ಗದಗ

ಗಾಳಿಯಂತ್ರಗಳ ಕಾಮಗಾರಿ ತಕ್ಷಣ ನಿಲ್ಲಿಸಿ

Published On :

ಕನ್ನಡಪ್ರಭ ವಾರ್ತೆ, ಗದಗ, ಜ. 14
ತಾಲೂಕಿನ ಅಡವಿಸೋಮಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಕೃಷಿ ಭೂಮಿಯಲ್ಲಿ ವ್ಯವಸಾಯೇತರ ಉದ್ದೇಶದ ಅನಧಿಕೃತ ಪವನ (ಗಾಳಿ) ವಿದ್ಯುತ್ ಯಂತ್ರಗಳನ್ನು ನಿರ್ಮಾಣ ಮಾಡುತ್ತಿದ್ದು, ಕೂಡಲೇ ಕಾಮಗಾರಿಗಳನ್ನು ನಿಲ್ಲಿಸುವಂತೆ ಅಡವಿಸೋಮಾಪುರ ಗ್ರಾಮ ಪಂಚಾಯಿತಿ ಆಡಳಿತ ಆಗ್ರಹಿಸಿದೆ.
ಗ್ರಾಪಂನ ಅನುಮತಿ ಪಡೆದು ತಮ್ಮ ಕಾಮಗಾರಿ ಪ್ರಾರಂಭಿಸುವಂತೆ ಸಾಕಷ್ಟು ಬಾರಿ ತಿಳಿಸಿದರೂ ಈ ವರೆಗೂ ಗ್ರಾಪಂಗೆ ತಿಳಿಸದೆ ಕಾಮಗಾರಿಗಳನ್ನು ನಡೆಸಿದೆ ಎಂದು ಗ್ರಾಪಂ ಆಡಳಿತ ದೂರಿದೆ. ಈ ಕುರಿತು ಡಿ. 28ರಂದು ಜಿಲ್ಲಾಧಿಕಾರಿಗೆ ಮನವಿ ನೀಡಿದರೂ ಜಿಲ್ಲಾ ಆಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಕಾಮಗಾರಿ ನಡೆದ ಸ್ಥಳಗಳಿಗೆ ತೆರಳಿ ಕಾಮಗಾರಿ ನಿಲ್ಲಿಸುವಂತೆ ನೋಟೀಸ್ ನೀಡಿದೆ.
ಗ್ರಾಪಂ ವ್ಯಾಪ್ತಿಯ ಅಡವಿಸೋಮಾಪುರ, ಪಾಪನಾಶಿ, ಬಾಲಾಜಿನಗರ ಹಾಗೂ ಜಲಾಶಂಕರ ನಗರ ಗ್ರಾಮಗಳಲ್ಲಿಯ ಕೃಷಿ ಜಮೀನನಲ್ಲಿ ಮೂರು ವರ್ಷಗಳಿಂದ ಗಾಳಿ ವಿದ್ಯುತ್ ಯಂತ್ರಗಳನ್ನು ನಿರ್ಮಾಣ ಮಾಡುತ್ತಲಿದ್ದು, ಈ ಕುರಿತು ಸಾಕಷ್ಟು ಬಾರಿ ಸಂಬಂಧಿಸಿದವರಿಗೆ ತಿಳಿಸಿದರೂ ಪರವಾನಗಿ ತೆಗೆದುಕೊಳ್ಳದೆ ಹಾಗೂ ತೆರಿಗೆ ತುಂಬದೇ ವಂಚಿಸುತ್ತಿರುವುದನ್ನು ಗ್ರಾಪಂ ಆಡಳಿತ ಖಂಡಿಸಿ, ನೋಟಿಸ್ ನೀಡಿ, ನಿಯಮಾನುಸಾರ ಪರವಾನಗಿ ಪಡೆದುಕೊಂಡು ಕಾಮಗಾರಿ ಆರಂಭಿಸುವಂತೆ ತಿಳಿಸಿದೆ. ಈ ನೋಟಿಸ್‌ಗೆ ಕೂಡಲೇ ಸ್ಪಂದಿಸದಿದ್ದರೆ ಹಾಗೂ ಪರವಾನಗಿ ತೆಗೆದುಕೊಳ್ಳದೆ ಕಾಮಗಾರಿ ಆರಂಭಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜ. 18ರಿಂದ ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುವುದು ಎಂದು ನೋಟಿಸ್‌ನಲ್ಲಿ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ತಾಪಂ ಸದಸ್ಯ ಪ್ರಹ್ಲಾದ್ ಹೊಸಳ್ಳಿ, ಗ್ರಾಪಂ ಅಧ್ಯಕ್ಷ ರಮೇಶ ಲಮಾಣಿ, ಪಿಡಿಒ ಅಶ್ವಿನಿ ಕುರಡಗಿ, ಉಪಾಧ್ಯಕ್ಷೆ ನಾಗವ್ವ ಹುಡೇದ, ಗ್ರಾಮ ಲೆಕ್ಕಾಧಿಕಾರಿ ಎಸ್.ಐ. ಸತ್ತಿಗೇರಿ, ಸದಸ್ಯ ಮಲ್ಲಪ್ಪ ಹೊಸಳ್ಳಿ, ನಾಗವ್ವ ಹುಡೇದ, ಮಾಲಾ ಮೇವುಂಡಿ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.