ಘಟಾನುಘಟಿಗಳಿಗೆ ಸೋಲಿನ ರುಚಿ ತೋರಿಸಿದ ಹಾವೇರಿ ಕ್ಷೇತ್ರ
-ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 21
ಘಟಾನುಘಟಿ ರಾಜಕಾರಣಿಗಳಿಗೇ ಸೋಲಿನ ರುಚಿ ತೋರಿಸಿದ ಕ್ಷೇತ್ರ ಹಾವೇರಿ. ನೀರಸಾಬ್ ಎಂದೇ ಖ್ಯಾತರಾಗಿದ್ದ ಅಬ್ದುಲ್ ನಜೀರಸಾಬ, ಸ್ವಾತಂತ್ರ್ಯ ಹೋರಾಟಗಾರ ಸಿದ್ದಪ್ಪ ಹೊಸಮನಿ, ವಿಧಾನಸಭೆಯ ಮಾಜಿ ಸ್ಪೀಕರ್ ಬಿ.ಜಿ. ಬಣಕಾರ, ಸಿ.ಎಂ. ಇಬ್ರಾಹಿಂ ಅವರಂಥ ಮಹಾನುಭಾವರಿಗೂ ಇಲ್ಲಿನ ಮತದಾರರು ಮಣೆ ಹಾಕಿಲ್ಲ.
ಅಂದಿನ ಧಾರವಾಡ ದಕ್ಷಿಣ, ಇಂದಿನ ಹಾವೇರಿ ಕ್ಷೇತ್ರ ಇದುವರೆಗೆ ನಡೆದ 15 ಚುನಾವಣೆಗಳಲ್ಲಿ ಹಲವು ವಿಶೇಷಗಳನ್ನು ಕಂಡಿದೆ. ಮತದಾರ ಯಾರಿಗೆ ತನ್ನ ಒಲವು ಎಂಬ ಸಣ್ಣ ಸುಳಿವು ಕೂಡ ಸಿಗದಂತೆ ಗೌಪ್ಯ ಕಾಪಾಡಿಕೊಂಡು ಬಂದಿದ್ದಾನೆ. ಇಲ್ಲಿ ಗೆಲುವು ಸುಲಭ ಎಂದು ಬಂದವರು ಸೋಲು ಕಂಡಿದ್ದರೆ, ಸಾಮಾನ್ಯ ಕಾರ್ಯಕರ್ತರೂ ಸತತ 5 ಬಾರಿ ಜಯಭೇರಿ ಬಾರಿಸಿದ್ದಾರೆ.
ಸಿದ್ದಪ್ಪ ಹೊಸಮನಿಗೆ ಸೋಲು: 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಟಿ.ಆರ್. ನೇಸ್ವಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಕೆಎಂಪಿಪಿ (ಕಿಸಾನ್ ಮಜ್ದೂರ ಪ್ರಜಾ ಪಾರ್ಟಿ) ಅಭ್ಯರ್ಥಿ ಸಿದ್ದಪ್ಪ ಹೊಸಮನಿ ಅವರನ್ನು 50 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದರು.
ನೀರ ಸಾಬರಿಗೂ ನೀರು ಕುಡಿಸಿದರು: ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವರಾಗಿ, ಕೊಳವೆ ಬಾವಿ ಮೂಲಕ ಕ್ರಾಂತಿ ಮಾಡಿದ, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಿ 'ನೀರಸಾಬ್' ಎಂದೇ ಹೆಸರು ಮಾಡಿದ್ದ ಅಬ್ದುಲ್ ನಜೀರ ಸಾಬರು ಈ ಕ್ಷೇತ್ರದಿಂದ ಸಂಸತ್ ಪ್ರವೇಶಿಸಲು 1984ರಲ್ಲಿ ಜನತಾಪಕ್ಷದಿಂದ ಕಣಕ್ಕಿಳಿದಿದ್ದರು. ಆದರೆ, ಕಾಂಗ್ರೆಸ್ನ ಎ.ಎ. ಅಜೀಜ್ ಶೇಟ್ಗೆ ಮತದಾರರು ಮಣೆ ಹಾಕುವ ಮೂಲಕ ಅಬ್ದುಲ್ ನಜೀರ್ ಸಾಬ್ಗೂ ನೀರು ಕುಡಿಸಿದರು. ಅಜೀಜ್ ಶೇಟ್ 2.57 ಲಕ್ಷ ಮತ ಗಳಿಸಿ ಆಯ್ಕೆಯಾದರೆ, ನಜೀರ ಸಾಬರು 2 ಲಕ್ಷ ಮತ ಪಡೆದರು.
ಬಣಕಾರಗೆ ಒಲಿಯಲಿಲ್ಲ: ಹಿರೇಕೆರೂರು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಬಿ.ಜಿ. ಬಣಕಾರ 1980 (ಕಾಂಗ್ರೆಸ್-ಯು), 1989 (ಜನತಾದಳ), 1991 ಹಾಗೂ 1996 (ಬಿಜೆಪಿ) ಹೀಗೆ ಒಟ್ಟು ನಾಲ್ಕು ಬಾರಿ ಲೋಕಸಭೆಗೆ ಸ್ಪರ್ಧಿಸಿದರೂ ಒಮ್ಮೆಯೂ ಅವರಿಗೆ ಕ್ಷೇತ್ರದ ಮತದಾರ ಒಲಿಯಲಿಲ್ಲ. 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿದಾಗ ಕೇವಲ 28 ಸಾವಿರ ಮತಗಳ ಅಂತರದಲ್ಲಿ ಸೋತರು. ಈ ನಾಲ್ಕೂ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರು.
