ಗದಗ

ಸುರಕ್ಷಿತ ಪ್ರಯಾಣಕ್ಕೆ ಸಂಚಾರಿ ನಿಯಮ ಉಲ್ಲಂಘಿಸದಿರಿ

Published On :

ರೋಣ: ಸುರಕ್ಷಿತ ಪ್ರಯಾಣಕ್ಕೆ ಸಂಚಾರ ನಿಯಮ ಪಾಲನೆ ಅತಿ ಅವಶ್ಯವಾಗಿದೆ ಎಂದು ರೋಣ ಪಿ.ಎಸ್.ಐ. ಡಿ.ಬಿ. ಪಾಟೀಲ ಹೇಳಿದರು.
ಅವರು ಬುಧವಾರ ಪಟ್ಟಣದ ಆರ್.ಜಿ.ಎಸ್. ಸಂಸ್ಥೆಯ ರಾಣಿ ಚನ್ನಮ್ಮ ಪಪೂ ಕಾಲೇಜಿನಲ್ಲಿ 25ನೇ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ವಿದ್ಯಾರ್ಥಿಗಳಿಗಾಗಿ ಸಂಚಾರ ನಿಯಮ ಪಾಲನೆ ಕುರಿತು ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.  ಇತ್ತೀಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಬೈಕ್ ಸವಾರಿ ಮಾಡುವ ಸಂದರ್ಭದಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತಾ ಹೋಗುತ್ತಾರೆ. ಅಲ್ಲದೇ ಮದ್ಯ ಸೇವನೆ ಮಾಡಿ ಚಲಾಯಿಸುತ್ತಿರುವುದು ಕಂಡು ಬರುತ್ತಿದೆ. ಇದು ಸರಿಯಾದ ಬೆಳವಣಿಗೆಯಲ್ಲ. ಇದರಿಂದ ನಮ್ಮ ಜೀವಕ್ಕೆ ನಾವೇ ಸಂಚಕಾರ ತಂದುಕೊಳ್ಳುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಸ್.ಎಲ್. ಯಲಿಗಾರ, ಉಪನ್ಯಾಸಕರಾದ ಡಿ.ಬಿ. ಪಾಟೀಲ, ಎ,ಎಸ್. ಖತೀಬ, ಸಿ.ಬಿ. ಕಂದಗಲ್, ಎನ್.ಕೆ. ಕಿತ್ತಲಿ, ವಿ.ಎಸ್. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
ಸಿದ್ಧರಾಮೇಶ್ವರ ಜಯಂತಿ: ಸರ್ಕಾರದ ನಿರ್ಧಾರಕ್ಕೆ ಸಂತಸ
ನರೇಗಲ್ಲ:  ಸಮತಾವಾದ, ಕಾಯಕನಿಷ್ಠೆ ಹಾಗೂ ಸಮಾಜದ ಅಂಕುಡೊಂಕು ತಿದ್ದಲು ಶ್ರಮಿಸಿದ ಮಾನವತಾವಾದಿ ಶರಣ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆಗೆ ಸರ್ಕಾರ ನಿರ್ಧಸಿರುವುದು ಸಂತಸ ತಂದಿದೆ ಎಂದು ನರೇಗಲ್ ಭೋವಿ ಸಮಾಜದ ಹಿರಿಯ ರಾಮಣ್ಣ ಹಾಲಕೆರಿ ಅಭಿಪ್ರಾಯಪಟ್ಟರು. ಅವರು ಈಚೆಗೆ ಸ್ಥಳೀಯ ಓಂ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶೀವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆಯಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಅಶೋಕ ಬೇವಿನಕಟ್ಟಿ ಮಾತನಾಡಿ, ಸ್ವಾಸ್ಥ್ಯ ಸಮಾಜಕ್ಕೆ ಬೇಕಾದ ಸಾಮರಸ್ಯ, ಸಹಕಾರಕ್ಕೆ ಇಂತಹ ಶರಣರ ಜಯಂತಿ ಆಚರಣೆ ಅವಶ್ಯ ಎಂದರು. ಸಹಶಿಕ್ಷಕಿ ಜಿ.ಜಿ. ಪಾರ್ವತಿಮಠ ನಿರೂಪಿಸಿದರು. ಜೆ.ವಿ. ಕೆರಿಯವರ ಸ್ವಾಗತಿಸಿದರು. ವಿ.ವಿ. ನಿಟಾಲಿ ವಂದಿಸಿದರು. ನರೇಗಲ್ ಪಪಂ ಸದಸ್ಯ ಯಲ್ಲಪ್ಪ ಮಣ್ಣೊಡ್ಡರ, ಭೀಮಸಿ ಹನುಮಸಾಗರ, ಹುಲಗಪ್ಪ ಬಂಡಿವಡ್ಡರ, ಪೋತರಾಜ ಮಣ್ಣೊಡ್ಡರ, ಎನ್.ಆರ್. ಬಡಿಗಣ್ಣವರ, ಆರ್.ಬಿ. ಕೀರ್ತಿಗೌಡ್ರ, ಭಾಗ್ಯಾ ಕುಲಕರ್ಣಿ, ಐ.ಬಿ. ಶಿಳ್ಳಿನ, ವೈ.ಎಚ್. ಹೊಂದಗಲ್, ಮುತ್ತಣ್ಣ ಚಿಗರಿ ಉಪಸ್ಥಿತರಿದ್ದರು.
