ಶಿರಹಟ್ಟಿಯಲ್ಲಿ ಸಡಗರದ ಮಕರ ಸಂಕ್ರಾಂತಿ
ಶಿರಹಟ್ಟಿ: ಮಕರ ಸಂಕ್ರಾಂತಿ ನಿಮಿತ್ತ ಮಂಗಳವಾರ ತಾಲೂಕಿನಲ್ಲಿನ ರೈತಾಪಿ ವರ್ಗ ಸೇರಿದಂತೆ ಸಾರ್ವಜನಿಕರು ಹೊಳೆ-ಇಟಗಿ ಹಾಗೂ ಸಾಸಲವಾಡ ಗ್ರಾಮದ ಹೊರ ವಲಯದಲ್ಲಿ ಹರಿದಿರುವ ತುಂಗಭದ್ರಾನದಿ ಮತ್ತು ಪುಣ್ಯ ಕ್ಷೇತ್ರ ವರವಿ ಮೌನೇಶ್ವರ ಮಠದ ಹಿಂಬದಿಯಲ್ಲಿರುವ ಅಂಬಲಿ ಹೊಂಡದಲ್ಲಿ ಸ್ನಾನ ಮತ್ತು ಪುಣ್ಯ ಕಾರ್ಯಗಳಲ್ಲಿ ತೊಡಗಿದ್ದರು. ತಮ್ಮ ಜಮೀನುಗಳಲ್ಲಿ ಪೂಜೆ, ಪುನಸ್ಕಾರ ಮಾಡಿ ಕೃತಜ್ಞತೆ ಸಲ್ಲಿಸಿದರು. ಮಹಾಭಾರತದ ಕಥೆಯನ್ನೇ ತುಲನಾತ್ಮಕವಾಗಿ ತೆಗೆದುಕೊಂಡರೆ ಮಹಾಭಾರತದಲ್ಲಿ ಭೀಷ್ಮ ಪ್ರಾಣ ಬಿಡುವ ಸಂದರ್ಭದಲ್ಲಿ ಹರಿಸ್ಮರಣೆ ಮಾಡುತ್ತಾ ಸಂಕ್ರಮಣದ ಪುಣ್ಯ ಕಾಲವನ್ನೇ ಕಾಯುತ್ತಿದ್ದನೆಂದು ಮಹಾಭಾರತದ ಉಲ್ಲೇಖಗಳಿಂದ ತಿಳಿದು ಬರುತ್ತದೆ. ಈ ಶುಭ ಸಂದರ್ಭದ ಮೂಹೂರ್ತದಲ್ಲಿ ಗಂಗಾ, ತುಂಗಾ, ಕೃಷ್ಣೆ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ಭಕ್ತರು ಗಂಗಾ ಪಾನ, ತುಂಗಾ ಸ್ನಾನ ಮಾಡಿ ಪುಣ್ಯದ ಮಡಿಲು ಸೇರುವ ಬಯಕೆ ಹೊಂದಿರುತ್ತಾರೆ. ಪುರಾಣ, ಪುಣ್ಯ ಕಥೆಗಳಲ್ಲಿನ ಪ್ರಕಾರ ದಕ್ಷಿಣಾಯಣದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲನ್ನು ಮಕರ ಸಂಕ್ರಾತಿಯ ಪುಣ್ಯದಿನದಂದು ತೆರೆಯುತ್ತಾರೆಂದು ಹೇಳಲಾಗುತ್ತಿದೆ. ಹಾಗೂ ಉತ್ತರಾಯಣವನ್ನು ದೇವತೆಗಳ ಕಾಲವೆಂದು ಉಲ್ಲೇಖಿಸಲಾಗುತ್ತಿದೆ. ವಿಶೇಷ ಮಹತ್ವ: ಮಕರ ಸಂಕ್ರಮಣಕ್ಕೆ ಇತಿಹಾಸದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಈ ದಿನದಂದು ಜನತೆ ತಮ್ಮ ಪಾಪ ಕರ್ಮಾದಿಗಳನ್ನು ತೊಳೆಯುವ ಪುಣ್ಯ ದಿನವೆಂದೇ ಭಾವಿಸಲಾಗುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳು ಭಕ್ತಿ, ಭಾವದಿಂದ ಈ ಹಬ್ಬದಲ್ಲಿ ಪಾಲ್ಗೊಳ್ಳುವುದು ಈ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಮಹಿಳೆಯರು ಸಂಕ್ರಾಂತಿಯಲ್ಲಿ ಹೊಸ ಬಟ್ಟೆ ತೊಟ್ಟು ಎಳ್ಳು ಬೆಲ್ಲ ನೀಡುವಲ್ಲಿ ತೊಡಗಿದ್ದರೆ, ಪುರುಷರು ಪೂಜೆ, ಪುನಸ್ಕಾರ ಮಾಡಿ ದೇವಾಲಯಗಳಿಗೆ ಭೇಟಿ ನೀಡಿ ಕೃತಾರ್ಥರಾಗುತ್ತಾರೆ. ಈ ಬಾರಿ ಬರಗಾಲದ ಸುಳಿಯಲ್ಲಿ ಸಿಲುಕಿದ ರೈತ ಈ ಸಂಕಷ್ಟವನ್ನು ಮರೆತು ವಿಜೃಂಭಣೆಯಿಂದ ಮಕರ ಸಂಕ್ರಾಂತಿಯನ್ನು ಆಚರಿಸಿದ್ದು ವಿಶೇಷವಾಗಿತ್ತು. ಅಸಂಖ್ಯಾತ ಭಕ್ತರು ಹಾಗೂ ಕುಟುಂಬ ಸಮೇತ ಚಕ್ಕಡಿ (ಬಂಡಿ) ಗಳಲ್ಲಿ ರೈತರು ಬಂದು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಹೊಳೆ-ಇಟಗಿ, ಶಿರಹಟ್ಟಿ, ಸಾಸಲವಾಡ, ವರವಿ ಮಾರ್ಗದ ರಸ್ತೆಗಳು ಜನರಿಂದ, ವಾಹನಗಳಿಂದ ತುಂಬಿಕೊಂಡಿದ್ದವು. ಯುವಕರ ಪಡೆ ಸೈಕಲ್ ಮೇಲೂ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕಪ್ಪತ್ತಗುಡ್ಡದ ಕಪ್ಪತ್ತಮಲ್ಲೇಶ್ವರ, ನಂದಿವೇರಿಮಠ, ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಮಠಗಳಿಗೂ ಭಕ್ತರು ಭೇಟಿ ನೀಡಿದರು.
ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

