ಕ್ಷುಲ್ಲಕ ಕಾರಣಕ್ಕೆ ಯೋಧನಿಂದ ಗಲಾಟೆ: ಇಬ್ಬರು ಪೇದೆ ಗಾಯ
ಹಾನಗಲ್ಲ: ಸಿಆರ್ಪಿಎಫ್ ಯೋಧನೋರ್ವ ಕ್ಷುಲ್ಲಕ ಕಾರಣಕ್ಕೆ ಅಡುಗೆ ತಯಾರಕರೊಂದಿಗೆ ತಂಟೆ ತೆಗೆದ ಪರಿಣಾಮ ಹಿರೇಬಾಸೂರು ಗ್ರಾಮದ ಚಿಲುಮವ್ವ ದೇವಿ ಜಾತ್ರಾ ಮಹೋತ್ಸವದಲ್ಲಿ ಗದ್ದಲವಾಗಿ, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ರಜೆ ಹಿನ್ನೆಲೆಯಲ್ಲಿ ಹಿರೇಬಾಸೂರು ಗ್ರಾಮಕ್ಕೆ ಆಗಮಿಸಿರುವ ಸಿಆರ್ಪಿಎಫ್ ಯೋಧ ಪ್ರಕಾಶ ನಿಂಗಪ್ಪ ಗೋಡಿ ಜಾತ್ರೆಯ ಅನ್ನಸಂತರ್ಪಣೆ ವಿಭಾಗದಲ್ಲಿ ತಕರಾರು ತೆಗೆದಿದ್ದಾನೆ. ಆಗ ಮಾತಿಗೆ ಮಾತು ಬೆಳೆದು, ಜಗಳ ನಡೆದಿದೆ. ಆಗ ಜಾತ್ರಾ ಸಮಿತಿ ಪದಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಪ್ರಕಾಶ್ಗೆ ಬುದ್ಧಿವಾದ ಹೇಳಿದರೂ ಪುಂಡಾಟಿಕೆ ಮುಂದುವರಿಸಿದ್ದಾನೆ.
ಆಡೂರು ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದರೂ ಪ್ರಕಾಶ್ ಹಾಗೂ ಆತನ ಸಂಗಡಿಗರ ಗದ್ದಲ ನಿಲ್ಲಲಿಲ್ಲ. ಪೊಲೀಸರನ್ನೂ ಏಕವಚನದಲ್ಲಿ ನಿಂದಿಸಿ, ತಳ್ಳಾಡಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ. ಶಿವರಾಜ್ ರೇವಣಪ್ಪ ತೋಟಗೇರ (19) ಎಂಬ ಯುವಕನೂ ಅಸ್ವಸ್ಥನಾಗಿದ್ದು, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕಾಶ್ನ ಸಂಗಡಿಗರು ಪೊಲೀಸ್ ವಾಹನದ ಗಾಲಿಗೆ ಕಲ್ಲಿಟ್ಟು, ತಡೆದಿದ್ದರಿಂದ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಹಾನಗಲ್ಲ ಸಿಪಿಐ ಬಿ.ಎಸ್. ಮಂಟೂರ, ಆಡೂರು ಪಿಎಸ್ಐ ಕಾಂತರಾಜ್ ಸ್ಥಳಕ್ಕಾಗಮಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಡೂರು ಠಾಣೆಯಲ್ಲಿ ಒಟ್ಟು 53 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಈ ಪೈಕಿ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಲೆ ಮರೆಸಿಕೊಂಡಿರುವ ಯೋಧ ಪ್ರಕಾಶ್ ಹಾಗೂ ಇತರರಿಗಾಗಿ ಶೋಧ ಮುಂದುವರಿದಿದೆ.
ಬಾಲ್ಯವಿವಾಹಕ್ಕೆ ರಕ್ಷಣಾ ಸಮಿತಿ ತಡೆ
ಕನ್ನಡಪ್ರಭ ವಾರ್ತೆ, ಕುಷ್ಟಗಿ, ಮಾ. 21
ತಾಲೂಕಿನ ಮೀಯಾಪುರ ಗ್ರಾಮದ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಮದುವೆ ಮಾಡುವ ಪ್ರಯತ್ನಕ್ಕೆ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯರು ಗುರುವಾರ ತಡೆಯೊಡ್ಡಿದ್ದು, ಓರ್ವ ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ಯಲಬುರ್ಗಾ ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನಾಗಬಸಮ್ಮ ಪರಪ್ಪ ಬೇವೂರ (14) ಹಾಗೂ ಗವಿಸಿದ್ದವ್ವ ಪರಪ್ಪ ಬೇವೂರ (13) ಎಂಬುವರ ವಿವಾಹ ಮಾಡಲು ಹಿರಿಯರು ತೀರ್ಮಾನಿಸಿದ್ದರು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಮಕ್ಕಳ ರಕ್ಷಣಾ ಸಮಿತಿ ಸದಸ್ಯರು, ನಾಗಬಸಮ್ಮ ಎಂಬಾಕೆಯನ್ನು ವಶಕ್ಕೆ ಪಡೆದಿದ್ದಾರೆ.
ಗವಿಸಿದ್ದಮ್ಮ ಗ್ರಾಮದಲ್ಲಿ ಇಲ್ಲದ ಕಾರಣ ವಶಕ್ಕೆ ಪಡೆಯಲಾಗಿಲ್ಲ ಎಂದು ಯುನಿಸೆಫ್ ತಾಲೂಕು ಸಂಚಾಲಕ ಶರಣಪ್ಪ ಮಾದಾರ ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಮಾದಾರ ಅವರೊಂದಿಗೆ ಎಎಸ್ಐ ಬಸವರಾಜ ಹಲಗೇರಿ, ಅಂಗನವಾಡಿ ಮೇಲ್ವಿಚಾರಕಿಯರಾದ ಶುಭಾ, ಅಮೀನಾ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