ಅದೃಷ್ಟ ಪರೀಕ್ಷಿಸಿದ ಇಬ್ರಾಹಿಂ: ಬರೀ ಮುಸ್ಲಿಂ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದ ಈ ಕ್ಷೇತ್ರದಲ್ಲಿ ತಾವು ಸುಲಭ ಗೆಲುವು ಸಾಧಿಸಿ ಲೋಕಸಭೆಗೆ ಪ್ರವೇಶ ಪಡೆಯಬಹುದು ಎಂಬ ಲೆಕ್ಕಾಚಾರ ಹಾಕಿ 1977ರಲ್ಲಿ ಸಿ.ಎಂ. ಇಬ್ರಾಹಿಂ ಭಾರತೀಯ ಲೋಕದಳ ಪಕ್ಷದಿಂದ ಅದೃಷ್ಟ ಪರೀಕ್ಷೆಗಿಳಿದರು. ಆದರೆ, ಕ್ಷೇತ್ರದ ಮತದಾರರು ಆ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಕೈಹಿಡಿದರೂ ಸಿ.ಎಂ. ಇಬ್ರಾಹಿಂಗೆ ಮಾತ್ರ ಗೆಲವು ದಕ್ಕಲಿಲ್ಲ. ಕಾಂಗ್ರೆಸ್ನ ಎಫ್.ಎಚ್. ಮೊಹಸೀನ್ರ ಕೈ ಹಿಡಿದು ಲೆಕ್ಕಾಚಾರ ತಲೆಕೆಳಗಾಗಿಸಿದರು. ಮೊಹಸೀನ್ 2.39 ಲಕ್ಷ ಮತಗಳಿಸಿ ಆಯ್ಕೆಯಾದರೆ, ಸಿ.ಎಂ. ಇಬ್ರಾಹಿಂ 1.47 ಲಕ್ಷ ಮತಗಳಿಸಿ ಸೋಲನುಭವಿಸಿದರು.
28 ಅಭ್ಯರ್ಥಿಗಳಿಂದ ಸ್ಪರ್ಧೆ: 1991ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬರೋಬ್ಬರಿ 28 ಅಭ್ಯರ್ಥಿಗಳು ಕಣದಲ್ಲಿದ್ದು, ಪೈಪೋಟಿ ನಡೆಸಿದ್ದು ವಿಶೇಷ. ಆದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದವರೊಬ್ಬರು ಮೃತಪಟ್ಟಿದ್ದರಿಂದ ಚುನಾವಣೆ ಮುಂದಕ್ಕೆ ಹೋಯಿತು. ವಿವಿಧ ಪಕ್ಷಗಳಿಂದ 5 ಅಭ್ಯರ್ಥಿಗಳು ಹಾಗೂ ಪಕ್ಷೇತರರಾಗಿ 21 ಜನರು ಸ್ಪರ್ಧಿಸಿದ್ದರು. ಆ ಸಲ ಕಾಂಗ್ರೆಸ್ನ ಬಿ.ಎಂ. ಮುಜಾಹೀದ ಗೆಲುವು ಸಾಧಿಸಿದ್ದರು.
ಕೈ ಅಧಿಪತ್ಯಕ್ಕೆ ಮೆಣಸಿನಕಾಯಿ ಬ್ರೇಕ್: 1952ರಿಂದ ಸತತವಾಗಿ ಗೆಲುವು ಸಾಧಿಸುತ್ತ ಬಂದು ಕಾಂಗ್ರೆಸ್ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಕ್ಷೇತ್ರದಲ್ಲಿ ಕೈ ಓಟಕ್ಕೆ ಮೊದಲ ಬಾರಿ ಬ್ರೇಕ್ ಬಿದ್ದಿದ್ದು 1998ರಲ್ಲಿ. ಲೋಕಶಕ್ತಿಯಿಂದ ಸ್ಪರ್ಧಿಸಿದ್ದ ಬಿ.ಎಂ. ಮೆಣಸಿನಕಾಯಿ ಅವರು ಕಾಂಗ್ರೆಸ್ನ ಐ.ಜಿ. ಸನದಿ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಅಧಿಪತ್ಯಕ್ಕೆ ಬ್ರೇಕ್ ಹಾಕಿದರು. ಈ ನಡುವೆ ಕಾಂಗ್ರೆಸ್ನ ಎಫ್.ಎಚ್. ಮೊಹಸೀನ್ 1962ರಿಂದ 1980ರ ವರೆಗೆ ಸತತ 5 ಬಾರಿ ಗೆದ್ದು ದಾಖಲೆ ನಿರ್ಮಿಸಿದರು. 2004 ಹಾಗೂ 2008ರಲ್ಲಿ ಕ್ಷೇತ್ರದಲ್ಲಿ ಕಮಲ ಅರಳಿದೆ. ಹೀಗೆ ಹತ್ತು ಹಲವು ವಿಶೇಷತೆ, ಖ್ಯಾತನಾಮರ ಸೋಲಿಗೆ ಕಾರಣವಾದ ಕ್ಷೇತ್ರ ಮತ್ತೊಂದು ಚುನಾವಣಾ ಅಖಾಡಕ್ಕೆ ಈಗ ವೇದಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

