ವೀರಶೈವ ಸಮಾಜ ಹೋಳಾಗುತ್ತಿದೆ
ಲಕ್ಷ್ಮೇಶ್ವರ: ವೀರಶೈವ ಧರ್ಮವು ಪುರಾತನ ಧರ್ಮವಾಗಿದ್ದು, ಆದಿಶಂಕರರ ಅಪರಾವತಾರವಾಗಿದ್ದು, ರೇಣುಕಾಚಾರ್ಯಯರು ಈ ಧರ್ಮದ ಸಂಸ್ಥಾಪಕರಾಗಿದ್ದು, ಅಂತಹ ವೀರಶೈವ ಧರ್ಮವು ಇಂದು ಹಲವಾರು ಪಂಗಡಗಳಾಗಿ ಹರಿದು ಹಂಚಿ ಹೋಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶ್ರೀಗಳು ಹೇಳಿದರು.
ಅವರು ಪಟ್ಟಣದ ಜ. ವೀರಗಂಗಾಧರ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ರೇಣುಕಾಚಾರ್ಯರ ಯುಗಮಾನೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ರಂಭಾಪುರಿ ಪೀಠದ ಜ. ಲಿಂ. ಗಂಗಾಧರ ಶ್ರೀಗಳು ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ದಿವ್ಯ ಸಂದೇಶವನ್ನು ನೀಡಿ ಜಗತ್ತಿನ ಉದ್ಧಾರಕ್ಕೆ ಧರ್ಮಗಳು ಅವಶ್ಯವಾಗಿವೆ ಎಂದರು. ಇದೇ ಸಂದರ್ಭದಲ್ಲಿ ಪಟ್ಟಣದ ಕರೆವಾಡಿಮಠದ ಮಳೆಮಲ್ಲಿಕಾರ್ಜುನ ಶ್ರೀಗಳು, ಸೋಮಣ್ಣ ಮುಳಗುಂದ ಹಾಗೂ ಎನ್.ಎ. ಮುಳಗುಂದಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ಪಟ್ಟಣದ ಹಾಲೇವಾಡಿಮಠದಿಂದ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಯು ಕುಂಭ ಹೊತ್ತ ಮಹಿಳೆಯರು, ಸ್ಥಳೀಯ ವೀರಗಾಸೆ ತಂಡದವರು ವೀರಭದ್ರಸ್ವಾಮಿಯ ವಡಪುಗಳನ್ನು ಹೇಳುತ್ತಾ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ರಂಭಾಪುರಿ ಶ್ರೀಗಳ ಕಲ್ಯಾಣ ಮಂಟಪಕ್ಕೆ ಆಗಮಿಸಿತು. ರುದ್ರಯ್ಯ ಪುರಾಣಿಕಮಠ, ಚಂಬಣ್ಣ ಬಾಳಿಕಾಯಿ, ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಸೋಮಯ್ಯ ಬಾಳಿಹಳ್ಳಿಮಠ, ಎಂ. ಶಿದ್ದಲಿಂಗಯ್ಯ ಮುಂತಾದವರು ಉಪಸ್ಥಿತರಿದ್ದರು. ವೀರಯ್ಯ ಮಠಪತಿ ಸ್ವಾಗತಿಸಿದರು. ಎನ್.ಎ. ಮುಳಗುಂದಮಠ ನಿರೂಪಿಸಿ, ವಂದಿಸಿದರು.
6ನೇ ತರಗತಿ ಪ್ರವೇಶಕ್ಕಾಗಿ ಪರೀಕ್ಷೆ ಬರೆದ ಮಕ್ಕಳು
ಮುಂಡರಗಿ: ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ವಾಜಪೇಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ಭಾನುವಾರ ಪಟ್ಟಣದ ಜ. ಅನ್ನದಾನೀಶ್ವರ ಪ್ರೌಢಶಾಲೆ ಹಾಗೂ ಎಂ.ಎಸ್. ಡಂಬಳ ಬಾಲಕಿಯರ ಪ್ರೌಢಶಾಲೆಗಳ ಎರಡು ಪರೀಕ್ಷಾ ಕೇಂದ್ರದಲ್ಲಿ ನಡೆಯಿತು. ಜ. ಅನ್ನದಾನೀಶ್ವರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 336 ವಿದ್ಯಾರ್ಥಿಗಳು ಮತ್ತು ಎಂ.ಎಸ್. ಡಂಬಳ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ 332 ವಿದ್ಯಾರ್ಥಿಗಳು, ಒಟ್ಟು 668 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು. ಎರಡು ಕೇಂದ್ರಗಳು ಸೇರಿದಂತೆ ಒಟ್ಟು 12 ವಿದ್ಯಾರ್ಥಿಗಳು ಪರೀಕ್ಷಗೆ ಗೈರುಹಾಜರಿಯಾಗಿದ್ದು, 656 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ತಿಳಿಸಿದ್ದಾರೆ. ಶಿಕ್ಷಣಾಧಿಕಾರಿ ಕೆ.ಡಿ. ಬಡಿಗೇರ ಮತ್ತು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮೋಹನಕುಮಾರ, ಸಮಾಜ ಕಲ್ಯಾಣ ಇಲಾಖೆಯ ಶಿವಶಂಕರ, ಪ್ರಾ. ಬಿ.ಕೆ. ಪಾಟೀಲ, ಎಚ್.ವೈ. ಭಜಂತ್ರಿ ಮುಂತಾದವರು ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಿದರು.
