7 ದಿನ ಗೈರಾದರೆ ಅದು 'ಶಾಲೆ ಬಿಟ್ಟ ಮಗು': ಆದೇಶ
ಬೆಂಗಳೂರು: ಶಾಲೆಗೆ ನಿರಂತರ 7 ದಿನಗಳವರೆಗೆ ಗೈರುಹಾಜರಾದ ಮಗುವನ್ನು ಶಾಲೆಬಿಟ್ಟ ಮಗು ಎಂದು ಪರಿಗಣಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ. ಶಾಲೆಗೆ 60 ದಿನಗಳವರೆಗೆ ಗೈರುಹಾಜರಾಗುವ ಮಕ್ಕಳಿಗೆ ಕಲಿಸುವುದು ಮತ್ತು ಶಾಲೆಗೆ ಕರೆತರುವುದು ಕಷ್ಟ. ಆದ್ದರಿಂದ 60 ದಿನಗಳ ಗೈರುಹಾಜರಿಗೆ ಬದಲಿಗೆ 7 ದಿನಗಳು ನಿರಂತರ ಗೈರುಹಾಜರಾದ ಮಗುವನ್ನು ಶಾಲೆಬಿಟ್ಟ ಮಗು ಎಂದು ಪರಿಗಣಿಸಲಾಗಿದೆ. ಹಾಜರಾತಿ ಅಧಿಕಾರಿಗಳು ಶೈಕ್ಷಣಿಕ ವರ್ಷಾರಂಭದಲ್ಲಿ ಶಿಕ್ಷಣ ಸಂಯೋಜಕರ ವ್ಯಾಪ್ತಿ ಪ್ರದೇಶದಲ್ಲಿ ಬರುವ ಮಕ್ಕಳ ಗಣತಿ ಮಾಡಬೇಕು. 0-14 ವರ್ಷ ವಯಸ್ಸಿನ ಮಕ್ಕಳ ಮಾಹಿತಿಯನ್ನು ಶಾಲಾ ಮುಖ್ಯಶಿಕ್ಷಕರು ನಿರ್ವಹಿಸಿರುವುದನ್ನು ಖಾತರಿಪಡಿಸಿಕೊಳ್ಳಬೇಕಾಗಿದೆ.
ತಿಳುವಳಿಕೆ ನೀಡಲು ಸೂಚನೆ: ಶಾಲಾ ವಯಸ್ಸಿನ ಮಕ್ಕಳ ಮಾಹಿತಿ ಕ್ರೋಢೀಕರಿಸಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಗ್ರಾಮ ಮತ್ತು ವಾರ್ಡ್ ಶಿಕ್ಷಣ ಮಾಹಿತಿಯನ್ನು 3 ತಿಂಗಳಿಗೊಮ್ಮೆ ಪರಿಶೀಲಿಸಿ, ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಸಂಗ್ರಹಿಸಬೇಕು. ನಂತರ ಎಸ್ಡಿಎಂಸಿ ಸದಸ್ಯರು, ಪಾಲಕರು, ಗ್ರಾಪಂ ಸದಸ್ಯರುಮತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ತರಬೇತಿ ನೀಡಿ ಅರಿವು ಮೂಡಿಸಬೇಕು. 7 ದಿನ ಮಕ್ಕಳು ಗೈರಾದರೆ ಸಂಬಂಧಿಸಿದ ಸಂಯೋಜಕರಿಗೆ 3 ದಿನಗಳೊಳಗೆ ವರದಿ ನೀಡಲು ತಿಳಿವಳಿಕೆ ನೀಡಬೇಕೆಂದು ಹೇಳಲಾಗಿದೆ.
