ಬಯಲು ಶೌಚ: ಮಹಿಳೆಯರಿಗೆ ಸಮಸ್ಯೆ
ನರೇಗಲ್ಲ: ನರೇಗಲ್ಲ ಪಪಂ ವ್ಯಾಪ್ತಿಯಲ್ಲಿ ಒಟ್ಟು 7 ಶೌಚಾಲಯಗಳು ನಿರ್ಮಾಣವಾಗಿದ್ದು, ಅದರಲ್ಲಿ 3 ಶೌಚಾಲಯ ತಾತ್ಕಾಲಿಕ ಚಾಲನೆಯಲ್ಲಿದ್ದು, ಉಳಿದ ನಾಲ್ಕು ಶೌಚಾಲಯಗಳು ಬಂದಾಗಿವೆ. ಅದರಲ್ಲೂ ನರೇಗಲ್ಲ ಪಪಂ ವ್ಯಾಪ್ತಿಯಲ್ಲಿ ಬರುವ ನಾಗರಕೆರೆ ಹತ್ತಿರ ನಿರ್ಮಾಣವಾದ ಮಹಿಳಾ ಶೌಚಾಲಯ ಇದ್ದು ಇಲ್ಲದಂತಾಗಿದೆ.
2 ತಿಂಗಳಿಂದ ಶೌಚಾಲಯ ಸ್ಥಗಿತಗೊಂಡ ಕಾರಣದಿಂದ ಮಹಿಳೆಯರು ಊರ ಹೊರ ವಲಯದಲ್ಲಿನ ಪ್ರಮುಖ ದಾರಿ, ರಸ್ತೆ ಮೇಲೇನೆ ಶೌಚಕ್ಕೆ ಕೂಡಬೇಕು. ಆದರೆ, ಪ್ರಮುಖ ದಾರಿಯಾದ್ದರಿಂದ ಹೊಲ ಹಾಗೂ ತೋಟಗಳಿಗೆ ತೆರಳುವ ಜನದಟ್ಟಣೆ ನಿರಂತರವಾಗಿರುತ್ತೆ. ಇಂಥ ಆವಸ್ಥೆಯಲ್ಲಿ ಮಹಿಳೆಯರು ಶೌಚಕ್ಕೆ ಕೂಡ್ರುವುದಾದರೂ ಹೇಗೆ ಮಾನಕ್ಕಂಜಿ ಬೆಳಗಾಗಿವದರೊಳಗಾಗಿಯೇ ಶೌಚ ಮುಗಿಸುವ ನಿಟ್ಟಿನಲ್ಲಿರುವ ಮಹಿಳೆಯರ ಗೋಳು ಕೇಳುವವರಿಲ್ಲದಂತಾಗಿದೆ.
ಹೌದು, ಇಂಥ ಪರಿಸ್ಥಿತಿ ನಿರ್ಮಾಣವಾದದ್ದು ನರೇಗಲ್ಲ ಪಪಂ ವ್ಯಾಪ್ತಿಯ ನರೇಗಲ್ಲದ ನಾಗರಕೆರೆ ಹತ್ತಿರ ನಿರ್ಮಿಸಿದ್ದ ಮಹಿಳಾ ಶೌಚಾಲಯದ್ದು. ಇಲ್ಲಿ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ಈ ಶೌಚಾಲಯ ಅವಲಂಬಿಸಿದ್ದು, ಅದರಲ್ಲಿ ಮುಕ್ಕಾಲು ಭಾಗ ರೈತಾಪಿ ಕುಟುಂಬದವರೇ, ಇವರಿಗೆ ಸ್ವಂತ ಶೌಚಾಲಯ ನಿರ್ಮಿಸಿಕೊಳ್ಳುವ ತಾಕತ್ತಿಲ್ಲ. ಶೌಚಾಲಯವಿದ್ದರೂ ಚಿಕ್ಕ ಚಿಕ್ಕದಾದ ಒಂದೊಂದು ಮನೆಯಲ್ಲಿ 2-3 ಭಾಗ, ಕಟ್ಟಿಸಿಕೊಳ್ಳಲು ಜಾಗವಿಲ್ಲದೇ ಪರಿತಪಿಸುತ್ತಿದ್ದಾರೆ. ಇತ್ತೀಚೆಗೆ ಈ ರಸ್ತೆ ಪಕ್ಕದ ಗಟಾರ ಮೇಲೆ ಒಂದು ಬೆಡ್ ಹಾಕಿ ಅದರ ಮೇಲೆ 7 ಕಂಪಾರ್ಟ್ಮೆಂಟ್ ಮಾಡಿ ಮುಂದೆ ಅಡ್ಡ ಗೋಡೆಯನ್ನು ಪಪಂ ನಿರ್ಮಿಸಿದ್ದರಿಂದ ಜನತೆ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವ ಮೂಲಕ ಶೌಚ ಮುಗಿಸುತ್ತಿದ್ದರು. ನಂತರ ಆ ಗಟಾರ ಮೇಲೆ ನಿರ್ಮಿಸಿದ್ದ ತಾತ್ಕಾಲಿಕ ಶೌಚಾಲಯ ಕೆಡವಿ ಅದರ ಪಕ್ಕ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗಿದೆ. ಇದನ್ನು ಕಂಡ ಜನತೆಯ ಖುಷಿಗೆ ಪಾರವೇ ಇರಲಿಲ್ಲ. ಆದರೆ, ಈ ಖುಷಿ ಹಂಚಿಕೊಳ್ಳುವಷ್ಟರಲ್ಲಿ ಇದು ಮತ್ತೆ ಬಂದಾಗಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವೊಮ್ಮೆ ಮೋಟಾರು ಸುಟ್ಟು ಬಂದಾದರೆ ಮತ್ತೊಮ್ಮೆ ನೀರಿಲ್ಲದೇ ಬಂದಾಗಿರುತ್ತೆ. ಒಟ್ಟಾರೆ ಶೌಚಾಲಯ ತಿಂಗಳಲ್ಲಿ 10 ದಿನ ಚಾಲೂ ಇದ್ದರೆ 20 ದಿನ ಬಂದಾಗಿರುತ್ತದೆ.
