸಮೀಕ್ಷೆ ಕಾರ್ಯ ನಡೆಸುತ್ತಿರುವುದನ್ನು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಸ್ವಾಗತಿಸುತ್ತದೆ. ಆದರೆ ಸಮೀಕ್ಷೆ ಕಾರ್ಯ ಖಾಸಗಿ ಏಜೆನ್ಸಿಗಳಿಗೆ ನೀಡಿರುವುದರಿಂದ ಗುಡಿಸಲು ಪ್ರದೇಶಗಳ ಸಮೀಕ್ಷೆ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದಲ್ಲಿ ರಾಜೀವ ಆವಾಸ್ ಯೋಜನೆಯಡಿ ಗುಡಿಸಲುಮುಕ್ತ ನಗರ ಮಾಡಲು ಗುಡಿಸಲು ಪ್ರದೇಶಗಳ ಸರ್ವೇ ನಡೆಸಲಾಗುತ್ತಿದೆ. ಸರ್ವೇಯನ್ನು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆಸಲಾಗುತ್ತಿದ್ದು, ಕೊಳಚೆ ಪ್ರದೇಶದ ನಿವಾಸಿಗಳು ಈ ಸಮಯದಲ್ಲಿ ಮನೆಗೆ ಬೀಗ ಹಾಕಿರುತ್ತಾರೆ. ಮನೆಗೆ ಬೀಗ ಹಾಕಿರುವುದರಿಂದ ಅಲ್ಲಿ ಯಾರೂ ವಾಸಿಸುತ್ತಿಲ್ಲ ಎಂದು ಸುಳ್ಳು ದಾಖಲೆಗಳನ್ನು ತಯಾರಿಸಲಾಗುತ್ತಿದೆ. ಹೀಗಾಗಿ ಸರ್ವೇ ಪಟ್ಟಿಯಿಂದ ಸಾವಿರಾರು ಕುಟುಂಬಗಳು ಬಿಟ್ಟಿ ಹೋಗಿವೆ ಎಂದು ದೂರಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರದ ಉದ್ದೇಶ ಈಡೇರಬೇಕಾದರೆ ಘೋಷಿತ ಮತ್ತು ಅಘೋಷಿತ ಗುಡಿಸಲು ಪ್ರದೇಶಗಳ ಸರ್ವೇ ಕಾರ್ಯ ಸಮರ್ಪಕವಾಗಿ ಆಗಬೇಕು. ಕೊಳಚೆ ಪ್ರದೇಶದ ಪ್ರತಿಯೊಂದು ಮನೆಗೆ ತೆರಳಿ ಸರ್ವೇ ನಡೆಸಬೇಕು.
ಸಂಜೆ ಸಮಯದಲ್ಲಿ ಸರ್ವೇ ಕಾರ್ಯ ನಡೆಸುವಂತೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಯವರು ಸರ್ವೇ ನಡೆಸುವ ಸಿಬ್ಬಂದಿಗೆ ತಕ್ಷಣ ಸೂಚಿಸಬೇಕು. ಈಗಾಗಲೇ ನೂರಾರು ಕುಟುಂಬಗಳ ಹೆಸರು ಸರ್ವೇ ಸಮಯದಲ್ಲಿ ಬಿಟ್ಟು ಹೋಗಿರುವುದರಿಂದ ಪುನಃ ಅಂತಹ ಸ್ಲಂಗಳ ಸರ್ವೇ ಕಾರ್ಯ ನಡೆಸಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಮಾನ್ವಿ, ಮಹಿಳಾ ಸಮಿತಿ ಅಧ್ಯಕ್ಷ ಉಮಾದೇವಿ ಕಾತರಕಿ, ಕಾರ್ಯದರ್ಶಿ ತಿಪ್ಪವ್ವ ಮುಟಗಾರ, ಯುವ ಸಮಿತಿ ಅಧ್ಯಕ್ಷ ಶರೀಫ ಬಿಳೆಯಲಿ, ಉಪಾಧ್ಯಕ್ಷ ಯಲ್ಲಪ್ಪ ರಾಮಗಿರಿ, ಪರಶುರಾಮ ಕಾಳೆ, ಸಂತೋಷ ಬಣಕಾರ, ಆರತಿ, ಯೂಸುಫ್ ಮಜ್ಜಗಿ, ನವೀನ ಬಣಕಾರ, ಅನಿಲ ಕಾಳೆ, ಕಮಲವ್ವ ಬಿದರೂರು, ವಿಶಾಲಕ್ಷಿ ಹೀರೇಗೌಡ್ರ, ನಜಮುನ್ನಿಸ್ಸಾ ಮುರಗೋಡ, ರಾಜು ಕಣಗಿನಹಾಳ, ಬಸವರಾಜ ಬಿಳೆಯಲಿ, ಪರವೀನ ಬಡಿಗೇರ, ನಾಗರಾಜ ಮುಟಗಾರ ಹಾಗೂ ವಿವಿಧ ಸ್ಲಂ ನಿವಾಸಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

