ಭಾವೈಕ್ಯ ಕೊಂಡಿ ಗವಾಯಿಗಳ ಜಾತ್ರೆ
ಲಿಂ. ಪಂಡಿತ ಪಂಚಾಕ್ಷರಿ ಗವಾಯಿ ಹಾಗೂ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಜಾತ್ರಾ ಮಹೋತ್ಸವದಲ್ಲಿ ಗದಗ ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸರ್ವ ಧರ್ಮೀಯ ಭಕ್ತರು ಪಾಲ್ಗೊಂಡು ಜಾತ್ರಾ ಮಹೋತ್ಸವವನ್ನು ಸಂಭ್ರಮದಿಂದ ಅದ್ಧೂರಿಯಾಗಿ ಜೂ. 13ರಿಂದ 17ರ ವರೆಗೆ ಆಚರಿಸಿದರು.
ಜೂ. 13ರಿಂದ ಪ್ರಾರಂಭಿಸಲಾದ ಉಭಯ ಗುರುಗಳ ಜಾತ್ರಾಮಹೋತ್ಸವ ಅಂಗವಾಗಿ 5 ದಿನಗಳಿಂದ ವೀರೇಶ್ವರ ಪುಣ್ಯಾಶ್ರಮದಲ್ಲಿ ಹಲವು ವಿಧಾಯಕ ಕಾರ್ಯಕ್ರಮಗಳು, ಕೀರ್ತನೆ, ಧರ್ಮಸಭೆ, ಕೀರ್ತನ ಸಮ್ಮೇಳನ, ಅಂಧರಗೋಷ್ಠಿ, ಶಿವಾನುಭವಗೋಷ್ಠಿ, ಧರ್ಮೋತ್ತೇಜಕ ಮಹಾಸಭೆಗಳು ಭಕ್ತರಲ್ಲಿ ಧಾರ್ಮಿಕತೆಯ ಕುರಿತು ಹೊಸ ಸಂಚಲನವನ್ನುಂಟು ಮಾಡಿದವು.
ಯೋಗ, ನಾಟಕ ಪ್ರದರ್ಶನ: ಕಳೆದ 5 ದಿನಗಳಿಂದಲೂ ಹಲವು ಮನರಂಜನಾ ಕಾರ್ಯಕ್ರಮಗಳನ್ನು ವೀರೇಶ್ವರ ಪುಣ್ಯಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ವಿಶೇಷವಾಗಿ ಆಕರ್ಷಣೆಗೆ ಕಾರಣವಾಗಿದ್ದು ಪೌರಾಣಿಕ ನಾಟಕ ಹಾಗೂ ಯೋಗ ಪ್ರದರ್ಶನಗಳು. ಜೂ. 13ರಂದು ರಾತ್ರಿ 10.30ಕ್ಕೆ ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳಿಂದ ಡಾ. ಪುಟ್ಟರಾಜ ಗವಾಯಿಗಳು ವಿರಚಿತ ಸತಿ ಸುಖನ್ಯಾ, ಜೂ. 14 ರಂದು ರಾತ್ರಿ 10.30ಕ್ಕೆ ಕುಮಾರೇಶ್ವರ ಕೃಪಾಪೋಷಿತ ಪಂ. ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದಿಂದ ಕೊರವಂಜಿ ನಾಟಕ ಹಾಗೂ ಜೂ. 15ರಂದು ರಾತ್ರಿ ಜರುಗಿದ ಯೋಗಪ್ರದರ್ಶನಗಳು ಜನರನ್ನು ರಂಜಿಸುವಲ್ಲಿ ಯಶಸ್ವಿಯಾದವು.