ಪೂರ್ಣ ವಿವರ ನೀಡಬೇಕು: ಮಗುವಿನ ಗೈರುಹಾಜರಿಗೆ ಕಾರಣ ತಿಳಿದು ಪಾಲಕರಿಗೆ ತಿಳಿವಳಿಕೆ ನೀಡಿ, ಶಾಲೆಗೆ ಬರುವಂತೆ ಮನವೊಲಿಸಬೇಕು. ನಂತರವೂ ಮಗು ಶಾಲೆಗೆ ಬಾರದಿದ್ದಲ್ಲಿ ಪೋಷಕರಿಗೆ ನೋಟೀಸು ನೀಡಿ ಸ್ವೀಕೃತಿ ಪಡೆಯಬೇಕು. ಎಲ್ಲಾ ಪ್ರಕ್ರಿಯೆ ನಂತರ ಮಗು ಶಾಲೆಗೆ ಬರದಿದ್ದರೆ ಪಾಲಕರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಬೇಕು. ಸಮಿತಿ ಮುಂದೆ ಪಾಲಕರು ಹಾಜರಾಗದಿದ್ದರೆ ಪೊಲೀಸರ ನೆರವಿನೊಂದಿಗೆ ಸಮಿತಿ ಮುಂದೆ ಹಾಜರು ಪಡಿಸಿ ಪ್ರಕರಣ ಪೂರ್ಣ ವಿವರ ನೀಡಬೇಕಾಗಿದೆ. ನಂತರ, ಸಮಿತಿ ಆದೇಶದಂತೆ ಮಗುವನ್ನು ವಶಕ್ಕೆ ಪಡೆದು ಸರ್ಕಾರಿ ಅಥವಾ ಅನುದಾನಿತ ವಿದ್ಯಾರ್ಥಿ ನಿಲಯ ಅಥವಾ ವಸತಿ ಶಾಲೆಯಲ್ಲಿ ಮಗುವನ್ನು ದಾಖಲಿಸಿ ಹಾಜರಾತಿ ಖಚಿತ ಪಡಿಸಬೇಕೆಂದು ಇಲಾಖೆ ಆದೇಶಿಸಿದೆ.
ಲಕ್ಷ್ಮೇಶ್ವರ: ಪ್ರತಿಯೊಬ್ಬರೂ ಆರೋಗ್ಯವಾಗಿ ನೆಮ್ಮದಿ ಜೀವನ ನಡೆಸಬೇಕಾದರೆ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳುವುದು ಹಾಗೂ ಸ್ವಚ್ಛತೆ ಕಾಪಾಡುವುದು ಅವಶ್ಯ ಎಂದು ನಿರ್ಮಲ ಭಾರತ ಅಭಿಯಾನ ಮೋಡಲ್ ಅಧಿಕಾರಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಅಭಿಪ್ರಾಯಪಟ್ಟರು. ಮಹಾತ್ಮಾ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ, ನಿರ್ಮಲ ಭಾರತ ಅಭಿಯಾನದಡಿ ಗೊಜನೂರ ಸರ್ಕಾರಿ ಪ್ರೌಢಶಾಲೆ, ಗ್ರಾಪಂ ಸಹಯೋಗದಲ್ಲಿ ಶೌಚಾಲಯ ನಿರ್ಮಿಸುವ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಶೌಚಾಲಯ ಕಟ್ಟಿಸುವ ಫಲಾನುಭಾವಿಗಳಿಗೆ ರು. 4700ರಿಂದ 9200 ಸಹಾಯಧನವನ್ನು ಸರ್ಕಾರ ನೀಡುತ್ತಿದ್ದು, ಅದನ್ನು ತಾವೆಲ್ಲರೂ ಸದುಪಯೋಗ ಪಡಿಸಿಕೊಂಡು ಮಾದರಿ ಗ್ರಾಮಕ್ಕೆ ಸಹಕರಿಸಬೇಕು ಎಂದು ಪಿಡಿಒ ಎಸ್.ಎಫ್. ನದಾಫ್ ಹೇಳಿದರು. ಮುಖ್ಯೋಪಾಧ್ಯಾಯ ರವಿ ಬ. ಬೆಂಚಳ್ಳಿ ಮಾತನಾಡಿದರು. ಗ್ರಾಪಂ ನೂತನ ಅಧ್ಯಕ್ಷೆ ದಾವಲಬಿ ದೊಡ್ಡಮನಿ, ಮಾಜಿ ಅಧ್ಯಕ್ಷ ಎಸ್.ಡಿ. ಪಾಟೀಲ, ಹರಳಕ್ಕ ಕರೆಣ್ಣವರ, ಗ್ರಾಪಂ ಸದಸ್ಯರಾದ ಗಂಗನಗೌಡ ಪಾಟೀಲ, ಹನುಮಂತಪ್ಪ ಯಳವತ್ತಿ, ಶಂಕರಗೌಡ ದೊಡ್ಡಗೌಡ್ರ, ಶಾಲೆಯ ಸಿಬ್ಬಂದಿ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

