ಗದಗ

ಉದ್ಯೋಗಾವಕಾಶ ಸದುಪಯೋಗಪಡಿಸಿಕೊಳ್ಳಿ

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 18
ಅರ್ಥಶಾಸ್ತ್ರದ ಜ್ಞಾನ ಪ್ರತಿಯೊಬ್ಬರಿಗೂ ಬೇಕೆ ಬೇಕು. ಜಗತ್ತಿನಲ್ಲಿ ಅರ್ಥಶಾಸ್ತ್ರ ಮಹತ್ವದ ವಿಷಯವಾಗಿದೆ. ಅರ್ಥಶಾಸ್ತ್ರ ಅಧ್ಯಯನ ಮಾಡಿದ ವಿದ್ಯಾರ್ಥಿ ಜೀವನದಲ್ಲಿ ಸದಾ ಯಶಸ್ಸು ಸಂಪಾದಿಸುತ್ತಾನೆ. ಅದಕ್ಕಾಗಿ ಅರ್ಥಶಾಸ್ತ್ರ ಮತ್ತು ವಾಣಿಜ್ಯ ಶಾಸ್ತ್ರ ಅಧ್ಯಯನ ಮಾಡಿ ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಮುಂಡರಗಿಯ ಕೆ.ಆರ್. ಬೆಲ್ಲದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಬಿ.ಜಿ. ಜವಳಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸ್ಥಳೀಯ ಕೆಎಸ್‌ಎಸ್ ಕಲಾ ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಸಭಾಭವನದಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡ ಅರ್ಥಶಾಸ್ತ್ರ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜ ವಿಜ್ಞಾನಕ್ಕೆ ನೋಬಲ್ ಪ್ರಶಸ್ತಿ ಬಂದಿದ್ದು ಅರ್ಥಶಾಸ್ತ್ರಕ್ಕೆ ಮಾತ್ರ. ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ ಕಲಿತ ವಿದ್ಯಾರ್ಥಿಗಳು ಕಾಲೇಜುಗಳು, ಬ್ಯಾಂಕುಗಳು, ಎಲ್‌ಐಸಿ, ಯೋಜನಾ ಇಲಾಖೆ, ಕಾರ್ಪೋರೇಟ್ ಸೆಕ್ಟರ್, ಸಿ.ಎ, ಖಾಸಗಿ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗಗಳನ್ನು ಪಡೆದು ಸುಖಜೀವನ ಸಾಗಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎನ್. ಕಾಮನಹಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರವನ್ನು ಸರಿಯಾಗಿ ಅಧ್ಯಯನ ಮಾಡಿ ಕೆಎಎಸ್, ಐಎಎಸ್, ಐಪಿಎಸ್, ಸಿಎ ಹುದ್ದೆ ಪಡೆಯಬೇಕು. ಜತೆಗೆ ಇತರೆ ಸರ್ಕಾರಿ, ಖಾಸಗಿ ನೌಕರಿ ಪಡೆಯಬೇಕು.
ಅರ್ಥಶಾಸ್ತ್ರ ವಿಷಯದ ಆಳವಾದ ಅಧ್ಯಯನ ಮಾಡಲು ಎನ್‌ಸೈಕ್ಲೋಪಿಡಿಯಾ, ಮ್ಯಾಗಜಿನ್, ಜರ್ನಲ್, ಸಾಮಾನ್ಯ ಜ್ಞಾನ ತಿಳಿದುಕೊಳ್ಳಬೇಕು. ಅರ್ಥಶಾಸ್ತ್ರ ಓದಿದ ವಿದ್ಯಾರ್ಥಿಗಳ ಜೀವನ ಸಮಾಜದ ಇತರರಿಗೆ ಮಾದರಿಯಾಗಿರುತ್ತದೆ. ಹಣಕಾಸು ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡಿದರೆ ಜೀವನ ಸುಂದರಮಯವಾಗುತ್ತದೆ ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ಎ. ಸೊಲ್ಲಾಪುರ, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್.ಎಸ್. ಹುಣಸಿಮರದ, ಐಕ್ಯೂಎಸಿ ಕೋ-ಆರ್ಡಿನೆಟರ್ ಎಂ.ಸಿ. ವಗ್ಗಿ ಮುಂತಾದವರು ಉಪಸ್ಥಿತರಿದ್ದರು.
