ಅಕಾಲಿಕ ಮಳೆಗೆ ಬೀದಿಗೆ ಬಿದ್ದ ಬದುಕು
ಪಿ.ಎಸ್. ಪಾಟೀಲ
ಕನ್ನಡಪ್ರಭ ವಾರ್ತೆ, ರೋಣ, ಮಾ. 11
ತಾಲೂಕಿನ ಬಾಸಲಾಪುರ, ಮುದೇನಗುಡಿ, ಹುಲ್ಲೂರ, ಅರಹುಣಸಿ, ಜಿಗಳೂರು, ಚಿಕ್ಕಮಣ್ಣೂರು, ಹಿರೇಮಣ್ಣೂರು ಸೇರಿದಂತೆ ವಿವಿಧೆಡೆ ಸೋಮವಾರ ರಾತ್ರಿ ಬಿಸಿದ ಭಾರಿ ಗಾಳಿ, ಮಿಂಚು ಸಹಿತ ಸುರಿದ ಭಾರಿ ಮಳೆಗೆ 200ಕ್ಕೂ ಹೆಚ್ಚು ಮನೆಗಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು, ಜನತೆ ಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ.
ರಭಸದ ಗಾಳಿಯೊಂದಿಗೆ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣದ ಹಳೇ ತಹಸೀಲ್ದಾರ್ ಕಚೇರಿ ಎದುರು, ತಾಪಂ ಕಚೇರಿ, ರೇಷ್ಮೆ ಇಲಾಖೆ ಎದುರಿದ್ದ ಗಿಡಗಳು ಉರುಳಿದ್ದರಿಂದ ಅನೇಕ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಪಟ್ಟಣದ ಅಲ್ಲಲ್ಲಿ ಗಿಡಗಳು ಉರುಳಿದ ಪಟ್ಟಣದಲ್ಲಿ 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ತುಂಡರಿಸಿ ಬಿದ್ದರಿಂದ ಪಟ್ಟಣದ ಅರ್ಧ ಭಾಗದಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಸಂಜೆಯ ವರೆಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಆಶ್ರಯ ಕಾಲೋನಿ ಹತ್ತಿರ 2 ವಿದ್ಯುತ್ ಕಂಬಗಳು ಮುರಿದು ಮನೆಗಳ ಮೇಲೆ ಬಿದ್ದಿವೆ.
ರಭಸವಾಗಿ ಸುರಿದ ಮಳೆಯಿಂದಾಗಿ ಪಟ್ಟಣದ ಶ್ರೀನಗರ, ಕಲ್ಯಾಣನಗರ, ಆಶ್ರಯ ಕಾಲೋನಿ, ದಲಿತ ಕಾಲೋನಿಗಳ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ದವಸ, ಧಾನ್ಯ, ಪಾತ್ರೆಗಳು ನೀರಿನಲ್ಲಿ ತೇಲುವಂತಾಯಿತು. ಶ್ರೀನಗರದಲ್ಲಿ 15ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಯ ತಗಡು ಕಿತ್ತು ಹೋಗಿದೆ. ಇಲ್ಲಿ ಬಹುತೇಕ ಕೂಲಿ ಕಾರ್ಮಿಕರು, ಬಡವರೇ ವಾಸವಾಗಿದ್ದು, ಮನೆಯಲ್ಲಿ ನೀರು ನಿಂತಿದ್ದು, ವಿದ್ಯುತ್ ಸಂಪರ್ಕವಿಲ್ಲದ್ದರಿಂದ ರಾತ್ರಿಪೂರ್ತಿ ಮಕ್ಕಳು, ಮರಿಗಳೊಂದಿಗೆ ಜಾಗರಣೆ ಮಾಡುವಂತಾಯಿತು ಎಂದು ಶ್ರೀನಗರದ ನಿವಾಸಿ ಮಾಬುಸಾಬ್ ಸೈಯದ್, ಕಲಂದರ ಸೈಯದ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
100 ಕ್ಕೂ ಹೆಚ್ಚು ಮನೆಗೆ ಹಾನಿ: ಬಾಸಲಾಪುರದಲ್ಲಿ ಸೋಮವಾರ ರಾತ್ರಿ ಭಾರಿ ಗಾಳಿ ಹಾಗೂ ರಭಸದ ಮಳೆಗೆ 100ಕ್ಕೂ ಹೆಚ್ಚು ಮನೆಗಳು ಸೇರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಹೆಂಚು, ದುರ್ಗಾದೇವಿ, ಈಶ್ವರ ದೇವಸ್ಥಾನದ ಮೇಲ್ಛಾವಣಿಯ ತಗಡು, ಹೆಂಚು ಕಿತ್ತು ಹೋಗಿದೆ. 4ಕ್ಕೂ ಹೆಚ್ಚು ಮನೆಗಳ ಗೋಡೆಗಳು ಬಿದ್ದಿವೆ. ಇದರಲ್ಲಿ 2 ಮನೆ ಸಂಪೂರ್ಣ ನೆಲಸಮವಾಗಿವೆ. ಯಾವುದೇ ರೀತಿಯ ಗಾಯ, ಪ್ರಾಣಾಪಾಯ ಸಂಭವಿಸಿಲ್ಲ.
