ಮನೆ ಹಂಚಿಕೆಯಲ್ಲಿ ತಾರತಮ್ಯ ಖಂಡಿಸಿ ಪ್ರತಿಭಟನೆ
ಶಿರಹಟ್ಟಿ: ಶಿರಹಟ್ಟಿ ಪಟ್ಟಣ ಪಂಚಾಯಿತಿಗೆ 2012-13ನೇ ಸಾಲಿನಲ್ಲಿ ವಾಜಪೇಯಿ ವಸತಿ ಯೋಜನೆಯಡಿ 40 ಮನೆಗಳು ಮಂಜೂರಾಗಿದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸಿ ಆಯ್ಕೆ ಮಾಡದೇ ಉಳ್ಳವರೇ ಫಲಾನುಭವಿಗಳಾಗಿದ್ದು, ಅಧಿಕಾರಿಗಳ ತಾರತಮ್ಯ ನೀತಿ ಖಂಡಿಸಿ ಅರ್ಹ ಫಲಾನುಭವಿಗಳು ಸೋಮವಾರ ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ಎಲ್.ಜೆ. ಬಾಗಲಕೋಟೆ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರವೀಂದ್ರ ಅಶೋಕ ಕದಮ, ಕರವೇ ಅಧ್ಯಕ್ಷ ಸುನಿಲ ಪವಾರ ಮಾತನಾಡಿ, ಅನೇಕ ವರ್ಷಗಳಿಂದ ಕೂಲಿ ಮಾಡುತ್ತಾ ವಾಸಿಸಲು ಮನೆಯೇ ಇಲ್ಲದೆ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿರುವ ಜನ ಸಾಕಷ್ಟಿದ್ದರೂ ಅಧಿಕಾರಿಗಳು ಯಾವುದನ್ನು ಪರಿಶೀಲನೆ ಮಾಡದೇ ಏಕಪಕ್ಷೀಯವಾಗಿ ಹಾಗೂ ರಾಜಕೀಯ ಒತ್ತಡಕ್ಕೆ ಮಣಿದು 40 ಫಲಾನುಭವಿಗಳ ಯಾದಿ ಸಿದ್ಧಪಡಿಸಿದ್ದಾರೆ. ಅರ್ಹ ಫಲಾನುಭವಿಗಳು ವಂಚಿತರಾಗಿದ್ದು, ನಿತ್ಯ ಕಾರ್ಯಾಲಯಕ್ಕೆ ಅಲೆದಾಡಿ ನಿರಾಸೆಗೊಂಡಿದ್ದಾರೆ ಎಂದು ದೂರಿದರು. ಮೇಲಧಿಕಾರಿಗಳು ತುರ್ತಾಗಿ ಕಾರ್ಯಾಲಯಕ್ಕೆ ಭೇಟಿ ನೀಡಿ ನಿಜವಾದ ಫಲಾನುಭವಿಗಳಿಂದ ಅರ್ಜಿ ಪಡೆದು ಅರ್ಹರಿಗೆ ತಲುಪುವಂತೆ ಮಾಡಬೇಕು ಎಂದು ಆಗ್ರಹಿಸಿದರು. ಶೇ. 3ರ ಅಂಗವಿಕಲ ಫಲಾನುಭವಿಗಳ ಅನುದಾನ ಸರಿಯಾಗಿ ಹಂಚಿಕೆಯಾಗುತ್ತಿಲ್ಲ. ಕೆಲವರಿಗೆ ಮಾತ್ರ ಸರ್ಕಾರದ ಸೌಲಭ್ಯಪಡೆಯುವ ಅವಕಾಶ ಪಟ್ಟಣ ಪಂಚಾಯಿತಿಯಲ್ಲಿ ನಡೆಯುತ್ತಿದೆ. ನಿಜವಾದ ಫಲಾನುಭವಿಗಳು ವಂಚಿತರಾಗುತ್ತಿದ್ದು, ಈ ಅವ್ಯವಸ್ಥೆ ನಿಲ್ಲಬೇಕು. ಪ್ರತಿ ವರ್ಷವೂ ಸರ್ಕಾರಿ ಸೌಲಭ್ಯದಿಂದ ಅಂಗವಿಕಲ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ. ಇದೇ ವ್ಯವಸ್ಥೆ ಮುಂದುವರೆದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಶಿರಹಟ್ಟಿ ಹೆಸರಿಗೆ ಮಾತ್ರ ತಾಲೂಕು ಎಂಬ ಹಣೆ ಪಟ್ಟಿ ಹೊಂದಿದೆ. ಇಲ್ಲಿ ಯಾವುದೇ ಮೂಲ ಸೌಕರ್ಯಗಳು ಸಿಗುತ್ತಿಲ್ಲ. ಸರ್ಕಾರ ಮಿನಿ ಬಸ್ಡಿಪೋ, ನೂರು ಹಾಸಿಗೆಯುಳ್ಳ ಆಸ್ಪತ್ರೆ, ಅಗ್ನಿ ಶಾಮಕ ಠಾಣೆ ಮಂಜೂರು ಮಾಡಿದ್ದು, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಇವುಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಪಟ್ಟಣದ ಬೆಳ್ಳಟ್ಟಿ ರಸ್ತೆಗೆ ಹೊಂದಿಕೊಂಡಿರುವ ಎಪಿಎಂಸಿ ಬಯಲು ಜಾಗೆ ಸಾರ್ವಜನಿಕರಿಗೆ ಬಹಿರ್ದೆಸೆಗೆ ಮೀಸಲಿಟ್ಟಂತಾಗಿದ್ದು, ಜನಪ್ರತಿನಿಧಿಗಳು ಆಸಕ್ತಿವಹಿಸಿ ಅಧಿಕಾರಿಗಳ ಗಮನಕ್ಕೆ ತಂದು ಈ ಜಾಗೆಯನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದರು. ಶಿರಸ್ತೇದಾರ ಮನವಿ ಸ್ವೀಕರಿಸಿ ಮಾತನಾಡಿ, ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು. ಶ್ರೀಕಾಂತ ಹಾದಿಮನಿ, ಸುರೇಶ ಜಾಧವ, ಗಣಪತಿ ಪರಬತ, ಆರ್.ಎಸ್. ನಾಗರಾಜ, ಉಮೇಶ ಪಲ್ಲೇದ, ವಿಮಲ ಸ್ವಟಿಕೆ, ಶಿದ್ಲಿಂಗಪ್ಪ ವಾಲಿಕಾರ, ಹನುಮಂತಪ್ಪ ಕುರುಬರ, ಶರಣಪ್ಪ ಕರಮುಡಿ, ಲಕ್ಷ್ಮೀಬಾಯಿ ಲೋಂಡೆ, ಲಕ್ಷ್ಮವ್ವ ಐನಾಪುರ, ಕೃಷ್ಣಾ ಜಾಧವ, ಮಂಜವ್ವ ಸಿಂಧೆ, ದೇವಕ್ಕ ಸ್ವಾಮಿ ಮತ್ತಿತರರು ಮನವಿ ನೀಡುವಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

