ಗದಗ

ಲಕ್ಷ್ಮೇಶ್ವರ ಸಮಗ್ರ ಅಭಿವೃದ್ಧಿಗೆ ಯತ್ನ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜೂ. 2
ದೇಶದ ರಾಜಕೀಯದಲ್ಲಿ ಆಮೂಲಾಗ್ರ ಬದಲಾವಣೆಯ ಗಾಳಿ ಬೀಸುತ್ತಿರುವ ಸಂದರ್ಭದಲ್ಲಿ ನನ್ನ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿಯಲು ಪ್ರಯತ್ನಿಸುವೆ. ಶಿರಹಟ್ಟಿ ತಾಲೂಕಿನ ಮತದಾರರು ಎಲ್ಲಕ್ಕಿಂತ ಹೆಚ್ಚಿನ ಮತ ನೀಡಿ, ಅಭಿಮಾನ ಇಟ್ಟು ನನ್ನನ್ನು ಪುನರಾಯ್ಕೆ ಮಾಡಿದ್ದಕ್ಕೆ ತುಂಬು ಹೃದಯದ ಕೃತಜ್ಞತೆಗಳು ಎಂದು ಸಂಸದ ಶಿವಕುಮಾರ ಉದಾಸಿ ಅಭಿಪ್ರಾಯ ಪಟ್ಟರು.
ಭಾನುವಾರ ಸಂಜೆ ಪಟ್ಟಣದ ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಮತದಾರರು ಹೊಸ ಭರವಸೆಗಳನ್ನಿಟ್ಟುಕೊಂಡು ಬಿಜೆಪಿಯನ್ನು ಅಮೋಘವಾಗಿ ಬೆಂಬಲಿಸಿದ್ದಾರೆ. ಜನರ ಆಶೋತ್ತರಗಳಿಗೆ ಅನುಗುಣವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ನೂತನ ಯೋಜನೆಗಳನ್ನು ರೂಪಿಸುತ್ತಿದ್ದು, ಬರುವ ದಿನಗಳಲ್ಲಿ ಜನಸಾಮಾನ್ಯರ ಕಷ್ಟಗಳನ್ನು ದೂರ ಮಾಡಿ ದೇಶದಲ್ಲಿ ನೆಮ್ಮದಿಯ ವಾತಾವರಣ ಮೂಡುವಂತೆ ಮಾಡಬೇಕಾಗಿದೆ. ಮುಂದಿನ ವರ್ಷದೊಳಗೆ ನಿಮ್ಮ ಬಳಿ ನನ್ನ ಪ್ರೋಗ್ರೆಸ್ ಕಾರ್ಡ್ ಹಿಡಿದುಕೊಂಡು ಬರುತ್ತೇನೆ. ಕಾಂಗ್ರೆಸ್ ನಮ್ಮ ಬಗ್ಗೆ ಸಾಕಷ್ಟು ಅಪಪ್ರಚಾರ ಮಾಡಿತ್ತು. ಬಿಜೆಪಿ ಸೋತು ಮೂಲೆಗುಂಪಾಗುತ್ತದೆ ಎಂದು ಹೀಯಾಳಿಸಿದ್ದರು. ಆದರೆ, ಜನರು ಕಾಂಗ್ರೆಸ್ಸಿನ 10 ವರ್ಷದ ದುರಾಡಳಿತಕ್ಕೆ ಬೇಸತ್ತು ಕೇವಲ 44 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಬುದ್ಧಿ ಕಲಿಸಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲನ್ನು ಪಡೆದುಕೊಂಡು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ. ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ರಾಜ್ಯದ ಅಭಿವೃದ್ಧಿಗೆ ದುಡಿಯಲು ಪ್ರಯತ್ನಿಸಬೇಕು. ಕ್ಷೇತ್ರದ ಮತದಾರರು ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಎಂದರು.
ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಮಾತನಾಡಿ, ಶಿವಕುಮಾರ ಉದಾಸಿಯವರು ಜನರ ಕಷ್ಟಗಳಿಗೆ ಸ್ಪಂಧಿಸುವ ಕಾರ್ಯ ಮಾಡಬೇಕು. ರಾಜ್ಯದ ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಹಾಗೂ ಮಾರ್ಗದರ್ಶನ ಮಾಡಬೇಕು ಎಂದರು.
ಮಾಜಿ ಶಾಸಕ ರಾಮಣ್ಣ ಲಮಾಣಿ, ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಎಂ.ಎಸ್. ಕರಿಗೌಡರ, ಜಿಪಂ ಮಾಜಿ ಅಧ್ಯಕ್ಷೆ ಕಮಲವ್ವ ಸಜ್ಜನರ, ಜಿಪಂನ ಉಪಾಧ್ಯಕ್ಷೆ ಸುನಿತಾ ಹಳ್ಳೆಪ್ಪನವರ, ಮಾಜಿ ಉಪಾಧ್ಯಕ್ಷ ರಮೇಶ ಮುಂದಿನಮನಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ಅಶೋಕ ಪಲ್ಲೇದ, ನಾಗರಾಜ ಕುಲಕರ್ಣಿ, ಶಿಗ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ ಲಮಾಣಿ, ಬಸವರಾಜ ನೆಲವಿಗಿ, ರುದ್ರಯ್ಯ ಪುರಾಣಿಕಮಠ, ಚೆಂಬಣ್ಣ ಬಾಳಿಕಾಯಿ, ಸೋಮಣ್ಣ ಮುಳಗುಂದ, ಬಸವರಾಜ ಅರಳಿ, ರಾಮಣ್ಣ ಡಂಬಳ, ಪುರಸಭೆ ಸದಸ್ಯರು ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.