ಗದಗ

ಪಿಯು ಪರೀಕ್ಷೆ: ನಾಲ್ವರು ವಿದ್ಯಾರ್ಥಿಗಳು ಡಿಬಾರ್

Published On :

ಗದಗ: ಶುಕ್ರವಾರ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಡಂಬಳದ ಜೆ.ಟಿ. ಪಪೂ ಕಾಲೇಜಿನ-1, ಮುಂಡರಗಿಯ ಜೆಎ ಪಪೂ ಕಾಲೇಜಿನ-1, ನರೇಗಲ್ಲದ ಎಸ್.ಎ. ಪಪೂ ಕಾಲೇಜಿನ-1, ಗಜೇಂದ್ರಗಡ ಸರ್ಕಾರಿ ಪಪೂ ಕಾಲೇಜಿನ-1 ಒಟ್ಟು ನಾಲ್ವರು ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ. ಸಮಾಜಶಾಸ್ತ್ರ ವಿಷಯಕ್ಕೆ 4885 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, 4614 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, 271 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಲೆಕ್ಕಶಾಸ್ತ್ರದಲ್ಲಿ 2273 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, 2229 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 44 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಂಗಟಾಲೂರು ಏತನೀರಾವರಿ ಯೋಜನೆ ಶೀಘ್ರದಲ್ಲಿ ನಾಡಿಗೆ ಸಮರ್ಪಣೆ
ಮುಂಡರಗಿ: ಬರದ ನಾಡಿಗೆ ವರದಾನವಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆ ಶೀಘ್ರದಲ್ಲಿ ನಾಡಿಗೆ ಸಮರ್ಪಣೆ ಮಾಡಿ ರೈತರ ಹಿತ ಕಾಪಾಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಅವರು ಈಚೆಗೆ ತಾಲೂಕಿನ ಹಳ್ಳಿಗುಡಿ ಗ್ರಾಮದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ವತಿಯಿಂದ ರು. 1.50 ಕೋಟಿ ವೆಚ್ಚದ ಕೋಟುಮಚಗಿ-ಬರದೂರು ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸರ್ಕಾರದ ಹಣ ಪೋಲಾಗದಂತೆ ಗುಣಮಟ್ಟದ ಕಾಮಗಾರಿಯನ್ನು ಮಾಡಿ ಸರ್ಕಾರದ ಹಣ ಸದ್ಬಳಕೆಯಾಗಬೇಕು. ಮುಂಡರಗಿ ತಾಲೂಕಿನ ಡಂಬಳ, ತಾಮ್ರಗುಂಡಿ, ನೀರಾವರಿ ಕೆರೆಗಳ ಪುನಶ್ಚೇತನಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು ಸದ್ಯದಲ್ಲೇ ಕಾಮಗಾರಿ ಕೈಗೊಳ್ಳಲಾಗುವುದು. ಕಾಂಗ್ರೆಸ್ ನೇತೃತ್ವದ ಸಿಎಂ ಸಿದ್ದರಾಮಯ್ಯ ಅವರು ಕೃಷಿಕರ, ಕಾರ್ಮಿಕರ, ಬಡವರ, ಹಿಂದುಳಿದ ವರ್ಗಗಳಿಗೆ ಅನುದಾನ ಹಾಗೂ ಪ್ರಾಧಾನ್ಯತೆ ನೀಡಿ ಉತ್ತಮ ಆಡಳಿತ ನೀಡಿದ್ದಾರೆ. ಶಿಕ್ಷಣ, ಕೃಷಿ, ಆರೋಗ್ಯ, ನೀರಾವರಿ ಯೋಜನೆಗೆ ಬಜೆಟ್‌ನಲ್ಲಿ ಹಣ ಕಾಯ್ದಿರಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದರು. ಯುವ ಮುಖಂಡ ಮಿಥುನಗೌಡ ಪಾಟೀಲ ಮಾತನಾಡಿ, ಸಮಗ್ರ ರೋಣ ಮತಕ್ಷೇತ್ರದ ಅಭಿವೃದ್ಧಿಗೆ ಯೋಜನೆ ರೂಪಿಸಿ ಶಾಸಕ ಜಿ.ಎಸ್. ಪಾಟೀಲರು ಕಾಮಗಾರಿ ಚಾಲನೆ ನೀಡಿದ್ದಾರೆ ಎಂದರು. ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಲಿಂಗಾರಡ್ಡಿ, ದೇವರಾಜ, ಗುರುಣ್ಣ ಕುರ್ತಕೋಟಿ, ಕೆ.ವಿ. ಹಂಚಿನಾಳ, ಜಿ.ಎಸ್. ಕೊರ್ಲಹಳ್ಳಿ, ಜಿಪಂ ಎಇಇ ಪ್ರಭಾಕರ, ತಾಪಂ ಇಒ ಡಿ.ಮೋಹನ, ವಿ.ಬಿ. ಸೋಮನಕಟ್ಟಿಮಠ, ಶಿವಪ್ಪ ಪೂಜಾರ, ಕಳಕಪ್ಪ ಜೋಗಿನ, ಹನುಮಂತಪ್ಪ ಗಡ್ಡದ, ವಿ.ಟಿ. ಮೇಟಿ, ಚನ್ನಪ್ಪ ಪ್ಯಾಟಿ, ಹಾಲಪ್ಪ ಹರ್ತಿ, ವಿ.ಆರ್. ಗುಡಿಸಾಗರ, ದೊಡ್ಡಬಸಪ್ಪ ಚನ್ನಳ್ಳಿ, ಬಸವರಾಜ ಚನ್ನಳ್ಳಿ, ಶಶಿಧರ ಪುರದ, ಶಿವಶಂಕರಪ್ಪ ಯಳವತ್ತಿ, ಅಂದಪ್ಪ ಹಣವಾಳ, ಬಸವರಾಜ ಬಿಸ್ನಳ್ಳಿ, ಯಲ್ಲಪ್ಪ ಹಾಗಲದ ಮುಂತಾದವರು ಉಪಸ್ಥಿತರಿದ್ದರು.
ಇಂದು ವಿಶ್ವ ಕುಟುಂಬ ದಿನಾಚರಣೆ
ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ ಹಾಗೂ ದೊರೆಸ್ವಾಮಿ ವಿರಕ್ತಮಠದ ಸಂಯುಕ್ತ ಆಶ್ರಯದಲ್ಲಿ 224ನೇ ಮಾಸಿಕ ಶಿವಾನುಭವದ ಅಂಗವಾಗಿ ವಿಶ್ವ ಕುಟುಂಬ ದಿನಾಚರಣೆ ಕಾರ್ಯಕ್ರಮ ಮಾ. 15ರಂದು ಸಂಜೆ 7.30ಕ್ಕೆ ಜರಗಲಿದೆ. ಈ ಸಮಾರಂಭಕ್ಕೆ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಹೆಬ್ಬಾಳಯ ವೀರೇಶ್ವರ ದೇವರ, ಪ್ರೌಢ ಶಾಲಾ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್. ಪಾಟೀಲ, ಪಂಚಾಯಿತಿ ಅಧಿಕಾರಿ ಎಂ.ಆರ್. ಲಕ್ಷ್ಮೇಶ್ವರ, ಆರೋಗ್ಯ ಶಿಕ್ಷಣಾಧಿಕಾರಿ ವಿ.ಕೆ. ತಳವಾರ ಹಾಗೂ ರೋಣದ ಅವಿಭಕ್ತ ಕುಟುಂಬದ ಮಾಲೀಕರಾದ ಮರಿಯವ್ವ ಭಜಂತ್ರಿ, ಶಹಜಾನ ಮುದಕವಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.