ಗದಗ

ಸ್ವಚ್ಛತೆ ಮರೆತ ಗದಗ-ಬೆಟಗೇರಿ

Published On :

ಗದಗ: ಜಿಲ್ಲಾ ಕೇಂದ್ರ ಗದಗ ನಗರದಲ್ಲಿರುವ ಮುಖ್ಯ ಮಾರುಕಟ್ಟೆ ಆವರಣವು ಕಸದ ತೊಟ್ಟಿಯಾಗಿ ಮಾರ್ಪಟ್ಟಿದ್ದು, ನಿತ್ಯ ನೂರಾರು ವಾಹನಗಳಲ್ಲಿ ಮಾರುಕಟ್ಟೆಗೆ ಬರುವ ತರಕಾರಿ, ಹಣ್ಣುಗಳಲ್ಲಿ ಬರುವ ಕಳಪೆ ಮಟ್ಟದ ವಸ್ತುಗಳನ್ನು ವ್ಯಾಪಕ ಪ್ರಮಾಣದಲ್ಲಿ ಮಾರುಕಟ್ಟೆ ಪಕ್ಕದಲ್ಲೇ ಚೆಲ್ಲುತ್ತಿರುವುದರಿಂದ, ಆಗಾಗ್ಗೆ ಸುರಿವ ತುಂತುರು ಮಳೆಯಿಂದಾಗಿ ಕೊಳೆತ ಸ್ಥಿತಿಯಲ್ಲಿರುವ ತರಕಾರಿಗಳ ದುರ್ನಾತ ವ್ಯಾಪಾರಸ್ಥರನ್ನು ಕಂಗೆಡಿಸಿದೆ.
ತೀವ್ರ ಸಮಸ್ಯೆ: ಅವಳಿ ನಗರದಾದ್ಯಂತ ಕಸದ ಸಮಸ್ಯೆ ತೀವ್ರವಾಗಿದೆ. ಪ್ರತಿಯೊಂದು ವಾರ್ಡ್‌ಗಳಲ್ಲಿ ಕಸಕ್ಕಾಗಿ ಇಟ್ಟಿರುವ ಕಂಟೇನರ್‌ಗಳನ್ನು ಸಕಾಲಕ್ಕೆ ಸಾಗಾಟ ಮಾಡದಿರುವುದರಿಂದ ಎಲ್ಲೆಡೆ ಕಸದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಆದರೆ, ನಗರದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಇದರ ಸಮಸ್ಯೆ ಹೆಚ್ಚಿನ ತೀವ್ರತೆ ಹೊಂದಿದೆ. ತರಕಾರಿ ಮಾರುಕಟ್ಟೆ ಸಮೀಪದಲ್ಲಿ ಕಸದ ಸಮಸ್ಯೆ ಸಾಕಷ್ಟು ತೀವ್ರವಾಗಿದೆ.
ಮಾರುಕಟ್ಟೆ ಪ್ರದೇಶದಲ್ಲಿ ಹೆಚ್ಚು: ನಗರದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ನಿತ್ಯವೂ ಟನ್‌ಗಟ್ಟಲೇ ಕಸ ಉತ್ಪತ್ತಿಯಾಗುತ್ತದೆ. ಸರ್ಕಾರ ಘನತ್ಯಾಜ್ಯ ವಿಲೇವಾರಿಗಾಗಿ ರೂಪಿಸಿರುವ ನಿಯಮಾವಳಿಗಳ ಪ್ರಕಾರ, ತರಕಾರಿ, ಹಣ್ಣು ಇನ್ನಿತರ ಮಾರುಕಟ್ಟೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕನಿಷ್ಠ ಎರಡು ದಿನಗಳಿಗೊಮ್ಮೆ ವಿಲೇವಾರಿ ಮಾಡಬೇಕು. ಆದರೆ, ಗದಗ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಮಾತ್ರ ಸಾಕಾರವಾಗುತ್ತಿಲ್ಲ. ಈ ಬಗ್ಗೆ ಮಾರುಕಟ್ಟೆ ಪ್ರದೇಶದಲ್ಲಿನ ವ್ಯಾಪಾರಸ್ಥರು ಹಲವಾರು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುವುದು ಮಾರುಕಟ್ಟೆಗೆ ಭೇಟಿ ನೀಡಿದ ಪ್ರತಿಯೊಬ್ಬರಿಗೂ ತಿಳಿದು ಬರುವ ಸತ್ಯ.
ದುರ್ನಾತ: ನಗರದ ಗ್ರೇನ್ ಮಾರ್ಕೇಟ್ ಹಾಗೂ ನಾಮಜೋಶಿ ರಸ್ತೆಯಲ್ಲಿ ಇರಿಸಲಾಗಿರುವ ಕಂಟೇನರ್‌ಗಳು ಕಸದಿಂದ ತುಂಬಿರುವುದರಿಂದ ವ್ಯಾಪಾರಸ್ಥರು ತ್ಯಾಜ್ಯವನ್ನು ರಸ್ತೆ ಮೇಲೆ ಸುರಿಯುವುದರಿಂದ ಪಾದಚಾರಿಗಳಿಗೂ ತೊಂದರೆ ಉಂಟಾಗುತ್ತಿದೆ. ಇನ್ನು ಕಂಟೇರ್‌ಗಳಲ್ಲಿ ಕೊಳೆತ ತರಕಾರಿಗಳು ದುರ್ನಾತ ಬೀರುತ್ತಿದ್ದು, ಇದರ ಬಗ್ಗೆಯೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಕಸ ಸಮರ್ಪಕ ವಿಲೇವಾರಿ ಮಾಡುತ್ತಿಲ್ಲ.
ತೊಂದರೆ: ರಸ್ತೆಯಲ್ಲಿ ಕೊಳೆತ ತರಕಾರಿ ಹಣ್ಣುಗಳನ್ನು ಬಿಸಾಕುವುದರಿಂದ ಬಿಡಾಡಿ ದನ ಹಾಗೂ ಹಂದಿಗಳ ಕಾಟ ವಿಪರೀತವಾಗಿದ್ದು, ಮಹಿಳೆಯರು, ಮಕ್ಕಳು ಮಾರುಕಟ್ಟೆಗೆ ಬರಲು ಭಯ ಪಡುತ್ತಿದ್ದಾರೆ. ಈಚೆಗೆ ಗೂಳಿಯೊಂದು ಮಹಿಳೆಗೆ ತಿವಿದು ಗಾಯಪಡಿಸಿದ ಘಟನೆ ನಡೆದಿದೆ. ಮಾರುಕಟ್ಟೆ ತರಕಾರಿ, ಹಣ್ಣು ತಂದ ವಾಹನಗಳು, ಗದಗನಿಂದ ಹಳ್ಳಿಗಳಿಗೆ ನಿತ್ಯ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿರುವುದೂ ತೊಂದರೆಯನ್ನು ಮತ್ತಷ್ಟು ಇಂಬುಗೊಳಿಸಿದೆ.
-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.