ಗದಗ

ಮಳೆ ಅಭಾವ: ಬಿಟಿ ಹತ್ತಿ ಬೆಳೆ ಹರಗುತ್ತಿರುವ ರೈತರು

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜು. 3
ಒಂದೆಡೆ ಬಿತ್ತಿದ ಬೀಜಗಳಿಗೆ ಇಲಿಗಳ ಕಾಟ, ಇನ್ನೊಂದೆಡೆ ಬೀಜಗಳು ಮಳೆ ಇಲ್ಲದೆ ಬರದ ಬೇಗೆಯಲ್ಲಿ ಕಮರಿ ಹೋಗುತ್ತಿರುವ ಸಂಕಟ. ಹೀಗೆ ನಮ್ಮ ರೈತರು ಇನ್ನಿಲ್ಲದ ಸಂಕಷ್ಟವನ್ನು ಅನುಭವಿಸುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಮಳೆ ಇಲ್ಲದೆ ಮೇಲೇಳಲು ಆಗದೆ ಬಾಡಿ ಹೋಗುತ್ತಿರುವ ಬಿಟಿ ಹತ್ತಿಯನ್ನು ಹರಗುತ್ತಿರುವುದು ಬರದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಲಕ್ಷ್ಮೇಶ್ವರ ಹೋಬಳಿಯ ರಾಮಗೇರಿ, ಗೊಜನೂರು, ಬಸಾಪುರ, ಪು ಬಡ್ನಿ, ಬಟ್ಟೂರ, ಬೂದಿಹಾಳ, ಶಿಗ್ಲಿ, ಯಳವತ್ತಿ ಹಾಗೂ ಲಕ್ಷ್ಮೇಶ್ವರಗಳಲ್ಲಿ ಶೇಂಗಾ, ಇರುಳ್ಳಿ, ಬಿಟಿ ಹತ್ತಿ ಬೀಜಗಳನ್ನು ಇಲಿಗಳು ತಿಂದು ಹಾಳು ಮಾಡುತ್ತಿರುವುದು ರೈತರಿಗೆ ತಲೆ ನೋವಾಗಿದೆ. ಮತ್ತೆ ಈಗ ಮಳೆಯು ಕೈಕೊಟ್ಟಿದ್ದರಿಂದ ಬಿತ್ತಿದ ಬೀಜಗಳು ಮೊಳಕೆಯೊಡೆಯದೆ ಇರುವುದು ಒಂದು ಕಡೆಯಾದರೆ ಮಳೆ ಕೊರತೆಯಿಂದ ಅಲ್ಪಸ್ವಲ್ಪ ಬೆಳೆದ ಬೆಳೆಗಳು  ಕಮರಿ ಹೋಗುತ್ತಿರುವ ಬೆಳೆಯನ್ನು ರೈತರು ಹರಗಲು ಮುಂದಾಗುತ್ತಿದ್ದಾರೆ.
ಪಟ್ಟಣದ ರೈತರಾದ ಚೆಂದ್ರಣ್ಣ ಮೆಕ್ಕಿಯವರು ತಮ್ಮ 12 ಎಕರೆ ಹೊಲದಲ್ಲಿ ಬಿಟಿ ಹತ್ತಿ ಬೀಜಗಳನ್ನು ಬಿತ್ತನೆ ಮಾಡಿದ್ದರು. ಆದರೆ ಸುಮಾರು ಅರ್ಧದಷ್ಟು ಬೀಜಗಳನ್ನು ಇಲಿಗಳು ತಿಂದು ಹಾಕಿವೆ. ಇನ್ನುಳಿದ ಹೊಲದಲ್ಲಿನ ಬೆಳೆದಿದ್ದ ಹತ್ತಿ ಬೆಳೆಯು ಬಾಡುತ್ತಿದೆ. ಹೀಗಾಗಿ ಅರ್ಧ ಬೆಳೆದಿರುವ ಬೆಳೆಯನ್ನು ಹರಗುತ್ತಿದ್ದೇವೆ ಎಂದು ನೊಂದು ನುಡಿಯುತ್ತಾರೆ. ಇಲಿಗಳ ಕಾಟ ಮತ್ತು ಮುಂಗಾರು ಮಳೆಯ ವೈಫಲ್ಯವು ರೈತರನ್ನು ಸಂಕಷ್ಟಕ್ಕೆ ಗುರಿ ಮಾಡಿದೆ. ಹೀಗಾಗಿ ಬಿಟಿ ಹತ್ತಿ ಬೆಳೆಯನ್ನು ಹರಗುತ್ತಿರುವುದಾಗಿ ದುಃಖದಿಂದ ನುಡಿಯುತ್ತಾರೆ. ಸಾವಿರಾರು ರುಪಾಯಿ ಖರ್ಚು ಮಾಡಿ ಬಿತ್ತಿದ ಬೀಜಗಳನ್ನು ಇಲಿಗಳು ತಿಂದು ಹಾಕಿದ್ದು ಹಾಗೂ ಅಲ್ಲೊಂದು ಇಲ್ಲೊಂದು ಬೆಳೆದ ಹತ್ತಿ ಬೆಳೆಯನ್ನು ನಮ್ಮ ಕೈಯಾರೆ ನಾವೆ ಹರಗುವ ಹಂತಕ್ಕೆ ತಂದಿಟ್ಟಿರುವ ಮಳೆರಾಯನಿಗೆ ಒಂದಿಷ್ಟು ಕರುಣೆ ಇಲ್ಲವೆ ಎಂದು ನೊಂದು ನುಡಿಯುತ್ತಾರೆ. ಲಕ್ಷ್ಮೇಶ್ವರ ಹೋಬಳಿಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ಬಿಟಿ ಹತ್ತಿ, ಈರುಳ್ಳಿ, ಹೆಸರು, ಗೋವಿನಜೋಳ, ಹೈಬ್ರೀಡ್ ಜೋಳವನ್ನು ಬಿತ್ತನೆ ಮಾಡಲಾಗಿದ್ದು ಈಗ ಮಳೆ ಇಲ್ಲದೆ ಬೆಳೆಗಳು ಒಣಗಿ ಹೋಗುವ ಹಂತಕ್ಕೆ ಬಂದಿದ್ದು ಮುಂಗಾರು ಇಲ್ಲದೆ ರೈತರು ಕಂಗಾಲು ಆಗಿರುವುದು ದುರಂತದ ಸಂಗತಿಯಾಗಿದೆ.

 ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.