ಗದಗ

ಕೈಮಗ್ಗ ನೇಕಾರಿಕೆ ಪ್ರೋತ್ಸಾಹಿಸಿ

Published On :

ಗಜೇಂದ್ರಗಡ:  ಪಾವರ್ ಲೂಮ್ಸ್ಗೆ ಪ್ರೋತ್ಸಾಹಿಸುವ ಮೂಲಕ ಕೈಮಗ್ಗ ನೇಕಾರಿಕೆ ಕೊಲ್ಲಬೇಡಿ. ವಿನಾಶದ ಅಂಚಿಗೆ ತಲುಪಿರುವ ಕೈಮಗ್ಗ ನೇಕಾರಿಕೆ ರಕ್ಷಣೆಗಾಗಿ ಬದಾಮಿ ತಾಲೂಕು ಬನಶಂಕರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೆಗ್ಗೋಡಿನ ಹಿರಿಯ ರಂಗಕರ್ಮಿ, ಚರಕ ಮತ್ತು ದೇಶಿ ಸಂಸ್ಥೆ ಸಂಸ್ಥಾಪಕ ಪ್ರಸನ್ನ ತಿಳಿಸಿದರು.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಂಜೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, 18ನೇ ಶತಮಾನದವರೆಗೂ ಸಾರ್ವಭೌಮತ್ವ ಮೆರೆದಿದ್ದ ಭಾರತೀಯ ಕೈಮಗ್ಗ ಉದ್ಯಮಕ್ಕೆ ಮರು ಚೇತನ ದೊರೆಯಬೇಕಾದರೆ ಆಧುನಿಕ ಕೈಗಾರಿಕೆಗಳು ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡಬೇಕು. ದೇಶದ ಮಹಾನ್ ಗ್ರಾಮೀಣ ಉದ್ದಿಮೆಯಾದ ನೇಕಾರಿಕೆಯನ್ನು ವಿನಾಶಕ್ಕೆ ತಳ್ಳುತ್ತಿರುವ ಪ್ರಕ್ರಿಯೆ ತಕ್ಷಣದಿಂದ ನಿಲ್ಲಿಸಿ ಎಂಬ ಬೇಡಿಕೆಯಿಟ್ಟು  ಜ. 15ರಿಂದ ಗಜೇಂದ್ರಗಡದಿಂದ ಪ್ರಾರಂಭಿಸಿ ಬದಾಮಿ ತಾಲೂಕು ಬನಶಂಕರಿ ವರೆಗೆ ಪಾದಯಾತ್ರೆ ತೆರಳಿ ಜ. 27 ತಲುಪಲಿದೆ. ಪಾದಯಾತ್ರೆ ಸತ್ಯಾಗ್ರಹ ಹೋರಾಟ ಮಧ್ಯದಲ್ಲಿ ಜನಸಂಪರ್ಕ ಸಭೆ ನಡೆಯಲಿವೆ.
ಕೇಂದ್ರ ಸರ್ಕಾರ ಜವಳಿ ಇಲಾಖೆ ನಡೆಸಿದ ಜನಗಣತಿ ಪ್ರಕಾರ ದೇಶದಲ್ಲಿ 43.32 ಲಕ್ಷ ಜನ ಕೈಮಗ್ಗ ನೇಕಾರಿಕೆ ಅವಲಂಬಿಸಿದ್ದಾರೆ. 24 ಲಕ್ಷ ಕೈಮಗ್ಗಗಳಿವೆ. ಅದರಲ್ಲಿ ಶೇ. 78ರಷ್ಟು ಮಹಿಳೆಯರು ಕೈಮಗ್ಗ ನೇಕಾರಿಕೆ ನೆಚ್ಚಿದ್ದಾರೆ. ಪರಿಶಿಷ್ಟ ಜಾತಿ ಶೇ. 28, ಹಿಂದುಳಿದ ವರ್ಗ 1.8 ಅವಲಂಬಿತರಾಗಿ ಬದಕು ಸಾಗಿಸುತ್ತಿದ್ದಾರೆ.
