ನಿಮ್ಮ ಪಕ್ಷದ ಅಭ್ಯರ್ಥಿ ನಿಷ್ಠೆ ಗಮನಿಸಿ
ಗದಗ: ಅನಂತಕುಮಾರ ಅವ್ರೇ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಿಮ್ಮ ಪಕ್ಷದಿಂದ ಕಣಕ್ಕಿಸಿರುವ ಅಭ್ಯರ್ಥಿಯ ಪಕ್ಷ ನಿಷ್ಠೆ ಮೊದಲು ಗಮನಿಸಿ ಬಳಿಕ ಇನ್ನೊಬ್ಬರ ಬಗ್ಗೆ ಮಾತನಾಡಿ ಎಂದು ಮಾಜಿ ಸಚಿವ, ವಿಪ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಅವರು ಸೋಮವಾರ ಗದಗ ನಗರದ ವಿದ್ಯಾದಾನ ಸಮಿತಿ ಹೈಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಪ್ರಜ್ಞಾವಂತರ ಚುನಾವಣೆಯಾಗಿದ್ದು, ಇಲ್ಲಿ ಕೇಂದ್ರ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಬಂದು ಪ್ರಚಾರ ಮಾಡಿದರೆ ಮತಗಳು ಬರುತ್ತವೆ ಎನ್ನುವ ಭ್ರಮಲೋಕದಲ್ಲಿ ಬಿಜೆಪಿಯವರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಕಾರ್ಯಕರ್ತರಿದ್ದಾರೆ. ನಮಗೆ ಹೆಚ್ಚಿನ ಸಂಖ್ಯೆಯ ಮತದಾರರಿದ್ದಾರೆ. ಹಾಗಾಗಿ ನಮ್ಮ ಗೆಲವು ಖಚಿತ. ಈ ಹಿಂದೆ ನಿಮ್ಮ ಅಭ್ಯರ್ಥಿ ನಿಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವೇ ಚುನಾವಣೆಗೆ ನಿಂತಿದ್ದರು ಎಂದು ವ್ಯಂಗ್ಯವಾಡಿದರು ಅವರು, ಅಪ್ಪ-ಮಕ್ಕಳ ಬಗ್ಗೆ ಟೀಕೆ ಮಾಡುವ ಪಕ್ಷದವರೇ ತಮ್ಮಲ್ಲಿ ನಡೆಯುತ್ತಿರುವ ಅಪ್ಪ-ಮಕ್ಕಳ ರಾಜಕೀಯದ ಬಗ್ಗೆ ಅವಲೋಕಿಸಿ ನಂತರ ನಮ್ಮ ಬಗ್ಗೆ ಮಾತನಾಡಲಿ.
ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿ: ಈ ಚುನಾವಣೆಯಲ್ಲಿ ವಸಂತ ಹೊರಟ್ಟಿ ಸ್ಪರ್ಧಿಸಬೇಕು ಎಂದು ಹೆಚ್ಚಿನ ಇಚ್ಛೆ ಹೊಂದಿದ್ದು ಕುಮಾರಸ್ವಾಮಿ ನಾನಲ್ಲ, ಅವರ ಒತ್ತಾಯ ಹಾಗೂ ಪದವೀಧರ ಕ್ಷೇತ್ರದಲ್ಲಿ ಮತದಾರರ ಅಭಿಪ್ರಾಯದ ಮೇಲೆ ವಸಂತ ಕಣದಲ್ಲಿದ್ದಾನೆ. ನಾನು ನನ್ನ ಚುನಾವಣೆಯಲ್ಲಿಯೂ ಪಕ್ಷದ ಚಿಹ್ನೆಗಳನ್ನು ಬಳಕೆ ಮಾಡಿರಲಿಲ್ಲ. ಇಲ್ಲಿಯೂ ಅದೇ ರೀತಿಯ ಕೆಲಸ ಮಾಡುತ್ತಿದ್ದೇನೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಒಂದು ಪಕ್ಷಕ್ಕೆ ಗುರುತಿಸಿಕೊಂಡರೆ ಸುಶಿಕ್ಷಿತ ಮತದಾರರಿಗೆ ಗೊಂದಲ ಉಂಟಾಗುತ್ತದೆ. ಅದಕ್ಕಾಗಿ ಎಲ್ಲಿಯೂ ಪಕ್ಷದ ಚಿಹ್ನೆ ಅಧ್ಯಕ್ಷರ ಭಾವ ಚಿತ್ರಗಳನ್ನು ಬಳಸಿಲ್ಲ. ಸ್ವತ ನನ್ನ ಭಾವಚಿತ್ರಗಳನ್ನು ಬಳಸಿಲ್ಲ. ವಸಂತ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿ ಎನ್ನುವುದು ಮುಖ್ಯ ಉದ್ದೇಶವಾಗಿದೆ.
ಕಾಂಗ್ರೆಸ್, ಜೆಡಿಎಸ್ ಒಳಒಪ್ಪಂದ ಸುಳ್ಳು: ಕಾಂಗ್ರೆಸ್, ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲಾ ಸುಳ್ಳು ಕ್ಷೇತ್ರದ ಮತದಾರರು ನಮ್ಮ ಪರವಾಗಿದ್ದಾರೆ. ಈಗಾಗಲೇ ವಿರೋಧಿ ಪಕ್ಷಗಳಿಗೆ ನಾವು ಸೋಲುವುದು ಖಂಡಿತ ಎನ್ನುವ ಭಾವನೆ ಮೂಡಿರುವ ಹಿನ್ನೆಲೆಯಲ್ಲಿ ಹೀಗೆ ಮಾತನಾಡುತ್ತಿದ್ದಾರೆ. ನಾವು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ ಎಂದ ಅವರು ಸುದ್ದಿಗೋಷ್ಠಿಯುದ್ದಕ್ಕೂ ಬಿಜೆಪಿ ಅಭ್ಯರ್ಥಿ ಸಂಕನೂರ ಹಾಗೂ ಅವರಿಗೆ ಬೆಂಬಲಿಸುತ್ತಿರುವ ಕುಬೇರಪ್ಪ ಅವರನ್ನು ಟೀಕಿಸಿದರು.
ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಶಿವಶಂಕರ ಕಲ್ಲೂರ, ವೆಂಕಟೇಶ ಕಟ್ಟಿಮನಿ, ಲಕ್ಷ್ಮಿದೇವಿ ಕಟ್ಟಿಮನಿ, ಡಾ. ಬಸವರಾಜ ಧಾರವಾಡ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

