ಹಂದಿ ಹಾವಳಿಗೆ ಹಾಳಾದ ಜೋಳ
ಲಕ್ಷ್ಮೇಶ್ವರ: ಪಟ್ಟಣದ ಸುತ್ತಮುತ್ತಲಿನ ಹೊರವಲಯದಲ್ಲಿನ ಹೊಲಗಳಿಗೆ ಹಂದಿಗಳು ರಾತ್ರಿ ವೇಳೆ ನುಗ್ಗಿ ಜೋಳದ ಬೆಳೆಯನ್ನು ತಿಂದು ನಾಶಗೊಳಿಸಿದ ಘಟನೆ ಸೋಮವಾರ ರಾತ್ರಿ ವೇಳೆಯಲ್ಲಿ ಜರುಗಿದೆ.
ಕೋಡಿ ಯಲ್ಲಮ್ಮನ ದೇವಸ್ಥಾನದ ಹತ್ತಿರದ ವಿರುಪಾಕ್ಷಪ್ಪ ಆದಿ ಎಂಬ ರೈತರಿಗೆ ಸೇರಿದ 4 ಎಕರೆ ಹೊಲದಲ್ಲಿ ಸುಮಾರು 2 ಎಕರೆಯಲ್ಲಿ ಜೋಳ ಬಿತ್ತನೆ ಮಾಡಿದ್ದರು. ಇನ್ನೇನು ಜೋಳ ಕೊಯ್ಲು ಮಾಡಬೇಕೆನ್ನುವ ಹೊತ್ತಿನಲ್ಲಿ ಬೆಳೆದ ಜೋಳದ ಬೆಳೆಯನ್ನು ರಾತ್ರಿ ವೇಳೆಯಲ್ಲಿ ಹೊಲಕ್ಕೆ ನುಗ್ಗಿದ ಹಂದಿಗಳು ತಿಂದುಹಾಕಿದ್ದು, ಜೋಳದ ತೆನೆಯನ್ನು ತಿನ್ನುವ ಜತೆಯಲ್ಲಿ ಜೋಳದ ದಂಟುಗಳನ್ನು ಕೆಡವಿ ತುಳಿದಾಡಿ ಹಾಳು ಮಾಡಿವೆ. ಇಂತಹ ಮೇವನ್ನು ದನಗಳು ತಿನ್ನುವುದಿಲ್ಲವೆಂಬುದು ರೈತರ ಅಳಲಾಗಿದೆ.
ಹೀಗಾಗಿ ಜೋಳ ತೆನೆಗಳು ಹಾಗೂ ಮೇವು ಎರಡು ಹಾಳಾಗಿ ಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗಿಲ್ಲವೆಂಬಂತಾಗಿದೆ.
ಪಟ್ಟಣದ ಹೊರವಲಯದಲ್ಲಿನ ಹೊಲಗಳಿಗೆ ನುಗ್ಗುವ ಹಂದಿಗಳು ಕಡಲೆ, ಶೇಂಗಾ, ಗೋಧಿ ಬೆಳೆಗಳನ್ನು ತಿಂದು ಹಾಕುತ್ತಿವೆ. ಇದರ ನಷ್ಟವನ್ನು ಹಂದಿ ಮಾಲಿಕರು ಇಲ್ಲವೇ ಪುರಸಭೆಯವರು ಅಥವಾ ಸರ್ಕಾರ ತುಂಬಿಕೊಡಬೇಕು ಎಂದು ರೈತ ವಿರುಪಾಕ್ಷಪ್ಪ ಆದಿ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದರೂ ಪುರಸಭೆಯ ಅಧಿಕಾರಗಳು ಹಂದಿ ಸಾಕುವವರಿಗೆ ಯಾವುದೇ ರೀತಿಯ ನಿರ್ಬಂಧ ಹೇರುವಲ್ಲಿ ಹಾಗೂ ಅವರ ಮೇಲೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗುತ್ತಿದ್ದಾರೆ. ರಾತ್ರಿ ವೇಳೆ ಪಟ್ಟಣದಲ್ಲಿ ಹಂದಿ ಸಾಕಾಣಿಕೆ ಮಾಡುವ ಜನರು ಬೇರೆ ಬೇರೆ ಪ್ರದೇಶಗಳಿಂದ ಹಂದಿಗಳನ್ನು ತಂದು ಇಲ್ಲಿ ಬಿಟ್ಟು ಹೋಗುತ್ತಿದ್ದಾರೆ.
ಹೀಗಾಗಿ ಪಟ್ಟಣವು ಹಂದಿಗಳ ಬೀಡಾಗುತ್ತಿದೆ ಎನ್ನುವಂತೆ ಭಾಸವಾಗುತ್ತಿದೆ. ಪುರಸಭೆಯವರು ಹಂದಿ ಸಾಕಾಣಿಕೆ ಮಾಡುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಪುರಸಭೆಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ವಿರುಪಾಕ್ಷಪ್ಪ ಆದಿ, ಗಂಗಾಧರ ಮೆಣಸಿನಕಾಯಿ, ಮಂಜುನಾಥ ಮಾಗಡಿ, ಸಿದ್ದು ರಾಚನಾಯ್ಕರ ಮುಂತಾದವರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

