ಗದಗ

ಅಲ್ಲಿ ಸ್ನೇಕ್ ಶ್ಯಾಮ್, ಇಲ್ಲಿ ಸ್ನೇಕ್ ಸ್ವಾಮಿ!

Published On :

ಕನ್ನಡಪ್ರಭ ವಾರ್ತೆ, ರೋಣ, ಮಾ. 14
ಮೈಸೂರು, ಬೆಂಗಳೂರು ಭಾಗದಲ್ಲಿ ಸ್ನೇಕ್ ಶ್ಯಾಮ್ ಜನಜನಿತರಾದಂತೆ, ಗದಗ ಹಾಗೂ ಉತ್ತರ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಹಾವು ಕಂಡೊಡನೆ ಜನರು 'ಸ್ನೇಕ್ ಸ್ವಾಮಿ'ಗೆ ಫೋನ್ ಮಾಡುತ್ತಾರೆ. ರೋಣ ತಾಲೂಕಿನ ಕೊತಬಾಳದ ಮೇಘಯ್ಯಸ್ವಾಮಿ ಹಿರೇಮಠ ಹಾಡು ಹಿಡಿಯುವುದರಲ್ಲಿ ನಿಷ್ಣಾತ.
ಹಾವು ಎಂದರೆ ಹರನೂ ನಡುಗಿದನಂತೆ. ಇನ್ನು ಸಾಮಾನ್ಯ ಜನರ ಪಾಡು ಹೇಳುವುದುಂಟೆ? ಇಂತಹ ಸ್ಥಿತಿಯಲ್ಲಿ ಹಾವು ಕಾಣಿಸಿಕೊಂಡ ಸುದ್ದಿ ತಿಳಿದರೆ ಸ್ಥಳಕ್ಕೆ ಧಾವಿಸುವ ಮೇಘಯ್ಯ ಸ್ವಾಮಿ, ಯಾವುದೇ ಭಯವಿಲ್ಲದೆ ಬರಿಗೈಯಲ್ಲಿ ಹಾವು ಹಿಡಿಯುತ್ತಾರೆ. ಅದನ್ನು ಸುರಕ್ಷಿತವಾಗಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಬರುತ್ತಾರೆ. ಹಾವಿನ ಕುರಿತಾಗಿ ಜನರ ಭಯ ದೂರ ಮಾಡುವ ಜತೆಗೆ, ಅದರ ಪ್ರಭೇದ, ಜೀವನ ಶೈಲಿ, ವಾಸ್ತವ್ಯ, ಗುಣಾವಗುಣ, ಆಹಾರ ಇತ್ಯಾದಿಗಳನ್ನು ವಿವರಿಸಿ ಹೇಳುತ್ತಾರೆ. ಹಣದಾಸೆಗೆ ಇದನ್ನೆಲ್ಲ ಅವರು ಮಾಡುವುದಿಲ್ಲ. ದೇಶಕ್ಕೆ ಜನಪದ ಕಲೆ, ಸಂಸ್ಕೃತಿ ಪರಿಚಯಿಸಿ ಮೆಚ್ಚುಗೆ ಪಡೆದ ಅರುಣೋದಯ ಕಲಾ ತಂಡ ಇರುವ ಕೊತಬಾಳ ಗ್ರಾಮ 'ಸ್ನೇಕ್ ಸ್ವಾಮಿ' ಅವರಿಂದಲೂ ಪ್ರಸಿದ್ಧ.
ಕರೆಗೆ ಓಗೊಡುವ ಸ್ವಾಮಿ: ಇಲ್ಲಿನವರಿಗೆ ಹಾವು ಕಂಡರೆ ಮೇಘಯ್ಯಸ್ವಾಮಿ ನೆನಪಾಗುತ್ತಾನೆ. ಕರೆ ಬಂದ ತಕ್ಷಣ ಸ್ವಂತ ಬೈಕನ್ನೇರಿ ಹಗಲು-ರಾತ್ರಿ ಎನ್ನದೆ ಧಾವಿಸುವ ಅವರು, ಆ ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಮೇಲೆಯೇ ಮನೆಗೆ ಮರಳುತ್ತಾರೆ.
600ಕ್ಕೂ ಹೆಚ್ಚು ಹಾವು ಹಿಡಿದಿದ್ದಾರೆ: 45ರ ಹರೆಯದ ಮೇಘಯ್ಯಸ್ವಾಮಿ ಹಿರೇಮಠ 20 ವರ್ಷಗಳಿಂದ 600ಕ್ಕೂ ಹೆಚ್ಚು ಹಾವು ಹಿಡಿದು ಜನರಿಂದ ಸೈ ಎನಿಸಿಕೊಂಡಿದ್ದಾರೆ. ರಾಯಚೂರು, ಬಾಗಲಕೋಟೆ, ಧಾರವಾಡ, ಬಿಜಾಪುರ, ಗುಲ್ಬರ್ಗಾ, ಕೊಪ್ಪಳ ಜಿಲ್ಲೆಗಳಲ್ಲೂ ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ. ನಾಗರ ಹಾವು, ಮಲಬಾರಿನ ಗುಳಿಮಂಡಲ ಹಾವು, ರಸ್ಸೆಲನ ಮಂಡಲ ಹಾವು, ಬಿದುರು ಗುಳಿಮಂಡಲ ಹಾವು, ಕೊಳಕುಮಂಡಲ ಹಾವು, ಸಾಮಾನ್ಯ ಕಟ್ಟು ಹಾವುಗಳನ್ನಲ್ಲದೆ, ತೀರ ಸಾಮಾನ್ಯವಾಗಿ ಕಾಣುವ ಕೇರೆ ಹಾವು, ಕುಕ್ರಿ ಹಾವು, ಚೌಕಳಿ ಬೆನ್ನೇಣು ಹಾವು, ಹಸಿರು ಬೆನ್ನೇಣು ಹಾವು, ಪಟ್ಟ ಬೆನ್ನೇನು ಹಾವು, ಹಸಿರು ಹಾವು, ತೋಳು ಹಾವು, ಕವಚ ಬಾಲದ ಹಾವು, ಮಣ್ಣುಮುಕ್ಕ ಇತ್ಯಾದಿಗಳನ್ನೂ ಸಂರಕ್ಷಿಸಿದ್ದಾರೆ.
ಸಮಾಜಮುಖಿ ಕುಟುಂಬ: ಬಡತನವಿದ್ದರೂ ಹಿರೇಮಠರ ಕುಟುಂಬ ಸಮಾಜ ಸೇವೆಗೆ ಸಮರ್ಪಿಸಿಕೊಂಡಿದೆ. ಎರಡು ವರ್ಷಗಳ ಹಿಂದೆ (2012) ನಿಧನರಾದ ಇವರ ತಂದೆ ಶೇಖರಯ್ಯ ಹಿರೇಮಠರ ಮೃತ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನೂಕೂಲವಾಗಲೆಂದು ತಂದೆಯ ಇಚ್ಛೆಯಂತೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದರು. ತಾಯಿಯೂ ದೇಹದಾನದ ಸಂಕಲ್ಪ ತೊಟ್ಟಿದ್ದಾರೆ.
- ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.