ಗದಗ

ಕಲ್ಮಶ ಕಿತ್ತು ಹಾಕಿ ಭಾವೈಕ್ಯ ಸಾರಿದ ಶರೀಫರು

Published On :

ಶಿಗ್ಗಾಂವಿ: ಜಗತ್ತಿನ ಜನರ ಮನಸ್ಸಿನಲ್ಲಿ ಬೇರೂರಿದ್ದ ವೈಮನಸ್ಸಿನ ಕಲ್ಮಶ ಕಿತ್ತು ಹಾಕಿ ಭಾವೈಕ್ಯತೆ ಹಾಗೂ ಸೌಹಾರ್ದತೆಯ ಬೇರನ್ನು ಗಟ್ಟಿಗೊಳಿಸಲು ಜನ್ಮ ತಾಳಿದ ಸತ್ಪುರುಷ ಶರೀಫರು ಎಂದು ಬೆಳಗಾವಿಯ ಲಿಂಗರಾಜ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಬಸವರಾಜ ಜಗಜಂಪಿ ಹೇಳಿದರು.
ತಾಲೂಕಿನ ಶಿಶುನಾಳ ಗ್ರಾಮದ ಶರೀಫಗಿರಿಯಲ್ಲಿ ಶ್ರೀ ಶರೀಫ್ ಶಿವಯೋಗಿ ಮತ್ತು ಗುರುಗೋವಿಂದ ಶಿವಯೋಗಿ ಪಂಚಾಗ್ನಿಮಠ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಗುರುವಾರ ಜರುಗಿದ ಸಂತ ಶ್ರೀ ಶರೀಫ್ ಶಿವಯೋಗಿಗಳ 195ನೇ ಜಯಂತ್ಯುತ್ಸವ ಹಾಗೂ 125ನೇ ಪುಣ್ಯ ಸ್ಮರಣೋತ್ಸವದ ಗುರುನಮನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ಶರಿಫರ ಆದರ್ಶದ ಪದಗಳು ಇಂದಿನ ಜನರ ಬದುಕಿಗೆ ಮಾರ್ಗದರ್ಶನವಾಗಿವೆ ಎಂದರು. ಲೋಕದ ಪುಣ್ಯ ತುಂಬಿ ಬಂದಾಗ ಮಾತ್ರ ಶಿಶುನಾಳದ ಶರೀಫರಂತಹ ಶಿವಯೋಗಿಗಳು ಈ ಭೂಮಿ ಮೇಲೆ ಜನಿಸಲು ಸಾಧ್ಯ ಜ್ಞಾನ ಜಂಗಮಸ್ವರೂಪಿಯಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂಬುದನ್ನು ಶರೀಫರು ತೋರಿಸಿಕೊಟ್ಟಿದ್ದಾರೆ ಎಂದರು.
ಧರ್ಮದರ್ಶಿ ಬಸವರಾಜ ಮರಳಿ ಪ್ರಾಸ್ತಾವಿಕ ಮಾತನಾಡಿ, ಹೇಸಿಯಾಗಿರುವ ಮಾನವ ಜನ್ಮವನ್ನು ಶರೀಫರು ಹೇಳಿದಂತೆ ಇಂದು ಸೋಸಿ ನೋಡಬೇಕಿದೆ. ಅವರ ತತ್ವಪದದ ಅರ್ಥ ಹಾಗೂ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜನ್ಮ ಸಾರ್ಥಕವಾಗಲಿದೆ. ಸಾನ್ನಿಧ್ಯ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಧಾರವಾಡ ಸರ್ವಧರ್ಮ ಸಮನ್ವಯ ಪೀಠದ ಅಧ್ಯಕ್ಷ ಸಂಗಮಾನಂದಜಿ ಶ್ರೀಗಳು ಆಶೀರ್ವಚನ ನೀಡಿದರು.
ಧಾರವಾಡ ದಕ್ಷಿಣ ಕ್ಷೇತ್ರದ ಸಂಸದ ಪ್ರಹ್ಲಾದ ಜೋಷಿ ಮಾತನಾಡಿದರು. ಧರ್ಮದರ್ಶಿ ಫಕ್ಕೀರಗೌಡ ಹಿರೇಗೌಡರ ಅಧ್ಯಕ್ಷತೆ ವಹಿಸಿದ್ದರು. ವಿರೂಪಾಕ್ಷೇಶ್ವರ ಮಹಾರಾಜರು, ದೇವಣ್ಣ ಚಾಕಲಬ್ಬಿ, ಗ್ರಾಪಂ ಅಧ್ಯಕ್ಷೆ ಮಹಾದೇವಿ ವಾಲ್ಮೀಕಿ, ಉಪಾಧ್ಯಕ್ಷ ಮಹಾದೇವಪ್ಪ ರಟಗೇರಿ, ಎಸ್. ಎಲ್. ಪಾಟೀಲ, ಅಕ್ಕಮಹಾದೇವಿ ಹಿರೇಮಠ, ಜೋಗಯ್ಯ ಹಿರೇಮಠ, ಬಿ.ವಿ. ಕಾಮರೆಡ್ಡಿ, ಸೋಮನಗೌಡರ ನಾಗನಗೌಡರ, ಧರ್ಮದರ್ಶಿ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಧರ್ಮದರ್ಶಿ ಎಸ್.ಬಿ. ಅಂಗಡಿ, ಎಸ್.ಎಂ. ಬ್ಯಾಟನಾಳ ನಿರ್ವಹಿಸಿದರು. ಫಲ್ಲಕ್ಕಿ ಉತ್ಸವ, ಸಾಮೂಹಿಕ ವಿವಾಹ, ಮಹಾಪ್ರಸಾದ ಜರುಗಿತು. ಸಮಾರಂಭದಲ್ಲಿ ಆಕಾಶವಾಣಿ ಕಲಾವಿದರಾದ ಬಸವರಾಜ ಮುಳಗುಂದ ಅವರಿಂದ ಏಕಧಾರಿ ಪದಗಳು, ಬಸವರಾಜ ಶಿಗ್ಗಾಂವಿ ತಂಡದಿಂದ ಜಾನಪದ ಗೀತೆ, ಹೇಮಂತ್ ಭಜಂತ್ರಿಯವರಿಂದ ಶಹನಾಯಿ ವಾದನ, ಶರೀಫರ ತತ್ವಪದ ಆಧಾರಿತ ದೊಡ್ಡಾಟ, ರೂಪಕ ಕಾರ್ಯಕ್ರಮ ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.