ಪಿ.ಆರ್. ಹೂಗಾರ ಪ್ರಾರ್ಥಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎನ್.ವಿ. ಗಂಗಮ್ಮನವರ ಸ್ವಾಗತಿಸಿದರು. ಕುಮಾರ ಕುಡಗುಂಟಿ ನಿರೂಪಿಸಿದರು. ಪ್ರೊ. ಹುಣಸಿಮರದ ವಂದಿಸಿದರು.
--
ಉತ್ತಮ ಸಂಸ್ಕಾರ ಕೊಡುವವನೆ ಗುರು
ಗದಗ: ಮನುಷ್ಯನಿಗೆ ತಗಲಿರುವ ಎಲ್ಲ ಮಾಯಾ ಬಂಧನಗಳನ್ನು, ಅಹಂಕಾರಾಧಿಗಳನ್ನು, ಅವನ ದುಷ್ಟ ಗುಣಗಳನ್ನು ದೂರೀಕರಿಸಿ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡಿ ಉತ್ತಮ ಜ್ಞಾನ ದಯಪಾಲಿಸುವವನೆ ಗುರು ಎಂದು ಬಳಗಾನೂರಿನ ಶಿವಶಾಂತವೀರ ಶ್ರೀಗಳು ಹೇಳಿದರು.
ನಗರದ ಮುಳಗುಂದ ನಾಕಾದ ರೇಣುಕ ಮಂದಿರದಲ್ಲಿ ರೇಣುಕಾಚಾರ್ಯ ಜಯಂತಿ ಅಂಗವಾಗಿ ಈಚೆಗೆ ಜರುಗಿದ ರೇಣುಕ ವಿಜಯ ಪುರಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಗುರುವಾದವನು ಸದಾಕಾಲ ಜ್ಞಾನಾರ್ಜನೆಗೆ ಬಂದ ಎಲ್ಲ ವಿದ್ಯಾರ್ಥಿಗಳನ್ನು ಸಮಾನ ದೃಷ್ಟಿಯಿಂದ ಕಾಣಬೇಕು. ಅವರಿಗೆ ಸಮಾಜದಲ್ಲಿ ಬದುಕುವ ಕಲೆ ಕಲಿಸಬೇಕು. ವೀರಶೈವ ಪರಂಪರೆಯನ್ನು, ಜಗತ್ತಿಗೆ ಸದಾಕಾಲ ಧರ್ಮದ ಬೋಧನೆ ನೀಡಿರುವ ರೇಣುಕಾದಿ ಪಂಚಾಚಾರ್ಯರ ಲೀಲೆಗಳನ್ನು ತಿಳಿಸುವ ಮೂಲಕ ಜನರು ಧರ್ಮದ ಹಾದಿಯಲ್ಲಿ ನಡೆದು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಲು ಗುರುಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅಂತಹ ಗುರುಗಳನ್ನು ನಾವು ಗೌರವಿಸಬೇಕು. ಗುರುಗಳಿಗೆ ತೊಂದರೆ, ಚ್ಯುತಿಯಾದರೆ ನಾವು ಧೈರ್ಯದಿಂದ ಎದುರಿಸಿ ಧರ್ಮ ಕಾಪಾಡಬೇಕು ಎಂದರು. ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು ರೇಣುಕರ ಲೀಲೆಗಳನ್ನು ವಿವರಿಸಿದರು. ಶೈಲಾ ಮಾಳೆಕೊಪ್ಪಮಠರು 'ಧರ್ಮದಲ್ಲಿ ಮಹಿಳೆಯರ ಪಾತ್ರ' ಕುರಿತು ಉಪನ್ಯಾಸ ನೀಡಿದರು. ಸುಮಂಗಲಾ ಹೊಸಮನಿ, ಶಿವಲೀಲಾ ಕುರುಡಗಿ, ರಜನಿ ಪಾಟೀಲ, ಪ್ರೇಮಾ ಹಿರೇಮಠ, ಶಿವಲೀಲಾ ರಬ್ಬನಗೌಡ್ರರನ್ನು ಸನ್ಮಾನಿಸಲಾಯಿತು. ಗಿರಿಜಾದೇವಿ ಹಿರೇಮಠ, ಗಿರಿಜಾದೇವಿ ಕೂಗು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.