ಹುಟ್ಟುತ್ತ ಯಾರೂ ಕೆಟ್ಟವರಲ್ಲ: ಮಹಾಂತ ದೇವರು
ಮುಂಡರಗಿ: ಹುಟ್ಟುತ್ತ ಯಾರೂ ಕೆಟ್ಟವರಲ್ಲ. ಎಲ್ಲರೂ ಸಜ್ಜನರಾಗಿಯೇ ಹುಟ್ಟುತ್ತಾರೆ. ನಂತರ ಬೆಳೆಯುತ್ತ ಬೆಳೆಯುತ್ತ ಮಾಡುವ ಸಂಘದಿಂದ ಅನೇಕರು ಕೆಟ್ಟವರಾಗುತ್ತಾರೆ. ಕೆಟ್ಟ ಕೆಲಸ ಮಾಡುವ ಮೂಲಕ ಅಡ್ಡದಾರಿ ಹಿಡಿಯುತ್ತಾರೆ ಎಂದು ದೆಹಲಿಯ ತೋಂಟದಾರ್ಯ ಶಾಖಾ ಮಠದ ಮಹಾಂತ ದೇವರು ಹೇಳಿದರು. ಅವರು ಸೋಮವಾರ ಸಂಜೆ ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ಜರುಗುತ್ತಿರುವ ಶರಣತತ್ವ ದರ್ಶನ ಪ್ರವಚನದಲ್ಲಿ ಮಾತನಾಡುತ್ತಿದ್ದರು. 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಬಸವಣ್ಣನವರು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಅಮರ ಗಳಂಗಳಿಗೆ ನಿತ್ಯ ದಾಸೋಹ ಮಾಡಿಸುತ್ತಿದ್ದರು. ಕಲ್ಯಾಣದಲ್ಲಿ ಎಲ್ಲರೂ ನಿತ್ಯ ತಮ್ಮ ತಮ್ಮ ಕಾಯಕ ಮಾಡಿ ದುಡಿದು ಉಣ್ಣುವ ಕೈಗಳಿದ್ದವು. ಶ್ರಮದ ಬುತ್ತಿ ಯಾವಾಗಲೂ ಸಿಹಿಯಾಗಿತ್ತದೆ ಎಂದು ಬಸವಾದಿ ಪ್ರಮಥರು ಹೇಳುತ್ತಾರೆ. ಮನಸ್ಸು ಎಂದರೆ ಘನ. ಅಂತಹ ಮನಸ್ಸನ್ನು ಹಿಡಿಯುವ ಪರಿ ಬಸವಣ್ಣನಿಗೆ ಮಾತ್ರ ಗೊತ್ತಿತ್ತು. ಅಯ್ಯಾ ನಾನು ಎತ್ತಹೋದೆನೆಂದು ಅರಿಯನು. ವಿಠನಿರಲಿ, ವಿಟನಾಗದವನಿರಲಿ ಅವನಲ್ಲಿರುವ ಪರಮಾತ್ಮನ ಯಥಾರೂಪ ಕೂಡಲಸಂಗಮನಲ್ಲದೇ ಬೇರ್ಯಾವುದೂ ಇಲ್ಲ. ಬಸವ ಎಂದರೆ ಭವ ಹರಿಯಿತು. ವಿಠರನ್ನು, ವೇಶ್ಯೆಯರನ್ನು ಸಾತ್ವಿಕರನ್ನಾಗಿ ಮಾಡಿದ ಕೀರ್ತಿ ಬಸವಣ್ಣನವರಿಗಿದೆ ಎಂದರು.
ಇಫ್ತಾರ್ ಕೂಟ ನಾಳೆ
ಗದಗ: ರಂಜಾನ್ ತಿಂಗಳ ಉಪವಾಸ ವ್ರತದಲ್ಲಿರುವ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟವನ್ನು ಜು. 24ರಂದು ಸಂಜೆ 6.30ಕ್ಕೆ ಗದಗ ಕಾಟನ್ಸೇಲ್ ಸೊಸೈಟಿ ಆವರಣದಲ್ಲಿ ಏರ್ಪಡಿಸಲಾಗಿದೆ. ಮುಸ್ಲಿಂ ಬಾಂಧವರೆಲ್ಲ ಈ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ ವಿನಂತಿಸಿಕೊಂಡಿದ್ದಾರೆ.
