ಗದಗ

ವಿಜ್ಞಾನ ಪ್ರೀತಿಸಿ, ಗೌರವಿಸುವ ಕಾರ್ಯವಾಗಲಿ: ಗೌಡರ

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 19
ಇಂದು ವಿಜ್ಞಾನ ಎಲ್ಲ ಕ್ಷೇತ್ರಗಳಲ್ಲೂ ಹಾಸು ಹೊಕ್ಕಾಗಿದ್ದು, ಕಾರಣ ವಿಜ್ಞಾನವನ್ನು ಪ್ರೀತಿಸಿ, ಗೌರವಿಸುವ ಕಾರ್ಯವಾಗಬೇಕಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಎಸ್. ಗೌಡರ           ಹೇಳಿದರು.
ಬುಧವಾರ ಬೆಟಗೇರಿಯ ಮನ್ನೂಬಾಯಿ ಈಶ್ವರಸಾ ಖೋಡೆ ಕಲ್ಯಾಣ ಮಂಟಪದಲ್ಲಿ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಗದಗ ಹಾಗೂ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗದಗ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನವು ಎಲ್ಲ ರಂಗದಲ್ಲಿ ತನ್ನ ಛಾಪುಗಳನ್ನು ಚಾಚಿದ್ದು, ಇಂದು ವಿಜ್ಞಾನವಿಲ್ಲದೇ ಯಾವುದೇ ರಂಗ ಅಭಿವೃದ್ಧಿ ಹೊಂದುವುದಿಲ್ಲ ಎಂಬ ಮನೋಭಾವನೆಯಿದೆ. ಹಾಗಾಗಿ ಪ್ರತಿಯೊಬ್ಬರೂ ವಿಜ್ಞಾನ ರಂಗದಲ್ಲಿ ಉಂಟಾಗುವ ಹೊಸ ಹೊಸ ಬದಲಾವಣೆಗಳನ್ನು ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಯಲ್ಲಿ ಅಳವಡಿಸಿಕೊಂಡು ಉನ್ನತಿಯಡೆಗೆ ಕಾಲನ್ನಿಡಬೇಕು. ವಿಜ್ಞಾನವಿಲ್ಲದೇ ಮಾನವ ಜೀವಿಸಲಾರ. ಇಂದು ವೈಜ್ಞಾನಿಕ ತಳಹದಿ ಮೇಲೆ ಬದುಕು ಕಟ್ಟಿಕೊಂಡು ದೇಶ ಅಭಿವೃದ್ಧಿಪಡಿಸಬೇಕಾಗಿದೆ. ವಿಜ್ಞಾನ ಎಲ್ಲರಿಗೂ ಚಿಂತನೆ, ವೈಜ್ಞಾನಿಕ ಮನೋಭಾವನೆ ಕಲಿಸುತ್ತದೆ ಎಂದರು.
ಇಂದಿನ ವೈಜ್ಞಾನಿಕ ದಿನಗಳಲ್ಲಿಯೂ ಹಲವು ಕಡೆಗಳಲ್ಲಿ ಮೂಢನಂಬಿಕೆಗಳು ತಾಂಡವವಾಡುತ್ತಿರುವುದು ನೋವಿನ ಸಂಗತಿ. ಇದಕ್ಕೆ ಪ್ರಮುಖ ಕಾರಣ ಜನರಲ್ಲಿರುವ ತಪ್ಪು ಕಲ್ಪನೆ. ಕಾರಣ ಇಂದಿನ ಯುವಪೀಳಿಗೆ ಜನರಲ್ಲಿರುವ ತಪ್ಪು ಕಲ್ಪನೆ, ಮೂಢನಂಬಿಕೆ ಹೋಗಲಾಡಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯ ಮಾಡಬೇಕಾಗಿದೆ. ವಿದ್ಯಾರ್ಥಿಗಳು ಗದಗ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ವಿಜ್ಞಾನ ದಿನಾಚರಣೆ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಜನರಲ್ಲಿ ವಿಜ್ಞಾನದ ಪ್ರಗತಿ ಕುರಿತು ಪ್ರತಿಯೊಬ್ಬರಲ್ಲಿಯೂ ತಿಳಿವಳಿಕೆ ಮೂಡಿಸುವ ಕಾರ್ಯ ಕೈಗೊಳ್ಳುವಂತೆ ಸಲಹೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಎಫ್. ಶಿದ್ನೆಕೊಪ್ಪ ಮಾತನಾಡಿದರು. ವಿಜ್ಞಾನಿ ಡಾ. ವೀರೇಶ ಶರ್ಮಾ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರೌಢಶಾಲೆ ಶಿಕ್ಷಕರಾದ ಶಾಮಲಾ ನಾಯಕ, ಭುವನೇಶ್ವರಿ ಪೊಲೀಸ್ ಪಾಟೀಲ, ಎಂ.ಎಸ್. ನಾಶಿಪುಡಿ, ಎಸ್.ಆರ್. ರಿತ್ತಿ, ಎಸ್.ಎಲ್. ಮರಿಗೌಡ್ರ, ಎಸ್.ಐ. ದಿಂಡೂರ ಪದವಿಪೂರ್ವ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕ ಬಿ.ಎ. ವೆಂಕರಡ್ಡಿ, ಸಿ.ಎಸ್. ಅರಸನಾಳ, ಎಚ್.ಎಫ್.ಪೂಜಾರ, ಪಿ.ಆರ್. ಯಳಮಲಿ, ಅನ್ನದಾನಿ ಹಿರೇಮಠ ಹಾಗೂ ಪದವಿಯ ಮಂಜುಳಾ ಹಂಚಿನಾಳ, ಡಾ. ಎಸ್.ಬಿ. ಸಜ್ಜನರ, ಐ.ಎಫ್. ಪಟ್ಟಣಶೆಟ್ಟಿ, ಅರವಿಂದ ಸಜ್ಜನರ ಇತರರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಪರಿಷತ್ ರಾಜ್ಯಾಧ್ಯಕ್ಷ ಪ್ರಾ. ಎಸ್.ವಿ. ಸಂಕನೂರ ಪ್ರಾಸ್ತಾವಿಕ ಮಾತನಾಡಿದರು. ಅತಿಥಿಗಳಾಗಿ ಕಾಶಪ್ಪನವರ, ಎಂ.ವಿ. ಜೋಶಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.