ಗದಗ

ರೈತರಿಗೆ ಸುಗ್ಗಿ ಸಂಭ್ರಮ: ವಿಶೇಷ ಆಚರಣೆ

Published On :

ನರೇಗಲ್ಲ: ಈ ವರ್ಷ ಸ್ವಲ್ಪ ಉತ್ತಮ ಮಳೆಯಾಗಿ ಬೆಳೆಗಳು ಕಂಗೊಳಿಸುತ್ತಿರುವುದರಿಂದ ಈ ಭಾಗದಲ್ಲಿನ ರೈತರು ಸಡಗರದಿಂದ ಸಂಕ್ರಾಂತಿ ಹಬ್ಬ ಆಚರಣೆಯಲ್ಲಿ ತೊಡಗಿದ್ದಾರೆ.
ಗತಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಮಕರ ಸಂಕ್ರಾಂತಿ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಕಾಂತಿ ವೃತ್ತದಲ್ಲಿರುವ ಹನ್ನೆರಡು ರಾಶಿಗಳ ಪೈಕಿ ಯಾವುದಾದರೂ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಗೃಹಗಳು ಹೋಗುವ ಕ್ರಿಯೆಯನ್ನು ಸಂಕ್ರಾಂತಿ ಎನ್ನುತ್ತಾರೆ. ಇಲ್ಲಿ ವಿಶೇಷವಾಗಿ ಸೂರ್ಯ ಸಂಕ್ರಮಣದ ಕಾಲದಲ್ಲಿ ಸೂರ್ಯದೇವನನ್ನು ಭೇಟಿಯಾಗಲು ಸಂಕ್ರಾಂತಿ ಎಂಬ ದೇವಿಯು ಬರುತ್ತಾಳೆ. ಆದ್ದರಿಂದ ಅವಳ ಹಾಗೂ ಸೂರ್ಯದೇವನ ಪ್ರೀತಿಗೋಸ್ಕರ ಸ್ನಾನ ಹಾಗೂ ದಾನಾದಿಗಳನ್ನು ಮಾಡಿದರೆ ಅದು ಅಕ್ಷಯವಾಗುವುದೆಂಬುದು ಧರ್ಮ ಶಾಸ್ತ್ರಗಳಿಂದ ತಿಳಿದುಬರುತ್ತದೆ.
ಹಬ್ಬದ ವಿಶೇಷ: ಈ ದಿನದಂದು ಸಾರ್ವಜನಿಕರು ತಮ್ಮ ಭಕ್ತಿಗನುಗುಣವಾಗಿ ತಮ್ಮ ತಮ್ಮ ಮನೆಯ ದೇವರಿಗೆ, ತಮ್ಮ ಇಷ್ಟದ ದೇವರಿಗೆ ಹೋಗಿ ಅಲ್ಲಿರುವ ಹೊಳೆ, ಹಳ್ಳ ಅಥವಾ ನೀರಿರುವ ಪ್ರದೇಶದಲ್ಲಿ ಎಳ್ಳು ಹಾಗೂ ಅರಿಶಿಣವನ್ನು ದೇಹಕ್ಕೆ ಲೇಪಿಸಿಕೊಂಡು ಸ್ನಾನಮಾಡಿ, ದೇವರಿಗೆ ಕಾಯಿ, ಕರ್ಪೂರ ಮಾಡಿಸಿ ತಮ್ಮ ಭಕ್ತಿ ತೋರ್ಪಡಿಸಿದರೆ, ಕೆಲವರು ತಮ್ಮ ಮನೆಯಲ್ಲಿಯೇ ಸ್ನಾನಮಾಡಿ ಮನೆಯ ಸರ್ವ ಸದಸ್ಯರೊಂದಿಗೆ ಅಥವಾ ತಮ್ಮ ಸ್ನೇಹಿತರೊಂದಿಗೆ ಹಲವಾರು ಪ್ರೇಕ್ಷಣೀಯ ಸ್ಥಳ ವೀಕ್ಷಣೆ ಮಾಡಲು ಹೊರಡುತ್ತಾರೆ.
ಸಮೃದ್ಧಿ ಸಂಕೇತ: ಸಂಕ್ರಾಂತಿ ಕೃಷಿ ಸಮೃದ್ಧಿಯ ಸಂಕೇತವಾಗಿದೆ. ಈ ಸಮಯ ರೈತರ ಮನೆಗಳಲ್ಲಿ ದವಸ, ಧಾನ್ಯಗಳು ತುಂಬಿಕೊಳ್ಳುವ ಕಾಲ. ಇಂತ ಆಚರಣೆಯನ್ನು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಜನತೆ ಯಾವುದೇ ಜಾತಿ-ಭೇದವೆಣಿಸದೇ ಎಲ್ಲರೂ ಆಚರಿಸುತ್ತಾರೆ. ಈ ಸಮಯದಲ್ಲಿ ಎಲ್ಲಕಡೆ ಹೊಸ ಚಿಗುರುಕಂಡು ನಯನ ಮನೋಹರವಾಗಿರುವುದು. ಇದು ರೈತರಿಗೆ ಸುಗ್ಗಿ ಸಂಭ್ರಮದ ಕಾಲ. ಎಲ್ಲ ಕಡೆಗೂ ರಾಶಿಯ ಪೂಜೆಯು ಅತ್ಯಂತ ಸಡಗರದಿಂದ ನಡೆಯುತ್ತದೆ.  

ನಿಂಗರಾಜ ಬೇವಿನಕಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.