ಗದಗ

ಅಕ್ರಮ ಕಟ್ಟಡ ನಿರ್ಮಾಣ ತಡೆಗೆ ಆಗ್ರಹ

Published On :

ಶಿರಹಟ್ಟಿ:  ಪಟ್ಟಣದ ವಾರ್ಡ್ ನಂ. 12ರ ಗರಡಿ ಮನೆಯ ಪಕ್ಕದಲ್ಲಿರುವ ಸರ್ಕಾರಿ ರಸ್ತೆ ಅತಿಕ್ರಮಣ ಮಾಡಿಕೊಂಡು ಕಾನೂನು ಬಾಹಿರವಾಗಿ ಮನೆ ಕಟ್ಟಡದ ಕೆಲಸ ಪ್ರಾರಂಭಿಸಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಇದೇ ಓಣಿಯ ನಿವಾಸಿ ವೀರಣ್ಣ ಚನ್ನವೀರಪ್ಪ ಮಜ್ಜಗಿ ಶಿರಹಟ್ಟಿ ಪಟ್ಟಣ ಪಂಚಾಯಿತಿಗೆ ಕಾಮಗಾರಿ ನಿಲ್ಲಿಸುವಂತೆ ಕಳೆದ ಸೆ. 9ರಂದು ತಕರಾರು ಅರ್ಜಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.  ಬುಧವಾರ ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡಿ, ಅಧಿಕಾರಿಗಳ ಕ್ರಮದ ವಿರುದ್ಧ ಹರಿಹಾಯ್ದ ಅವರು, ತಕರಾರು ಅರ್ಜಿ ಸಲ್ಲಿಸಿದ ಬಳಿಕವೂ ಸ್ಥಳಕ್ಕೆ ಆಗಮಿಸಿ ವಾಸ್ತವ ಸ್ಥಿತಿ ಅರಿಯದೇ ಸಾರ್ವಜನಿಕರ ಹಿತದೃಷ್ಟಿಯಿಂದ ನೀಡಿದ ತಕರಾರು ಅರ್ಜಿಯನ್ನು ಗಮನಿಸದೇ ಒಂದು ತಿಂಗಳ ಬಳಿಕ ಈರಣ್ಣ ಬಳಿಗೇರ ಎಂಬುವವರಿಗೆ ಕಟ್ಟಡ ಪರವಾನಗಿ ನೀಡಿದ್ದು ಸರಿಯಾದ ಕ್ರಮವಲ್ಲ ಎಂದು ದೂರಿದರು. ಮುಖ್ಯಾಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು, ರಾಜಕೀಯ ಒತ್ತಡಕ್ಕೆ ಮಣಿದು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ಪಪಂ ಮುಖ್ಯಾಧಿಕಾರಿ ಡಿ.ಟಿ. ದೊಡ್ಡಮನಿ ಸ್ಪಂದಿಸದೇ ಇರುವುದನ್ನು ಅರಿತು ಮಾನ್ಯ ಜಿಲ್ಲಾಧಿಕಾರಿಗಳಿಗೆ ಭೇಟಿಯಾಗಿ ಎಲ್ಲ ಮೂಲ ದಾಖಲಾತಿಗಳನ್ನು ನೀಡಿರುವುದಾಗಿ ತಿಳಿಸಿದರು. ದೂರುದಾರರು ನೀಡಿದ ಅರ್ಜಿಯ ಮೇಲೆಯೇ ಜಿಲ್ಲಾಧಿಕಾರಿಗಳು ತಡೆಯಾಜ್ಞೆಗೆ ಆದೇಶ ನೀಡಿದ್ದರೂ ವಿಳಂಬವಾಗುತ್ತಿರುವುದಕ್ಕೆ ಸಂಶಯ ವ್ಯಕ್ತಪಡಿಸಿದ್ದಾರೆ. ಮಾಹಿತಿ ಹಕ್ಕಿನಡಿ ಉಪ ವಿಭಾಗಾಧಿಕಾರಿಗಳಿಗೆ ಮೇಲ್ಮನವಿಯೊಂದನ್ನು ಸಲ್ಲಿಸಿದ್ದು, ತುರ್ತಾಗಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸತ್ಯಾಸತ್ಯತೆ ತಿಳಿದುಕೊಂಡು ಕ್ರಮಕ್ಕೆ ಮುಂದಾಗದೇ ಹೋದಲ್ಲಿ ಸಾರ್ವಜನಿಕರೆಲ್ಲರೂ ಸೇರಿ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ವೀರಣ್ಣ ಚನ್ನವೀರಪ್ಪ ಮಜ್ಜಗಿ ಎಚ್ಚರಿಕೆ ನೀಡಿದ್ದಾರೆ.
ಇಂದು ಶಿಗ್ಲಿಯಲ್ಲಿ ಶಿವಾನುಭವ
ಲಕ್ಷ್ಮೇಶ್ವರ:  ಸಮೀಪದ ಶಿಗ್ಲಿ ಗ್ರಾಮದ ಸೇವಾ ಮಂದಿರದಲ್ಲಿ 209ನೇ ಶಿವಾನಭವ ಜ. 16ರ ಸಂಜೆ 6ಗಂಟೆಗೆ ಜರಗಲಿದೆ. ಸಾನ್ನಿಧ್ಯವನ್ನು ಬೆಳ್ಳಟ್ಟಿಯ ರಾಮಲಿಂಗೇಶ್ವರಮಠದ ಬಸವರಾಜ ಶ್ರೀಗಳು ವಹಿಸುವರು. ಗ್ರಾಪಂ ಅಧ್ಯಕ್ಷ ಡಿ.ವೈ. ಹುನಗುಂದ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಶಿರಹಟ್ಟಿ ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ಗದಗ ಜಿಪಂನ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ನಿರ್ಮಲಾ ಬರದೂರ, ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ಸಿದ್ದಣ್ಣ ಯಲಿಗಾರ ಮುಂತಾದವರು ಆಗಮಿಸುವರು. ಅಲ್ಲದೇ ಗದಗ ಜಿಲ್ಲಾ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲವ್ವ ಸಜ್ಜನರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಭಕ್ತಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.