ಕೈಮಗ್ಗ ನೇಕಾರಿಕೆ ಪದಾರ್ಥಗಳ ಮೀಸಲಾತಿ ಕಾನೂನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕಿದೆ. ಕೈಮಗ್ಗ ನೇಕಾರಿಕೆ ಕ್ಷೇತ್ರದಲ್ಲಿ ತಪ್ಪಾಗಿ ಅಳವಡಿಸಲಾದ ವಿದ್ಯುತ್ ಮಗ್ಗದಿಂದಾಗಿ ಅಲ್ಲಿನ ಕಾರ್ಮಿಕರು ಬೀದಿ ಪಾಲಾಗುವುದನ್ನು ತಪ್ಪಿಸಲು ಸರ್ಕಾರ ಮುಂದಾಬೇಕು.
ವಿಶ್ವದೆಲ್ಲೆಡೆ ಹತ್ತಿಯಿಂದ ತಯಾರಿಸಿದ ಬಟ್ಟೆಗೆ ಈಗ ಭಾರಿ ಡಿಮ್ಯಾಂಡ್ ಬಂದಿದೆ. ಜತೆಗೆ ನೈಸರ್ಗಿಕ ಬಣ್ಣ ಹಾಕಿರುವ ನೂಲಿನಿಂದ ತಯಾರಿಸಿರುವ ಬಟ್ಟೆ ಎಂದರೆ ತುಟ್ಟಿಯಾದರೂ ಶಹರ ಪ್ರದೇಶ ಜನ ಕೊಂಡುಕೊಳ್ಳಲು ಮುಗಿ ಬೀಳುತ್ತಾರೆ. ಸರ್ಕಾರ ಕೈಮಗ್ಗ ಪ್ರೋತ್ಸಾಹಿಸುವದು ಅಗತ್ಯ.
ಚರಕ ಹಾಗೂ ದೇಶಿ ಸಂಸ್ಥೆಯ ಮಾರ್ಗದರ್ಶನದಲ್ಲಿ ಯಾವುದೇ ರಾಸಾಯನಿಕ ವಸ್ತು ಬಳಸದೇ, ನೈಸರ್ಗಿಕವಾಗಿ ಲಭ್ಯವಿರುವ ಪದಾರ್ಥಗಳಿಂದ ಬಣ್ಣ ಹಾಕಿದ ನೂಲನ್ನು ಬಳಸಿಕೊಂಡು ಕೈಮಗ್ಗದಲ್ಲಿ ಬಟ್ಟೆ ನೇಯುವ ಕಾರ್ಯದಲ್ಲಿ ಮಹಿಳೆಯರು ಹೆಚ್ಚು ತೊಡಗಿದ್ದಾರೆ. ಚರಕವು ತನ್ನದೇ ಆದ ವಿನ್ಯಾಸಗಳಿಂದ ಕೂಡಿದ ಉಡುಪುಗಳನ್ನು ಉತ್ಪಾದಿಸಲು ಕೈಮಗ್ಗಗಳನ್ನು ಸಾಗರ ಬಳಿಯ ಹೆಗ್ಗೋಡು ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ಪರಿಚಿತವಾದ ಸ್ಥಳವಾಗಿದೆ ಎಂದರು.
ರಾಜ್ಯ ಸಂಚಾಲಕ ಎಸ್.ಸಿ. ದೇವರಮನೆ, ನೇಕಾರರ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಕೊಟ್ರೇಶ ಚಿಲಕಾ, ಉಪನ್ಯಾಸಕ ಬಿ.ಎ. ಕೆಂಚರೆಡ್ಡಿ, ಹನುಮಂತ ಕೆಂಚಿ, ಗೋಪಾಲ ಕೆಂಚಿ, ರವಿಂದ್ರ ಹೊನವಾಡ, ಪಾಂಡುರಂಗ ಶೀಲವೇರಿ ಮಾತನಾಡಿದರು. ಬಾಬಣ್ಣಾ ರಾಯಬಾಗಿ, ಎಂ.ಎಂ. ಕುಲಕರ್ಣಿ, ವಿಶ್ವನಾಥ ಕೆಂಚಿ, ಉಮೇಶ ರಾಠೋಡ, ಎಫ್.ಎಸ್. ಕರಿದುರಗನವರ, ತಿಮ್ಮಣ್ಣಾ ವನ್ನಾಲ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.