ವಿವಿಧೆಡೆ ಮನೆಹಾನಿ: ಬಾಸಲಾಪುರದಲ್ಲಿ 100ಕ್ಕೂ ಹೆಚ್ಚು, ಹುಲ್ಲೂರಲ್ಲಿ 10ಕ್ಕೂ ಹೆಚ್ಚು, ಮುದೆನಗುಡಿಯಲ್ಲಿ 15ಕ್ಕೂ ಹೆಚ್ಚು, ಅರಹುಣಸಿಯಲ್ಲಿ 20ಕ್ಕೂ ಹೆಚ್ಚು, ಜಿಗಳೂರಲ್ಲಿ 10ಕ್ಕೂ ಹೆಚ್ಚು, ರೋಣದಲ್ಲಿ 20ಕ್ಕೂ ಹೆಚ್ಚು ಮನೆಗಳು, ಇನ್ನು ಚಿಕ್ಕಮಣ್ಣೂರು, ಹಿರೇಮಣ್ಣೂರು, ಹೊಸಹಳ್ಳಿ, ಕೊತಬಾಳ, ಮುಗಳಿ, ಸಂದಿಗವಾಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೆಲ ಮನೆಗಳಿಗೆ ಹಾನಿ ಸಂಭವಿಸಿದೆ. ಮುದೇನಗುಡಿಯಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಪರಿಹಾರಕ್ಕೆ ಆಗ್ರಹ: ರೋಣ ತಾಲೂಕಿನ ಮುದೇನಗುಡಿ, ಬಾಸಲಾಪುರ, ಹುಲ್ಲೂರ, ಹಿರೇಮಣ್ಣೂರು, ಚಿಕ್ಕಮಣ್ಣೂರು ಗ್ರಾಮಗಳಿಗೆ ತಹಸೀಲ್ದಾರ್ ಎ.ಜಿ. ಪಂಡಿತ, ಕಂದಾಯ ನಿರೀಕ್ಷಕ ಜೆ.ಟಿ. ಕೊಪ್ಪದ, ಗ್ರಾಮ ಲೆಕ್ಕಾಧಿಕಾರಿ ಆರ್.ಸಿ. ಕೊಪ್ಪದ, ಐ.ಎನ್. ಅಡಿವಣ್ಣವರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಹಾನಿಗೊಳಗಾದ ಜನತೆ ಪರಿಹಾರ ನೀಡುವಂತೆ ಆಗ್ರಹಿಸಿದರು.
25 ಹೆಕ್ಟೇರ್ ದ್ರಾಕ್ಷಿ ಹಾನಿ
ಕಳೆದ ಒಂದು ವಾರದಿಂದ ನಿತ್ಯ ಸಂಜೆ ಸುರಿದ ಮಳೆಯಿಂದಾಗಿ ಪಟ್ಟಣದ ಶಿವಲಿಂಗಪ್ಪ ಗಡಗಿ 2 ಎಕರೆ, ಕೆಂಚಪ್ಪ ಗಡಗಿ 3 ಎಕರೆ, ಅಶೋಕ ಗಡಗಿ 3 ಎಕರೆ ಸೇರಿದಂತೆ ತಾಲೂಕಿನಲ್ಲಿ ಸುಮಾರು 25 ಹೆಕ್ಟೇರ್ನಷ್ಟು ಸಂಪೂರ್ಣ ಕಟಾವು ಹಂತಕ್ಕೆ ಬಂದಿದ್ದ ದ್ರಾಕ್ಷಿ ಹಣ್ಣು ಸಂಪೂರ್ಣ(ಶೇ. 90 ರಷ್ಟು) ಹಾಳಾಗಿದೆ. ಈ ಬಾರಿ 1 ಹೆಕ್ಟೇರಿಗೆ ಸರಾಸರಿ 15 ರಿಂದ 20 ಟನ್ ಇಳುವರಿ ಬಂದಿತ್ತು. ಈ ಮಳೆಯಿಂದಾಗಿ ದ್ರಾಕ್ಷಿ ಬೆಳೆಗಾರರು ತೀವ್ರ ತೊಂದರೆ ಎದುರಿಸುವಂತಾಗಿದೆ. ಈ ಕುರಿತು ಸಮಗ್ರ ವರದಿ ತಯಾರಿಸಿ ಸರ್ಕಾಕ್ಕೆ ಸಲ್ಲಿಸಲಾಗುವುದು.
-ಎಂ.ಎಂ. ತಾಂಬೋಟಿ, ರೋಣ ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕರು
ಸೋಮವಾರ ಸುರಿದ ಮಳೆ, ಗಾಳಿಯಿಂದಾಗಿ 250ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಯ ತಗಡು ಮತ್ತು ಹಂಚುಗಳು ಕಿತ್ತು ಹೋಗಿವೆ. 2-3 ಮನೆಗಳ ಗೋಡೆ ಕುಸಿದಿದೆ. ಕೆಲವಡೆ ವಿದ್ಯುತ್ ಕಂಬಗಳು ಮನೆಯ ಮೇಲೆ ಬಿದ್ದು ಹಾನಿಯಾಗಿದೆ. ಸದ್ಯ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಪರಿಹಾರ ಕುರಿತು ಕೂಡಲೇ ಏನು ಹೇಳಲಾಗುವುದಿಲ್ಲ. ಹಾನಿಯಾದ ಕುರಿತು ವರದಿ ತಯಾರಿಸಿ ಮೇಲಧಿಕಾರಿಗಳ ಗನಮಕ್ಕೆ ತರಲಾಗುವುದು. ಮೇಲಧಿಕಾರಿಗಳ ಆದೇಶ ಮೇರೆಗೆ ಕ್ರಮಕ್ಕೆ ಮುಂದಾಗುತ್ತೇವೆ.
-ಎ.ಜಿ. ಪಂಡಿತ, ರೋಣ ತಹಸೀಲ್ದಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

