ಗದಗ

ಸಾವಯವ ಕೃಷಿಗಾಗಿ ಸ್ವಾಮೀಜಿ ಚಕ್ಕಡಿ ಯಾತ್ರೆ

Published On :

ಕನ್ನಡಪ್ರಭ ವಾರ್ತೆ, ನರೇಗಲ್ಲ, ಜ. 6
ಆಧುನಿಕ ಕೃಷಿ ಪದ್ಧತಿಯಿಂದ ಇಂದಿನ ಜನಜೀವನದ ಮೇಲಾಗಿರುವ ದುಷ್ಪರಿಣಾಮ ಮತ್ತು ಸಾವಯವ ಕೃಷಿಯ ಕುರಿತು ಜಾಗೃತಿ ಮೂಡಿಸಲು ಗದಗ ಜಿಲ್ಲೆಯ ಹಾಲಕೆರೆಯ ಅನ್ನದಾನೇಶ್ವರ ಮಠದ ಅನ್ನದಾನ ಸ್ವಾಮೀಜಿ ಅವರು ಷಟ್‌ಸ್ಥಲ ಚಕ್ರವರ್ತಿ ಚನ್ನಬಸವೇಶ್ವರರ ಐಕ್ಯ ಸ್ಥಳವಾದ ಜೋಯಿಡಾ ತಾಲೂಕಿನ ಉಳವಿಗೆ ಚಕ್ಕಡಿ ಯಾತ್ರೆ ಕೈಗೊಂಡಿದ್ದಾರೆ.
15 ದಿನಗಳ ಈ ಯಾತ್ರೆಗೆ ಸೋಮವಾರ ಚಾಲನೆ ದೊರೆತಿದೆ. ಯಾತ್ರೆ ಸಂದರ್ಭದಲ್ಲಿ ದಿನಕ್ಕೆ ಎರಡು ಊರುಗಳಲ್ಲಿ ಇಂಧನ ಉಳಿತಾಯ, ಸಾವಯವ ಕೃಷಿ, ಭೂ ಸಂರಕ್ಷಣೆ, ಜೈವಿಕ ಇಂಧನ ಬಳಕೆ ಕುರಿತು ಸ್ವಾಮೀಜಿ ಜಾಗೃತಿ ಮೂಡಿಸಲಿದ್ದಾರೆ. ಯಾತ್ರೆಯೂ ರೋಣ ತಾಲೂಕಿನ ಹಾಲಕೆರೆಯಿಂದ ಜಕ್ಕಲಿ, ರೋಣ, ಶಲವಡಿ, ತಿರ್ಲಾಪುರ, ಧಾರವಾಡ, ಹಳಿಯಾಳ ಮಾರ್ಗವಾಗಿ ಉಳವಿಯನ್ನು ಜ. 12ರಂದು ತಲುಪಲಿದೆ. ನಂತರ ಪುನಃ ಜ. 14ರಂದು ಹೊರಟು ಜ. 20ರಂದು ಹಾಲಕೆರೆಗೆ ಆಗಮಿಸಿ ಸಮಾಪ್ತಿಗೊಳ್ಳುವುದು.
ಮುತ್ತೈದೆಯರಿಂದ ಆರತಿ: ಯಾತ್ರೆ ಪ್ರಾರಂಭದ ಹಂತದಲ್ಲಿ ಗ್ರಾಮದ ಮುತ್ತೈದೆಯರು ಆರತಿ ಬೆಳಗಿ ಚಾಲನೆಗೆ ಮುಂದಾದರೆ, ಕರಡಿ ಮಜಲು, ವಾದ್ಯ ಮೇಳಗಳು, ಜಕ್ಕಲಿಯ ನಂದೀಶ ಸೇರಿದಂತೆ ವಿವಿಧ ವಾದ್ಯಮೇಳದವರು ಯಾತ್ರೆಗೆ ಮೆರುಗು ನೀಡಿದರು. ಮೊದಲಿನ ಚಕ್ಕಡಿಯಲ್ಲಿ ಅನ್ನದಾನ ಶ್ರೀಗಳು, ನಂತರದ ಪ್ರತಿ ಚಕ್ಕಡಿಯಲ್ಲಿ ಇಬ್ಬರು ಶ್ರೀಗಳಂತೆ ಕುಳಿತುಕೊಂಡರೆ, ಉಳಿದವುಗಳಲ್ಲಿ ಭಕ್ತರು ಯಾತ್ರೆ ಕೈಗೊಂಡರು. ಅನ್ನದಾನ ಶ್ರೀಗಳು ಕೇವಲ 101 ಚಕ್ಕಡಿಗಳ ಮೂಲಕ ಉಳವಿ ಯಾತ್ರೆಯನ್ನು ಮಾಡಬೇಕೆಂದು ತೀರ್ಮಾನಿಸಿದ್ದರು. ಆದರೆ, ಭಕ್ತರ ಒತ್ತಾಸೆಯ ಮೇರೆಗೆ 301 ಚಕ್ಕಡಿಗಳಿಗೆ ಸೀಮಿತವಾಯಿತು. ಅದರಲ್ಲಿ ಹಾಲಕೆರೆಯ ಶಾಖಾ ಮಠಗಳ ಊರುಗಳಾದ ಇಟಗಿ, ಹಾಲಕೆರೆ, ಕನಸಾವಿ, ಬೇಲೂರು, ಢಾಣಕಶಿರೂರು, ಗಂಜಿಹಾಳ, ನಾಗೂರು, ಹೊನ್ನಾರಹಳ್ಳಿ, ಬೀಳಗಿ, ಜಕ್ಕಲಿ, ನಿಡಗುಂದಿ, ಸಂಗನಹಾಳ, ತೋಟಗಂಟಿ. ರಾಮತ್ನಾಳ, ರೋಣ, ಶಾಂತಗಿರಿ, ಗೋಗೇರಿ, ಅಬ್ಬಿಗೇರಿ, ನಿಡಗುಂದಿಕೊಪ್ಪದ ಚಕ್ಕಡಿಗಳು ಪಾಲ್ಗೊಂಡಿವೆ.
