ಗದಗ

ಸಿದ್ದರಾಮಯ್ಯ ರೇಲ್ವೆಗೆ ಕಲ್ಲು ಹಾಕಬೇಡಿ

Published On :

ಗದಗ: ರಾಜ್ಯದಲ್ಲಿ ಹಲವಾರು ರೇಲ್ವೆ ಯೋಜನೆಗಳು ಅನುಷ್ಠಾನವಾಗಬೇಕಿದ್ದು, ಅದಕ್ಕಾಗಿ ಕೇಂದ್ರ ರೇಲ್ವೆ ಸಚಿವರು ಉತ್ಸುಕರಾಗಿದ್ದರೆ, ನೀವು ರಾಜ್ಯದ ಪಾಲಿನ ಹಣ ನೀಡಲು ಹಣಕಾಸಿನ ತೊಂದರೆ ಇದೆ ಎಂದು ಹೇಳುವ ಮೂಲಕ ರೇಲ್ವೆ ಯೋಜನೆಗಳಿಗೆ ಕಲ್ಲು ಹಾಕಬೇಡಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇರವಾಗಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.
ಭಾನುವಾರ ನಗರದಲ್ಲಿ ನಡೆದ ಪದವೀಧರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ರಾಜ್ಯಗಳ ಅಭಿವೃದ್ಧಿಗೆ ಯೋಜನೆ ಪ್ರಕಟಿಸಿದಾಗ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾದದ್ದು ನಿಮ್ಮ ಧರ್ಮ ಆದರೆ ಈಗ ನೀವೇನು ಹೇಳುತ್ತಿದ್ದೀರಿ ಎನ್ನುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ರೇಲ್ವೆ ಯೋಜನೆಗಳಿಗೆ ನೀಡಲು ನಿಮ್ಮ ಬಳಿ ಹಣವಿಲ್ಲವೇ? ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಪಾಲನ್ನು ನೀಡಲು ಸಿದ್ದರಿದ್ದರೂ ರೇಲ್ವೆ ಯೋಜನೆಗಳು ಜಾರಿಯಾಗಲಿಲ್ಲ ಈ ರೀತಿಯ ಒಡಕು ಮಾತನಾಡುವುದನ್ನು ನಿಲ್ಲಿಸಿ, ರಾಜ್ಯದ ಯೋಜನೆಗಳಿಗೆ ಆದ್ಯತೆ ನೀಡಿ ಇಲ್ಲವಾದಲ್ಲಿ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡೋಣ ಎಂದು ಪಣ ತೊಟ್ಟು, ರಾಷ್ಟ್ರೀಯ ಪಕ್ಷವೊಂದು ಅಧಿಕೃತ ವಿರೋಧ ಪಕ್ಷದ ಸ್ಥಾನ ಸಿಗದಂತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಅದೇ ಮಾದರಿಯಲ್ಲಿ ನಾವು ಈಗ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಪಣ ತೊಡೋಣ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಹತ್ತಾರು ಜನಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಜನ ವಿರೋಧಿ ಆಡಳಿತ ನಡೆಸುತ್ತಿದೆ. ನಾಯಕರಾದ ನಾವು ಹಾಗೂ ಕಾರ್ಯಕರ್ತರು ಸುಮ್ಮನೇ ಕುಳಿತರೆ ಸಾಲದು ಬೀದಿಗಿಳಿದು ಹೋರಾಟ ಮಾಡಬೇಕು. ಸಧ್ಯದಲ್ಲಿಯೇ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಜ್ಯ ಬಿಜೆಪಿ ನಾಯಕತ್ವ ನಂದೇ ಎನ್ನುವುದನ್ನು ಸ್ಪಷ್ಟ ಪಡಿಸಿದರು.
ತಳಮಟ್ಟದಿಂದ ಪಕ್ಷ ಸಂಘಟನೆ
ಗದಗ: ರಾಜ್ಯದಲ್ಲಿ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಿ ಮತ್ತೆ ಅಧಿಕಾರಕ್ಕೆ ತರುವುದು ನನ್ನ ಉದ್ದೇಶವಾಗಿದೆ. ಅದಕ್ಕಾಗಿ ನಾನು ಯಾವುದೇ ಸ್ಥಾನಮಾನ ಕೇಳುವುದಿಲ್ಲ. ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತೇನೆ ಎಂದು ಸಂಸದ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ಭಾನುವಾರ ಬಿಜೆಪಿ ಅಭ್ಯರ್ಥಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಲೋಕಸಭೆಗೆ ಹೋದರೂ ರಾಜ್ಯದಲ್ಲಿ ಪಕ್ಷ ಸಂಘಟಿಸುವುದು ನನ್ನ ಮೊದಲ ಆದ್ಯತೆ. ಅದಕ್ಕಾಗಿ ಪಕ್ಷದಲ್ಲಿರುವ ಎಲ್ಲರೊಂದಿಗೂ ಕೈ ಜೊಡಿಸಿ ಪಕ್ಷ ಸಂಘಟನೆ ಮಾಡುವಲ್ಲಿ ಹೆಚ್ಚು ಒಲವು ತೋರಿಸುತ್ತಿದ್ದೇನೆ. ನನಗೆ ಪಕ್ಷದಲ್ಲಿ ಯಾವುದೇ ಅಧಿಕಾರ ಹಾಗೂ ಸ್ಥಾನಮಾನ ಬೇಕಿಲ್ಲ, ಪಕ್ಷ ಸಂಘಟನೆಯೊಂದೇ ನನ್ನ ಮುಖ್ಯ ಗುರಿಯಾಗಿದೆ ಎಂದರು.
ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದರೂ ಇನ್ನೂ ಟೇಕಾಪ್ ಆಗಿಲ್ಲಾ, ಸಂಪೂರ್ಣ ನಿದ್ರಾವಸ್ಥೆಯಲ್ಲಿದೆ. ರಾಜ್ಯದಲ್ಲಿ ಕೆಲವು ಭಾಗದಲ್ಲಿ ಮಳೆಯಾಗಿದೆ, ಮತ್ತೆ ಕೆಲವು ಭಾಗದಲ್ಲಿ ಮಳೆಯಾಗಿಲ್ಲ. ಒಣ ಭೂಮಿಯಲ್ಲಿಯೇ ರೈತರು ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಗಮನ ನೀಡಬೇಕಿದೆ ಎಂದ ಅವರು, ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಖಂಡಿತ ಎಂದರು.
ಕೆಜೆಪಿ ಪದ್ಮನಾಭಪ್ರಸನ್ನ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಶಿಕಾರಿಪುರ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಯ ಕುರಿತ ಪ್ರಶ್ನೆಗೆ ಅದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.