ಬಾಗಮಾರ ಸೇವಾ ಸಮಿತಿ ಕಾರ್ಯ ಶ್ಲಾಘನೀಯ
ಗಜೇಂದ್ರಗಡ: ಹಿಂದುಳಿದ ಗ್ರಾಮೀಣ ಪ್ರದೇಶವಾಗಿರುವ ಗಜೇಂದ್ರಗಡದಲ್ಲಿ ಜನರ ಆರೋಗ್ಯ ರಕ್ಷಿಸುವ ವೈದ್ಯ ಸಮೂಹವನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿರುವ ಬಾಗಮಾರ ಸೇವಾ ಸಮಿತಿ ವೈದ್ಯಕೀಯ ಸೇವಾಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಪ್ರಶಂಸಿಸಿದರು.
ಅವರು ಭಾನುವಾರ ಸ್ಥಳೀಯ ತಿರುಪತಿ ತಿರುಮಲ ಕಲ್ಯಾಣ ಮಂಟಪದಲ್ಲಿ ಭಗವಾನ್ ಮಹಾವೀರ ಜೈನ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಪಿ.ಜಿ. ಸೆಂಟರ್ ವತಿಯಿಂದ ಜರುಗಿದ 22ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಗವಾನ್ ಮಹಾವೀರ ಜೈನ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದ ಡಿಸಿ, ವೈದ್ಯರಿಗೆ ಗೌರಾವಾನ್ವಿತ ಸ್ಥಾನ, ಮಾನವಿದೆ. ಬೆಲೆ ಕಟ್ಟಲಾರದ ಆರೋಗ್ಯ ಸೇವೆ ಗ್ರಾಮೀಣ ಬಡ ಜನತೆಗೆ ಮೀಸಲಿಡಿ. ಜಿಲ್ಲೆಯ ಹಲವಾರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಗ್ರಾಮೀಣ ಬಡಜನ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಇಂಥವರ ಬಾಳಿಗೆ ಬೆಳಕು ಆಗುವಂತೆ ನೂತನ ವೈದ್ಯರು ತಮ್ಮ ಸೇವೆ ಪ್ರಾರಂಭಿಸಿರಿ. ವೃತ್ತಿ ಪಾವಿತ್ರ್ಯತೆ ಕಾಯ್ದುಕೊಂಡು ಸರ್ಕಾರದ ಸೇವೆಗೆ ಮುಂದೆ ಬನ್ನಿ. ಅದು ಗದಗ ಜಿಲ್ಲೆಯಿಂದಲೇ ಪ್ರಾರಂಭವಾಗಲಿ.
ವಿಶ್ವಮಾನ್ಯತೆ ಪಡೆದ ಭಾರತೀಯ ಆಯುರ್ವೇದಿಕ್ ವೈದ್ಯಕೀಯ ಚಿಕಿತ್ಸಾ ಪದ್ಧತಿ ಸೇವೆ ಗ್ರಾಮೀಣ ಪ್ರದೇಶ ಜನತೆಗೆ ನೀಡಲು ಮುಂದಾಗಬೇಕು. ನೂತನ ಯುವ ವೈದ್ಯರು ಸೇವಾ ಮನೋಭಾವನೆ ಮೈಗೂಡಿಸಿಕೊಂಡು ಗೌರವಾನ್ವಿತ ವೃತ್ತಿ ಪಾವಿತ್ರ್ಯ ಕಾಯ್ದುಕೊಂಡು, ಆರೋಗ್ಯವೇ ಭಾಗ್ಯವೆಂದು ಭಾವಿಸಿರುವ ಹಳ್ಳಿಗರಿಗೆ ಆಯುರ್ವೇದಿಕ್ ಸೇವೆ ನೀಡುವ ಮೂಲಕ ವೃತ್ತಿ ಬದುಕು ರೂಪಿಸಿಕೊಳ್ಳಿ. ಹೆಚ್ಚು ಜನಸಂಖ್ಯೆ ಹೊಂದಿದ ಭಾರತದಲ್ಲಿ ಜನರ ಆರೋಗ್ಯ ಸಂರಕ್ಷಾ ಕ್ರಮ ಸಾಕಷ್ಟು ಪ್ರಮಾಣದಲ್ಲಿ ಕೈಗೊಂಡರೂ ಗ್ರಾಮೀಣ ಪ್ರದೇಶ ಜನತೆ ಗುಣಮಟ್ಟದ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದು ಅಂಥವರ ಬಾಳಿಗೆ ತಾವೆಲ್ಲರೂ ಬೆಳಕಾಗಬೇಕು ಎಂದರು. ರಾಷ್ಟ್ರೀಯ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಮ್ಯಾನೇಜಮೆಂಟ್ ಮತ್ತು ಸಂಸ್ಥೆ ಅಧ್ಯಕ್ಷ ಅಶೋಕಕುಮಾರ್ ಬಾಗಮಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜನತೆಗೆ ಉತ್ತಮ ವೈದ್ಯಕೀಯ ಸೇವೆ ನೀಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಂಡು ಕಲಿತ ಸಂಸ್ಥೆಗೆ ಮತ್ತು ಹೆತ್ತ ತಂದೆ-ತಾಯಿ, ನಾಡಿನ ಕೀರ್ತಿಗೆ ಪಾತ್ರರಾಗಬೇಕು ಎಂದರು. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಹಲವು ಮಹನೀಯರನ್ನು ಸನ್ಮಾನಿಸಲಾಯಿತು. ಗುರು ಸೇವಾ ಭಕ್ತಿ ಅವಾರ್ಡ್ನ್ನು ಹನುಮಸಾಗರದ ಶರಣಪ್ಪ ಅಗಸಿಮುಂದಿನ, ಬೇಲೂರಿನ ಮಲ್ಲಣ್ಣ ಯಲಿಗೇರ, ಶಿವಯೋಗಪ್ಪ ಗೋಗೇರಿ, ಸರ್ಜಾಪುರದ ಶರಣಪ್ಪಗೌಡ, ಮುಶಿಗೇರಿಯ ಮೌನೇಶ ಅಕ್ಕಸಾಲಿಗರ, ಶಂಕ್ರಮ್ಮ ಸಜ್ಜನರ, ರಾಮಾಪುರ ಮೇಟಿ ಅವರು ಸನ್ಮಾನಿತರು. ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ರಿಕಬ್ಚಂದ ಬಾಗಮಾರ, ಡಾ. ಜೆ.ಐ. ಹಿರೇಮಠ, ಪರೂಲ ವರ್ಮಾ, ಸಂಸ್ಥೆ ಕಾರ್ಯದರ್ಶಿ ಅಜಿತಕುಮಾರ ಬಾಗಮಾರ ಉಪಸ್ಥಿತರಿದ್ದರು. ಎ.ಡಿ. ಕೋಲಕಾರ ಸ್ವಾಗತಿಸಿದರು. ಸೋಮಯ್ಯ ಫಾರಕಿ ನಿರೂಪಿಸಿದರು. ಮನೀಷಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