ಜ್ಯುವೇಲರಿ ಅಂಗಡಿ ಕಳ್ಳತನ
ಲಕ್ಷ್ಮೇಶ್ವರ: ಪಟ್ಟಣದ ಆನಂದ ಜ್ಯುವೇಲರಿ ಅಂಗಡಿಯ ಶಟರ್ಸ್ ಮುರಿದು ಬಂಗಾರ, ಬೆಳ್ಳಿಯ ಆಭರಣಗಳನ್ನು ಹಾಗೂ ನಗದು ಹಣವನ್ನು ದೋಚಿ ಪರಾರಿಯಾದ ಘಟನೆ ಮಂಗಳವಾರ ಬೆಳಗಿನ ವೇಳೆ ಜರುಗಿದೆ. ಮಂಗಳವಾರ ಬೆಳಗಿನ 3 ಗಂಟೆಯ ಸುಮಾರಿಗೆ ಪಟ್ಟಣದ ಬಜಾರ ರಸ್ತೆಯಲ್ಲಿನ ಆನಂದ ಜ್ಯುವೇಲರಿ ಅಂಗಡಿಯ ಕೀಲಿ ಮುರಿದು, ಕಬ್ಬಿಣದ ರಾಡ್ನಿಂದ ಅಂಗಡಿಯ ಶಟರ್ಸ್ನ್ನು ಮೀಟಿ ಬಾಗಿಲನ್ನು ತೆರೆದು ಸುಮಾರು 200 ಗ್ರಾಂ ಬಂಗಾರ ಹಾಗೂ 8 ಕೆಜಿ ಬೆಳ್ಳಿಯ ಆಭರಣಗಳನ್ನು ಕಳ್ಳರು ದೋಚಿದ್ದಾರೆ. ಆನಂದ ಜ್ಯುವೇಲರಿ ಅಂಗಡಿಯ ಪಕ್ಕದ ಗೋಲ್ಡ್ ಪ್ಯಾಲೇಸ್ ಜ್ಯುವೇಲರಿ ಅಂಗಡಿಯ ಕಳ್ಳತನಕ್ಕೆ ದುಷ್ಕರ್ಮಿಗಳು ಯತ್ನಿಸಿ ಅಂಗಡಿಯ ಶಟರ್ಸ್ ಮುರಿಯಲು ಪ್ರಯತ್ನಿಸಿ ವಿಫಲರಾಗಿ ಪರಾರಿಯಾದ ಘಟನೆ ಜರುಗಿದೆ. ಘಟನಾ ಸ್ಥಳಕ್ಕೆ ಶ್ವಾನದಳ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ವಿಜಯ ಡಂಬಳ ಆಗಮಿಸಿ ಪರಿಶೀಲನೆ ನಡೆಸಿದರು. ಸಿಪಿಐ ಶ್ರೀನಿವಾಶ ಮೇಟಿ, ಪಿಎಸ್ಐ ವಿಕಾಸ ಲಮಾಣಿ, ಕ್ರೈಂ ಪಿಎಸ್ಐ ಸೋನೆವನೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಬೈಕ್ ಅಪಹರಣ: ಪಟ್ಟಣದಲ್ಲಿ ಮಂಗಳವಾರ ರಾತ್ರಿ ಮನೆಯ ಮುಂದೆ ನಿಲ್ಲಿಸಿರುವ 4 ಬೈಕ್ಗಳನ್ನು ಕಳವು ಮಾಡಿಕೊಂಡು ಹೋಗಲು ಯತ್ನಿಸಿ ನಂತರ ಪಟ್ಟಣದ ಹೊರವಲಯದಲ್ಲಿನ ಲಂಡಿ ಹಳ್ಳದ ಹತ್ತಿರ ಬಿಟ್ಟು ಹೋಗಿರುವ ಘಟನೆ ಜರುಗಿದೆ. ಬಂಗಾರದ ಅಂಗಡಿಯನ್ನು ಕಳ್ಳತನ ಮಾಡಿರುವ ಕಳ್ಳರೇ ಈ ಬೈಕ್ಗಳನ್ನು ಬಳಸಿ ಪರಾರಿಯಾಗಲು ಯತ್ನಿಸಿರಬಹುದೆಂದು ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