ನಾಗರಕೆರೆ ಹತ್ತಿರದ ಶೌಚಾಲಯದಲ್ಲಿನ ಮೋಟಾರು ಸುಟ್ಟಿದ್ದು, ಅದನ್ನು ರಿಪೇರಿ ಮಾಡಿಸಿ ಸದ್ಯದಲ್ಲೇ ಪ್ರಾರಂಭಿಸುತ್ತೇವೆ. ಉಳಿದ ಕೆಲವು ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇಲ್ಲ. ಕೆಲ ಶೌಚಾಲಯಗಳಲ್ಲಿ ಮೋಟಾರು ಸುಟ್ಟಿವೆ. ಇವೆಲ್ಲವುಗಳಿಗೆ ಶೀಘ್ರ ಸೌಲಭ್ಯ ಕಲ್ಪಿಸಿ ಪ್ರಾರಂಭಿಸಲಾಗುವುದು. ನಾಗರಕೆರೆ ಪಕ್ಕದಲ್ಲಿ ಮೊದಲು ನಿರ್ಮಿಸಿದ ಶೌಚಾಲಯ ಕೆಡವಿದ ಬಗ್ಗೆ ನನಗೆ ಮಾಹಿತಿಯಿಲ್ಲ. ಉಳಿದವುಗಳ ಕುರಿತು ತ್ವರಿತ ಕ್ರಮ ಕೈಗೊಳ್ಳುತ್ತೇನೆ.
- ಫಕೀರಪ್ಪ ನರೇಗಲ್ಲ, ಪಂಪ್ ಆಪರೇಟರ್, ಸ್ಥಾನ ಹೊಂದಾಣಿಕೆ ಅಧಿಕಾರಿ
ನಮ್ಮೂರಾಗ ಶೌಚಾಲಯ ಇದ್ದು ಇಲ್ಲದಂಗಾಗೈತ್ರಿ, ಸಣ್ಣ ಸಮಸ್ಯೆನಾ ದೊಡ್ಡದಾಗಾಕತ್ತೈತಿ, ಬರೀ 2ರಿಂದ ಎರಡೂವರಿ ಸಾವಿರ ಖರ್ಚು ಮಾಡಿದ್ರ ಒಂದ ಮೋಟಾರ ಬರತ್ತ. ಇಲ್ಲಾಂದ್ರ ಬೇಗ ರಿಪೇರಿನರ ಮಾಡಿಸ್ಬೇಕ, ಒಂದ ತಿಂಗ್ಳಾದ್ರು ಶೌಚಾಲಯದ ಮೋಟಾರ ರಿಪೇರಿ ಮಾಡಿಸ್ದೆ ಹಾಗ ಬಿಟ್ಟಾರ. ರಿಪೇರಿ ಮಾಡಸ್ರಿ ಅಂದ್ರ ಇಲ್ಲಿವರ್ಗಿ ರಿಪೇರಿ ಮಾಡ್ಸಿಲ್ಲ. ಹಿಂಗ ಆದ್ರ ಮುಂದ ಇಲ್ಲಿನ ಮಹಿಳೆಯರನ ಸೇರಿಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆ.
- ರೇಣುಕಾ ನವಲಗುಂದ, ಸ್ಥಳೀಯ ನಿವಾಸಿ
-ನಿಂಗರಾಜ ಬೇವಿನಕಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