ಪ್ರಶಸ್ತಿ ವಿತರಣೆ: ಸಂಗೀತದಲ್ಲಿ ವಿಶೇಷ ಸಾಧನೆ ತೋರಿದ ರಾಜ್ಯದ ಹಲವು ಮಹನೀಯರನ್ನು ಗುರುತಿಸಿ ಅವರಿಗೆ ಹಾನಗಲ್ ಕುಮಾರಶ್ರೀ ಪ್ರಶಸ್ತಿಯನ್ನು ಪ್ರತಿವರ್ಷ ಪುಣ್ಯಾಶ್ರಮದಿಂದ ನೀಡುತ್ತಾ ಬರಲಾಗುತ್ತಿದ್ದು, ಈ ವರ್ಷ ಕೀರ್ತನೆಯಲ್ಲಿ ಸಾಧನೆ ಮಾಡಿದ ವೀರಭದ್ರಯ್ಯ ಶಾಸ್ತ್ರೀಗಳು, ವಯೋಲಿನ್ನಲ್ಲಿ ಸಾಧನೆ ಮಾಡಿದ ಹನುಮಂತಪ್ಪ ಕಾಮನಹಳ್ಳಿ, ತಬಲಾದಲ್ಲಿ ಸಾಧನೆ ಮಾಡಿದ ಸಿದ್ಧಲಿಂಗಯ್ಯ ಹಿರೇಮಠ, ರಂಗಭೂಮಿಯಲ್ಲಿ ಸಾಧನೆ ಮಾಡಿದ ವಿರೂಪಾಕ್ಷಯ್ಯ ಬೆನಾಳಮಠ, ಸಂಗೀತದಲ್ಲಿ ಸಾಧನೆ ಮಾಡಿದ ವಿ.ವಿ. ಬಡಿಗೇರ, ಹಾರ್ಮೋನಿಯಂ ಸಾಧಕ ಹುಚ್ಚಯ್ಯಸ್ವಾಮಿ ಕಟಗಿಹಳ್ಳಿಮಠ, ಕೊಳಲು ಸಾಧಕ ಹನುಮಂತಪ್ಪ ಭಜಂತ್ರಿ, ರಂಗಭೂಮಿ ಸಾಧಕ ಮಹಾದೇವ ಗುಟ್ಲಿ ಅವರಿಗೆ ಸೋಮವಾರ ರಾತ್ರಿ ಹಾನಗಲ್ ಕುಮಾರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭಾವಚಿತ್ರ ಮೆರವಣಿಗೆ: ಮಂಗಳವಾರ ಬೆಳಗ್ಗೆ ವೀರೇಶ್ವರ ಪುಣ್ಯಾಶ್ರಮದಿಂದ ಲಿಂ. ಪಂಚಾಕ್ಷರ ಗವಾಯಿಗಳ ಹಾಗೂ ಲಿಂ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಭಾವಚಿತ್ರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಾಡಿಕೆಯಂತೆ ಸಂಗಮ್ಮ ಹೂಲಿ ಅವರ ನಿವಾಸಕ್ಕೆ ತೆರಳಿ ಅಲ್ಲಿಂದ ರಥೋತ್ಸವದ ಕಳಸದೊಂದಿಗೆ ಹೊರಟು ಮಧ್ಯಾಹ್ನ ವೀರೇಶ್ವರ ಪುಣ್ಯಾಶ್ರಮಕ್ಕೆ ಬಂದು ತಲುಪಿತು. ಮಾಡಲಗೇರಿಯ ಡಾ. ಪುಟ್ಟರಾಜೇಶ್ವರ ಸಾಂಸ್ಕೃತಿಕ ಕಲಾಸಂಘ, ಜಾಂಜ್ಮೇಳ, ಕರಡಿ ಮಜಲು, ಬ್ಯಾಂಜೋ ಮೇಳ, ನಂದಿಕೋಲು ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ನೂರಾರು ಭಜನಾ ಮೇಳಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ವಿವಿಧ ಭಾಗಗಳಿಂದ ಭಕ್ತರು: ಉಭಯ ಗವಾಯಿಗಳವರ ಜಾತ್ರಾಮಹೋತ್ಸವಕ್ಕೆ ಗದಗ, ದಾವಣಗೆರೆ, ಬಳ್ಳಾರಿ, ಕೊಪ್ಪಳ, ಹಾವೇರಿ, ಅಲ್ಲದೇ ಆಂಧ್ರಪ್ರದೇಶ, ಇನ್ನಿತರ ರಾಜ್ಯಗಳಿಂದಲೂ ಭಕ್ತರು ಜಾತ್ರಾ ಮಹೋತ್ಸವಲ್ಲಿ ಪಾಲ್ಗೊಂಡಿದ್ದರು.
ವಿಶೇಷ ಪೂಜೆ
ಉಭಯ ಶ್ರೀಗಳ ಜಾತ್ರಾಮಹೋತ್ಸವದ ಅಂಗವಾಗಿ ಕಳೆದ ಜೂ. 13ರಿಂದ 17ರ ವರೆಗೂ ಭಕ್ತರು ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿರುವ ಲಿಂ. ಹಾನಗಲ್ಲ ಕುಮಾರ ಶ್ರೀಗಳ, ಲಿಂ. ಪಂಚಾಕ್ಷರಿ ಗವಾಯಿಗಳ, ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ವೇದೋಕ್ತರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಗದಗ ನಗರದಲ್ಲಿರುವ ಕುಮಾರೇಶ್ವರ ವೈದಿಕ ಪಾಠಶಾಲೆಯ ವಿದ್ಯಾರ್ಥಿಗಳಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

