ಪುಟ್ಟರಾಜರ ಪಾತ್ರ ನನ್ನ ಜೀವನಕ್ಕೆ ಶೇಷ್ಠ ಕೊಡುಗೆ
ಕನ್ನಡಪ್ರಭ ವಾರ್ತೆ, ಗದಗ, ಜ. 22
ಪುಟ್ಟರಾಜ ಕವಿ, ಗವಾಯಿಗಳವರ ಪಾತ್ರ ನಿರ್ವಹಣೆ ಮಾಡುವ ಸದಾವಕಾಶ ನನಗೆ ಲಭ್ಯವಾಗಿರುವುದು ನನ್ನ ಕಲಾ ಜೀವನದ ಶ್ರೇಷ್ಠ ಕೊಡುಗೆಯಾಗಿದೆ ಎಂದು ನಾಯಕ ನಟ ವಿಜಯ ರಾಘವೇಂದ್ರ ಹೇಳಿದರು.
ಬುಧವಾರ ನಗರದ ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಶಿವಯೋಗಿ ಶ್ರೀ ಪುಟ್ಟಯ್ಯಜ್ಜ ಚಲನಚಿತ್ರ ಚಿತ್ರೀಕರಣ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
18 ವರ್ಷಗಳ ಹಿಂದೆ ಗಾನಯೋಗಿ ಪಂಚಾಕ್ಷರಿ ಚಲನಚಿತ್ರದಲ್ಲಿ ಬಾಲನಟನಾಗಿ ಪಾತ್ರ ನಿರ್ವಹಿಸಿದ ನನಗೆ ಇಂದು ಪುಟ್ಟರಾಜರ ಪಾತ್ರ ನಿರ್ವಹಿಸುವ ಸೌಭಾಗ್ಯ ದೊರೆತಿದೆ. ಅತ್ಯಂತ ಜವಾಬ್ದಾರಿಯುತ ಪಾತ್ರವಾಗಿದ್ದು, ನನ್ನ ಕಲಾ ಜೀವನದ ಎಲ್ಲ ಪಾತ್ರಗಳಿಗಿಂತಲೂ ಅತ್ಯಂತ ವಿಭಿನ್ನವಾದ ಪಾತ್ರವನ್ನು ಅಭಿನಯಿಸುತ್ತಿದ್ದೇನೆ. ಅಸಾಮಾನ್ಯ, ದೈವ ಕಳೆಯುಳ್ಳ ವ್ಯಕ್ತಿಯ ಪಾತ್ರ ಮಾಡಲು ಶ್ರದ್ಧೆ ಮತ್ತು ಅವರ ಕುರಿತು ಸಂಪೂರ್ಣ ಅರಿವು ಹೊಂದಬೇಕಿದೆ. ಈ ಕುರಿತು ಈಗಾಗಲೇ ಪಂಡಿತ ಪುಟ್ಟರಾಜರ ವಿಡಿಯೋಗಳು ಹಾಗೂ ಅವರ ಪುಸ್ತಕ ಸೇರಿದಂತೆ ಅವರ ಜೀವನ ಮತ್ತು ಅವರ ಹಾವ ಭಾವಗಳ ಬಗ್ಗೆ ಅವರ ಸಮಗ್ರ ವ್ಯಕ್ತಿತ್ವದ ಚಿತ್ರಣವನ್ನು ಮನನ ಮಾಡಿಕೊಂಡು ಪಾತ್ರ ನಿರ್ವಹಿಸುತ್ತಿದ್ದೇನೆ ಎಂದರು. ಚಿತ್ರದ ನಿರ್ದೇಶಕಿ ಹಂಸ ವಿಜೇತಾ ಮಾತನಾಡಿ, ಈಗಾಗಲೇ ಶೇ. 70ರಷ್ಟು ಚಿತ್ರೀಕರಣವನ್ನು ಬಾದಾಮಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾಡಲಾಗಿದೆ. ಇನ್ನುಳಿದ ಚಿತ್ರೀಕರಣವನ್ನು ಗದಗ ಹಾಗೂ ಪುಟ್ಟರಾಜರ ಹುಟ್ಟೂರಾದ ಹಾವೇರಿ ಜಿಲ್ಲೆಯ ದೇವಗಿರಿಯ ಭಾಗದಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಈ ಕುರಿತು ಸಮಗ್ರ ಅಧ್ಯಯನ ನಡೆಸಿ ನಂತರ ಚಿತ್ರ ನಿರ್ಮಾಣಕ್ಕೆ ಕೈ ಹಾಕಲಾಗಿದೆ. ಪುಟ್ಟರಾಜರ ತಾಯಿ ಪಾತ್ರವನ್ನು ಶ್ರತಿ ನಿರ್ವಹಿಸುತ್ತಿದ್ದಾರೆ. ಮಾವನಾಗಿ ಅಭಿಜಿತ್, ಈಶ್ವರನ ಪಾತ್ರದಲ್ಲಿ ನಟ ಶಶಿಕುಮಾರ, ರವೀಶ್ ನಟಿಸುತ್ತಿದ್ದಾರೆ.
ರಾಜೇಶ್ ಕೃಷ್ಣನ್ 7 ಹಾಡುಗಳಿಗೆ ಧ್ವನಿ ನೀಡಿದ್ದಾರೆ. 2014ರ ಮಾರ್ಚ್ 3ರಂದು ಪುಟ್ಟರಾಜರ ಶತಮಾನೋತ್ಸವ ಸಂದರ್ಭದಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಿರ್ಮಾಪಕ ಶಾಮ್ ನವಲೆ ಮಾತನಾಡಿ, ಭಕ್ತಿ ಪ್ರಧಾನ ಚಿತ್ರಗಳ ಸಾಲಿನಲ್ಲಿಯೇ ಇದೊಂದು ಮೈಲುಗಲ್ಲಾಗುವಂತಹ ಚಿತ್ರವಾಗಿದ್ದು, 2 ಕೋಟಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಪುಟ್ಟರಾಜರ ಉತ್ತರಾಧಿಕಾರಿ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಬೆಳಗ್ಗೆ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಆಶ್ರಮದ ವ್ಯವಸ್ಥಾಪಕ ಬಸವರಾಜ ಹಿಡ್ಕಿಮಠ ಮುಂತಾದವರು ಹಾಜರಿದ್ದರು. ಜ. 22ರಿಂದ 10 ದಿನಗಳ ಕಾಲ ಪುಣ್ಯಾಶ್ರಮ ಸೇರಿದಂತೆ ಗದಗ ನಗರದ ವಿವಿಧ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