ಇಂದು ವಾರ್ಷಿಕೋತ್ಸವ
ಲಕ್ಷ್ಮೇಶ್ವರ:  ಪಟ್ಟಣದ ದತ್ತಾತ್ರೇಯ ವಿದ್ಯಾಸಂಸ್ಥೆಯ ವಾರ್ಷಿಕ ಸ್ನೇಹಸಮ್ಮೇಳನ ಕಾರ್ಯಕ್ರಮವು ಜ. 25, 26ರ ಕೋರ್ಟ್ ಹತ್ತಿರವಿರುವ ವಿದ್ಯಾಲಯದ ಆವರಣದಲ್ಲಿ ನಡೆಯಲಿದೆ. ಜ. 25ರ ಬೆಳಗ್ಗೆ 9.30 ಗಂಟೆಗೆ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭ ಜರುಗಲಿದೆ. ಸಾನ್ನಿಧ್ಯವನ್ನು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗದೇವರು ವಹಿಸುವರು. ಶಾಸಕ ರಾಮಕೃಷ್ಣ ದೊಡ್ಡಮನಿ ಉದ್ಘಾಟಿಸುವರು. ಪುರಸಭೆಯ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಗೋಕಾಕದ ಹಾಸ್ಯ ಕಲಾವಿದರಾದ ಪ್ರವೀಣಕುಮಾರ ಗಸ್ತಿ ಹಾಗೂ ಯಲ್ಲೇಶಕುಮಾರ ಆಗಮಿಸಲಿದ್ದಾರೆ. ನೈಜೀರಿಯಾದ ಮಿಸ್ ಬರಾಕಾ ಹಾಗೂ ಸಂಗಡಿಗರು ವಿಶೇಷ ಆಮಂತ್ರಿರರಾಗಿ ಆಗಮಿಸಲಿದ್ದಾರೆ. ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದ ಮೇವುಂಡಿಯ ಆನಂದ ಕರಿಯಮ್ಮನವರ ಅವರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 3 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯ ಅಶೋಕ ಪೂಜಾರ ವಹಿಸುವರು. ಗೋಕಾಕದ ಹಾಸ್ಯ ಕಲಾವಿದ ಸಂಜು ಮುರಗೋಡ ಆಗಮಿಸಲಿದ್ದಾರೆ.
ಇಂದು ಅಡಿಗಲ್ಲು ಸಮಾರಂಭ
ಗದಗ: ಜಿಪಂ, ತಾಪಂ ಗದಗ, ಲೋಕೋಪಯೋಗಿ ಇಲಾಖೆ ಗದಗ, ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಹಾಗೂ ಗ್ರಾಪಂ ಸೊರಟೂರ ಇವುಗಳ ಆಶ್ರಯದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭ ಜ. 25ರ ಮಧ್ಯಾಹ್ನ 12 ಗಂಟೆಗೆ ಸೊರಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಮೈದಾನದಲ್ಲಿ ಜರುಗಲಿದೆ. ಸೊರಟೂರಿನ ಅನ್ನದಾನೇಶ್ವರ ಶಾಖಾ ಮಠದ ಶಿವಯೋಗೀಶ್ವರ ಶ್ರೀಗಳು ಸಾನ್ನಿಧ್ಯ ವಹಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಸೊರಟೂರ ಗ್ರಾಪಂ ಅಧ್ಯಕ್ಷ ಶಂಕ್ರಪ್ಪ ಪವಾರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂಸದರು, ಶಾಸಕರು, ಜಿಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ತಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು,  ಮುಂಡರಗಿ ಎಪಿಎಂಸಿ ಅಧ್ಯಕ್ಷರು, ಕೆ.ಸಿ.ಸಿ. ಬ್ಯಾಂಕ್ ಅಧ್ಯಕ್ಷರು ಮುಂತಾದವರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.