ಗದಗ

ಬರೆದಂತೆ ಬದುಕಿದವರು ಆದರ್ಶಪ್ರಾಯರು

Published On :

ಕನ್ನಡಪ್ರಭ ವಾರ್ತೆ, ಗದಗ, ಜ. 16
ಮೌಲ್ಯ, ಆದರ್ಶ ಕೇವಲ ಭಾಷಣ, ಘೋಷಣೆಗೆ ಸೀಮಿತವಾಗಬಾರದು, ಮೌಲ್ಯಗಳನ್ನು ಅಳವಡಿಸಿಕೊಂಡವರು ಸಮಾಜಕ್ಕೆ ಅದರ್ಶಪ್ರಾಯರಾಗಿದ್ದಾರೆ. ಅದರಂತೆ ಬರೆದಂತೆ ಬದುಕಿದ ಪಾ.ಲ. ಸುಬ್ರಹ್ಮಣ್ಯ ಯುವ ಬರಹಗಾರರಿಗೆ ಆದರ್ಶ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀ ಹೇಳಿದರು.
ಅವರು ಬುಧವಾರ ಸಂಜೆ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಅಚ್ಯುತಾಶ್ರಮ ಹಾಗೂ ಮೈಸೂರಿನ ಭಾರತಿ ಪ್ರಕಾಶನ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯಕ್ಕೆ ಸಾಮಾಜಿಕ ಕಳಕಳಿ ಜವಾಬ್ದಾರಿ ಇರಬೇಕು. ಮೌಲ್ಯಯುತವಾದ ಸಾಹಿತ್ಯ ಸಮಾಜಕ್ಕೆ ಮಾರ್ಗದರ್ಶಿಯಾಗಿರುತ್ತದೆ. ಆದ್ದರಿಂದ ಸಾಹಿತಿಗಳು ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವ ಸ್ವಸ್ಥ ಸಮಾಜ ನಿರ್ಮಿಸುವ ಕೃತಿಗಳನ್ನು ರಚಿಸಬೇಕೆಂದು ಸಲಹೆ ನೀಡಿದರು. ಪಾ.ಲ. ಸುಬ್ರಹ್ಮಣ್ಯರವರು ಬರೆದ ಆರೋಗ್ಯ ರೋಗ ನಿದಾನ ಅವರ ಆತ್ಮ ಚರಿತ್ರೆಯ ಶೈಲಿಯಲ್ಲಿದ್ದು ಮಾನವ ಸಹಜ ಅನುಭವಗಳಿಂದ ಪಡೆದ ಕೆಲವು ಗ್ರಹಿಕೆಗಳನ್ನು ಹೊಂದಿದ್ದು, ಅಲೋಪಥಿಯು ಗುಣಪಡಿಸಲಾಗದ ರೋಗಗಳನ್ನು ಹೋಮಿಯೋಪಥಿಯಿಂದ ಹೇಗೆ ಗುಣಪಡಿಸಬಹುದು ಎಂಬುವುದಕ್ಕೆ ನಿದರ್ಶನವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಶ್ರೇಷ್ಠ ಶಿಕ್ಷಣ ತಜ್ಞ ಪಾ.ಲ. ಸುಬ್ರಹ್ಮಣ್ಯರವರು ಸಾಮಾನ್ಯರಿಂದ ಅಸಾಮಾನ್ಯ ವ್ಯಕ್ತಿತ್ವಕ್ಕೇರಿದವರು. ಲಾಭಕ್ಕಿಂತ ಸೇವೆಯೇ ಮುಖ್ಯವೆಂಬ ಭಾರತೀಯ ಹಾಗೂ ಪೌರವಾತ್ಯ ಆದರ್ಶವಾದಿ ದೃಷ್ಟಿಕೋನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳಿದ ಅವರ ಸರಳ ಹಾಗೂ ಸಾತ್ವಿಕ ಬದುಕು ಇತರರಿಗೆ ಪ್ರೇರಕವಾಗಿದೆ ಎಂದರು. ತಾಳಿಕೋಟೆಯ ಸಾಹಿತಿ ಡಾ. ಗುರುಪಾದ ಘೀವಾರಿ, ಲೇಖಕ ಪಾ.ಲ. ಸುಬ್ರಹ್ಮಣ್ಯರ, ದತ್ತಪ್ರಸನ್ನ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.  ಗುರು ಅಚ್ಯುತರ ಕಾಯಕಲ್ಪ ಹಾಗೂ ಮೃತ್ಯು ಸಾಧನೆ, ಯೋಗ ಆಧ್ಯಾತ್ಮಸಾಧನೆ-ಪರಮಪದವಿ ಹಾಗೂ ಎಚ್.ಸಿ.ಇ.ಎಸ್. ಪಪೂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಹಾಗೂ ಹೋಮಿಯೋಪಥಿ ವೈದ್ಯ ಪಾ.ಲ. ಸುಬ್ರಹ್ಮಣ್ಯರವರು ರಚಿಸಿದ ಆರೋಗ್ಯ ಹಾಗೂ ರೋಗ ನಿದಾನ, ಗಾಂಧೀಜಿಗೊಂದು ಪತ್ರ ಹಾಗೂ ಇತರೆ ಕವನಗಳು, ವಿವೇಚನೆ-ವಿಮರ್ಶಾ ಸಂಕಲನ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಅಚ್ಯುತಾಶ್ರಮದ ಅಧ್ಯಕ್ಷ ಎನ್.ಎಸ್. ಬಾವಿಕಟ್ಟಿ, ಕಾರ್ಯದರ್ಶಿ ನಿಜಗುಣ ದಂಡಿನ, ರಮೇಶ ತೇರದಾಳ, ಬೇಂದ್ರೇ ರಾಷ್ಟ್ರೀಯ ಸ್ಮಾರಕದ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ, ದುಶ್ಯಂತ ನಾಡಗೌಡ, ವಸಂತ ಸವದಿ, ಪ್ರಾ. ಎಸ್.ಎನ್. ಪಾಟೀಲ, ಡಾ. ವನಪಾಲ ಮಂಗಸೂಳಿ, ಪ್ರಾ. ಕೆ.ಎಚ್. ಬೇಲೂರ, ಅಂದಾನಪ್ಪ ವಿಭೂತಿ, ವರುಣ ಸುಬ್ರಹ್ಮಣ್ಯಂ, ವೆಂಕಣ್ಣ ಜೋಶಿ ಮುಂತಾದವರು ಉಪಸ್ಥಿತರಿದ್ದರು. ಡಾ. ಎ.ಎಸ್. ಗದಗ ಸ್ವಾಗತಿಸಿದರು. ಸಿ.ಎಸ್. ಪ್ರಕಾಶ ನಿರೂಪಿಸಿದರು. ಬಿ.ಎನ್. ಶ್ರೀನಿವಾಸ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.