ಜನಸಂಖ್ಯೆ ನಿಯಂತ್ರಣ: ಸರ್ವರೂ ಕೈ ಜೋಡಿಸಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 24
ಪ್ರತಿ ವರ್ಷ ಭಾರತದ ಜನಸಂಖ್ಯೆ 1.81 ಕೋಟಿ ಹೆಚ್ಚುತ್ತಲೇ ಇದೆ. ಇದೇ ರೀತಿ ಮುಂದುವರಿದಲ್ಲಿ ಮುಂದಿನ 40 ವರ್ಷಗಳಲ್ಲಿ ಭಾರತದ ಜನಸಂಖ್ಯೆ 240 ಕೋಟಿ ಆಗುವ ಸಾಧ್ಯತೆ ಇದೆ. ಆದ್ದರಿಂದ ಜನಸಂಖ್ಯೆ ಸ್ಥಿರತೆಯಾಗಬೇಕಾದರೆ ನಾವೆಲ್ಲರೂ ಕೈ ಜೋಡಿಸುವುದು ಅವಶ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಸುರೇಶ ಹೊಸಮನಿ ಹೇಳಿದರು.
ಅವರು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ಪುರಸಭೆ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಮುಂಡರಗಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ನಗರದ ಸರ್ಕಾರಿ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮದುವೆಯಾದ ಪ್ರಾರಂಭದಲ್ಲಿ ಮೂರು ವರ್ಷಗಳವರೆಗೂ ಮಗುವನ್ನು ಪಡೆಯಬಾರದು. ನಂತರ ಒಂದು ಮಗುವಿನ ನಡುವೆ ಮೂರು ವರ್ಷಗಳ ಅಂತರವನ್ನು ಕಾಪಾಡಿಕೊಳ್ಳಬೇಕು. ಎಲ್ಲರೂ ಕಡ್ಡಾಯವಾಗಿ ಕುಟುಂಬ ಕಲ್ಯಾಣಕ್ಕೆ ಉತ್ತೇಜನ ನೀಡುವ ಮೂಲಕ ಜನಸಂಖ್ಯಾ ನಿಯಂತ್ರಣಕ್ಕೆ ಪಣತೊಡಬೇಕಾಗಿದೆ ಎಂದರು.
ಪುರಸಭೆ ಮಾಜಿ ಉಪಾಧ್ಯಕ್ಷ ರಾಮು ಕಲಾಲ ಮಾತನಾಡಿ, ಇಂದು ನಾವು ಉತ್ತಿ ಬಿತ್ತುವ ಭೂಮಿ ಬೆಳವಣಿಗೆಯಾಗುವುದಿಲ್ಲ. ಅದು ಇದ್ದಷ್ಟೇ ಇರುತ್ತದೆ. ಆದರೆ ಜನಸಂಖ್ಯೆ ಮಾತ್ರ ಕೈಗೆ ಸಿಗದಂತೆ ಓಡುತ್ತಿದೆ. ಇಂದು ಸಾರ್ವಜನಿಕರಿಗೆ, ಪಾಲಕರಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಮುಂದಿನ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು ಎಂದರು. ಪ್ರೊ. ಎಂ.ಎಚ್. ಬಾರ್ಕಿ ಅತಿಥಿ ಉಪನ್ಯಾಸ ಮಾಡಿದರು. ಕಾಲೇಜಿನ ಪ್ರಾಚಾರ್ಯ ವಿ.ಎಂ. ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿದರು. ತಾಲೂಕು ಪಂಚಾಯಿತಿ ಉಪಾಧ್ಯಕ್ಷ ರಾಜಶೇಖರ ರಾಠೋಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ಭಾರತಿ ಹಕ್ಕಿ, ಉಪಾಧ್ಯಕ್ಷ ಸೋಮನಗೌಡ ಗೌಡ್ರ, ಡಾ. ಶಂಕರ ಭಾವಿಮನಿ, ಎಂ.ಜೆ. ಅಳವಂಡಿ, ಡಾ. ಜಹಾಂಗೀರ ಹಾರೋಗೇರಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಬಿ. ಕಳಕರಡ್ಡಿ ಸ್ವಾಗತಿಸಿದರು. ಪ್ರೊ.ಎಂ.ಎಂ. ಹೆಬ್ಬಾಳ ನಿರೂಪಿಸಿ, ಪರಪ್ಪನವರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

