ಪುರುಷರಷ್ಟೇ ಮಹಿಳೆಯರು ಶ್ರೇಷ್ಠರು
ಮುಂಡರಗಿ: ಒಂದು ದೇಶದ ಆಚಾರ, ವಿಚಾರ ಮತ್ತು ಸಂಸ್ಕೃತಿ ಎತ್ತಿ ಹಿಡಿಯುವಲ್ಲಿ ಮಹಿಳೆ ಪಾತ್ರ ಮಹತ್ವದ್ದಾಗಿರುತ್ತದೆ. ಮಹಿಳೆಯರನ್ನು ಹೊರಗಿಟ್ಟು ಯಾವುದೇ ಪುರಾಣ ಅಥವಾ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಕೆಲವೇ ಕೆಲವು ದೇಶಗಳನ್ನು ಹೊರತುಪಡಿಸಿ ಜಗತ್ತಿನೆಲ್ಲೆಡೆ ಪುರುಷರಷ್ಟೆ ಮಹತ್ವ ಮಹಿಳೆಯರಿಗೂ ಇದೆ ಎಂದು ಉಪನ್ಯಾಸಕಿ ಚೇತನಾ ಹೊಸಮಠ ಹೇಳಿದರು.
ಈಚೆಗೆ ತಾಲೂಕಿನ ಶಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಮಹಿಳಾ ಜಾಗ್ರತ ವೇದಿಕೆ, ಮುಂಡರಗಿ ವೀರಭದ್ರೇಶ್ವರ ಮಹಿಳಾ ವೇದಿಕೆ, ಮುಂಡರಗಿಯ ಅಕ್ಕನ ಬಳಗ, ಶಿಂಗಟಾಲೂರು ಗ್ರಾಪಂ, ಶಿಂಗಟಾಲೂರು ಗ್ರಾಮದ ವಿವಿಧ ಸ್ತ್ರೀ ಸ್ವ-ಸಹಾಯ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜಕೀಯ, ಸಮಾಜ ಸೇವೆ, ವಿಜ್ಞಾನ, ಸಾರಿಗೆ ಮೊದಲಾದ ಕೆಲವು ಕ್ಷೇತ್ರಗಳಲ್ಲಿ ಮಹಿಳೆಯರು ಸಕ್ರೀಯರಾಗಿ ಭಾಗವಹಿಸುತ್ತಾರೆ ಎನ್ನುವುದು ಸತ್ಯವಾದರೂ ಎಲ್ಲ ರಂಗಗಳಲ್ಲಿಯೂ ಅವರು ಸಮ ಪ್ರಮಾಣದಲ್ಲಿ ಮುಕ್ತವಾಗಿ ಪಾಲ್ಗೊಳ್ಳುತ್ತಿಲ್ಲ ಎನ್ನುವುದೂ ಅಷ್ಟೆ ಸತ್ಯ. ಆದ್ದರಿಂದ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಾ ಎಲ್ಲ ಕ್ಷೇತ್ರಗಳಲ್ಲಿಯೂ ಸಬಲರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಮಹಿಳಾ ಜಾಗ್ರತ ವೇದಿಕೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಬಿಳಿಮಗ್ಗದ ಮಾತನಾಡಿ, ಮಹಿಳೆಯರ ಮೇಲಿನ ದಬ್ಬಾಳಿಕೆ ಹಾಗೂ ಶೋಷಣೆಗೆ ಕೇವಲ ಪುರುಷರಷ್ಟೆ ಕಾರಣ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ಮಹಿಳಾ ಶೋಷಣೆಗಳಲ್ಲಿ ಮಹಿಳೆಯರದ್ದು ದೊಡ್ಡ ಪಾತ್ರವಿರುತ್ತದೆ. ಬಹುತೇಕ ಪ್ರಕರಣಗಳಲ್ಲಿ ಮಹಿಳಾ ಶೋಷಣೆಗೆ ಮಹಿಳೆಯರೆ ಕಾರಣರಾಗಿರುತ್ತಾರೆ. ಬದುಕಿನಲ್ಲಿ ಹೆಣ್ಣು, ಗಂಡುಗಳು ಸಮಾನರಾಗಿದ್ದು, ಇಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.
ಶಾಂತಮ್ಮ ಹಿರೇಮಠ ಉದ್ಘಾಟಿಸಿದರು. ಪ್ರತಿಭಾ ಹೊಸಮನಿ, ಜಿ.ಎಸ್. ಅಣ್ಣಿಗೇರಿ ಮಾತನಾಡಿದರು. ಸರೋಜಾ ಹಂಚಿನಾಳ, ವೀಣಾ ಪಾಟೀಲ, ಲಕ್ಷ್ಮಿದೇವಿ ಬೆಳವಟಗಿಮಠ, ಹನುಮಮ್ಮ ಪಾಟೀಲ, ವೀರಮ್ಮ ಸಂಗಟಿ, ಅನಿತಾ ಬಾಗೇವಾಡಿ, ಜಯಕ್ಕ ಜಾಡರ, ಶ್ರೀದೇವಿ ಬಿಳಿಮಗ್ಗದ ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ಶೋಭಾ ಹುಲವತ್ತಿ ಸ್ವಾಗತಿಸಿದರು. ಶ್ರೀದೇವಿ ತಂಗೋಡ ನಿರೂಪಿಸಿದರು. ಲೀಲಾ ಅಕ್ಕೂರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