ಸಾವಯವ ಕೃಷಿ ಅವಶ್ಯ: ಅನ್ನದಾನ ಸ್ವಾಮೀಜಿ
ಆಧುನಿಕ ಕೃಷಿ ಪದ್ಧತಿಗೆ ಮಾರು ಹೋಗಿರುವ ಇಂದಿನ ಜನತೆ ಅದರಿಂದಾಗುವ ದುಷ್ಪರಿಣಾಮ ಮತ್ತು ಸಾವಯವ ಕೃಷಿ ಅನುಕೂಲತೆ ಅರಿಯಬೇಕಾದ ಅವಶ್ಯಕತೆಯಿದೆ ಎಂದು ಅನ್ನದಾನ ಶ್ರೀ ಹೇಳಿದರು.
ಅವರು ಸೋಮವಾರ ಸಮೀಪದ ಹಾಲಕೆರೆಯಿಂದ ಉಳವಿ ಚನ್ನಬಸವೇಶ್ವರ ದೇವಸ್ಥಾನದವರೆಗೆ 15 ದಿನಗಳಕಾಲ ಚಕ್ಕಡಿಗಳ ಮೂಲಕ ಸಾವಯವ ಕುರಿತು ಜಾಗೃತಿ ಮೂಡಿಸಲು ಯಾತ್ರೆ ಪ್ರಾರಂಭಿಸುವ ಪೂರ್ವದಲ್ಲಿ ಮಠದ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಸತ್ವಯುತ ಭೂಮಿಗೆ ವಿಷಪೂರಿತ ಗೊಬ್ಬರ ಹಾಕುವುದನ್ನು ತಡೆಗಟ್ಟಿ, ಸಾವಯವ ಕೃಷಿಗೆ ಪ್ರತಿಯೊಬ್ಬರೂ ಮುಂದಾಗಿ. ಇದಕ್ಕೆ ಸರ್ಕಾರವೂ ರೈತರು ಸಾವಯವ ಕೃಷಿ ಮಾಡುವಂತೆ ಪ್ರೋತ್ಸಾಹಿಸಲು ಆಶಾದಾಯಕ ಯೋಜನೆಗಳನ್ನು ರೂಪಿಸಬೇಕು ಎಂದರು.
ಜಾನುವಾರು ಸಾಕಿ: ಎಲ್ಲರೂ ಮನೆಯಲ್ಲಿ ದನಕರುಗಳನ್ನು ಸಾಕಬೇಕು. ಅದರಿಂದ ದೊರೆಯುವ ಗೋಮೂತ್ರ ಹಾಗೂ ಸಗಣಿಯನ್ನು ಹೊಲಗಳಿಗೆ ಹಾಕಿದಲ್ಲಿ ಸತ್ವಯುತ ಆಹಾರ ಹಾಗೂ ಭೂಮಿಯೂ ಸತ್ವಯುತವಾಗಿರುತ್ತೆ. ಸತ್ವಯುತ ಆಹಾರದಿಂದ ಸದೃಢ ಆರೋಗ್ಯ ಹಾಗೂ ದೀರ್ಘಾಯುಷಿಗಳಾಗಲು ಸಾಧ್ಯ ಎಂದರು. ಅರಬ್ ದೇಶದಿಂದ ಆಮದು ಮಾಡಿಕೊಳ್ಳುವ ತೈಲದ ಮೇಲೆ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಕಾರಣ ಅನಾವಶ್ಯಕವಾಗಿ ವಾಹನ ಬಳಕೆ ಕಡಿಮೆಮಾಡಿ, ಸಾಧ್ಯವಾದಷ್ಟು ಇಂಧನ ಉಳಿತಾಯಮಾಡಲು ಪ್ರತಿಯೊಬ್ಬರೂ ಮುಂದಾಗಿ. ಹಿಂದಿನ ಅನ್ನದಾನ ಶ್ರೀಗಳು ನೂರುವರ್ಷಗಳ ಹಿಂದೆ ಚಕ್ಕಡಿಯ ಮೂಲಕ ಉಳವಿಗೆ ಜಾಗೃತಿಯಾತ್ರೆ ಮಾಡಿದ್ದರು. ಅದರ ಪ್ರತೀಕವಾಗಿ ಈಗ ಮತ್ತೆ 101 ಚಕ್ಕಡಿ ಯಾತ್ರೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಹೊರಡಬೇಕೆಂಬ ಅಭಿಲಾಷೆಗೆ 250ಕ್ಕೂ ಹೆಚ್ಚು ಚಕ್ಕಡಿಗಳು ಹೊರಟಿವೆ. ಇವುಗಳಿಗೆ ದಾರಿಯುದ್ದಕ್ಕೂ ಸಾವಿರಾರು ಭಕ್ತಾಧಿಗಳು ತಮ್ಮ ಭಕ್ತಿಯ ದ್ಯೋತಕವಾಗಿ ಪ್ರಸಾದ ವ್ಯವಸ್ಥೆ, ಎತ್ತುಗಳಿಗೆ ಬೇಕಾದ ಆಹಾರ, ನೀರಿನ ಸೌಕರ್ಯ ಮಾಡಲು ಸ್ವಪ್ರೇರಣೆಯಿಂದ ಮುಂದೆ ಬಂದಿರುವ ಭಕ್ತಾದಿಗಳ ಕಾರ್ಯ ಶ್ಲಾಘನೀಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.