ಅಪಘಾತ: ಬೈಕ್ ಸವಾರ ಸಾವು
ರೋಣ: ಸಾರಿಗೆ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಬೈಕ್ ಸವಾರ ಸಾವನ್ನಪ್ಪಿದ ಘಟನೆ ತಾಲೂಕಿನ ಜಿಗಳೂರ ಸಮೀಪದ ಕೆಇಬಿ ಗ್ರೀಡ್ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದೆ. ಪಟ್ಟಣದ ಶಿವಪೇಟಿ 2ನೇ ಕ್ರಾಸ್ನ ನಿವಾಸಿ ಶಿವಪ್ಪ ಗಡಗಿ( 52) ಮೃತ ವ್ಯಕ್ತಿ. ಸ್ಥಳಕ್ಕೆ ರೋಣ ಪಿಎಸ್ಐ ಡಿ.ಬಿ. ಪಾಟೀಲ ಭೇಟಿ ನೀಡಿ ಪರೀಶಿಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ. ಈ ಕುರಿತು ರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾಂಪಸ್ ರಿಕ್ರ್ಯೂಟ್ಮೆಂಟ್
ಗದಗ: ಸ್ಟಾರ್ಟ್ ಸೊಲುಷನ್ಸ್ ಲರ್ನಿಂಗ್ ಟೆಕ್ನಾಲೋಜಿಸ್ ಟ್ರೇನರ್ ಹುದ್ದೆಗಳಿಗಾಗಿ ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮೂಲಕ ಕ್ಯಾಂಪಸ್ ರಿಕ್ರ್ಯೂಟ್ಮೆಂಟ್ ಹಮ್ಮಿಕೊಂಡಿರುತ್ತಾರೆ. ಕನಿಷ್ಟ ಪಿಯುಸಿ ಅಥವಾ ಇನ್ನಾವುದೇ ವಿದ್ಯಾರ್ಹತೆ ಹೊಂದಿದ್ದು, ಇಂಗ್ಲಿಷ ಭಾಷೆಯಲ್ಲಿ ಪ್ರಭುತ್ವವಿರಬೇಕು. ವಯೋವುತಿಯಲ್ಲಿ ಯಾವುದೇ ನಿರ್ಬಂಧಗಳಿರುವುದಿಲ್ಲ. ನೇಮಕಾತಿ ಹೊಂದಿದ್ದ ಅಭ್ಯರ್ಥಿಗಳನ್ನು ರಾಜ್ಯದ ಯಾವುದಾದರೂ ಸ್ಥಳಗಳಲ್ಲಿ ಕೆಲಸಕ್ಕೆ ಕಳುಹಿಸಲಾಗುವುದು. ಈ ಹುದ್ದೆಗಳಿಗೆ ಮೂಲ ವೇತನ ರು. 7 ಸಾವಿರ. ಅವರ ಕಾರ್ಯಪರತೆಯನ್ನು ಗಮನಿಸಿ ವೇತನವನ್ನು ಹೆಚ್ಚಿಸಲಾಗುವುದು ಮತ್ತು ವಸತಿ ಸೌಕರ್ಯವನ್ನು ಕಲ್ಪಿಸಲಾಗುವುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾ. 28ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯಲಿರುವ ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಲು ತಿಳಿಸಲಾಗಿದೆ ಎಂದು ಅನಿಲ ಕರ್ನಿಂಗ್, ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾತಿಗೆ ತಪ್ಪಿದ ಸರ್ಕಾರ
ಗದಗ: ಈಚೆಗೆ ಅಕ್ಷರ ದಾಸೋಹ ನೌಕರರು ಬೆಂಗಳೂರಿನ ಪ್ರೀಡ್ಂ ಪಾರ್ಕನಲ್ಲಿ ನಡೆಸಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಅಕ್ಷರ ದಾಸೋಹ ನೌಕರರಿಗೆ ಡಿಸೆಂಬರ್ 2013ರಿಂದ ರು. 500 ಹೆಚ್ಚಿನ ಸಂಭಾವನೆ ನೀಡುವುದಾಗಿ ತಿಳಿಸಿತ್ತು. ಆದರೆ, ಈಚೆಗೆ ಸರ್ಕಾರ ಡಿಸೆಂಬರ್ ಬದಲಾಗಿ ಎಪ್ರಿಲ್ 2014 ರಿಂದ ಸುತ್ತೋಲೆ ಹೊರಡಿಸಿದ್ದು ಖಂಡನಾರ್ಹ. ಸರ್ಕಾರ ಅಕ್ಷರ ದಾಸೋಹ ನೌಕರರಿಗೆ ಹೇಳಿದ ಮಾತಿಗೆ ತಪ್ಪಿದೆ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ಈಚೆಗೆ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಡಿಸೆಂಬರ್ 2013ರ ರಿಂದಲೇ ಜಾರಿಗೊಳಿಸುವಂತೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯೆ ಶೋಭಾ ನರಗುಂದ, ನಾಗರತ್ನಾ ಬಡಗಣ್ಣವರ, ಮಲ್ಲಮ್ಮ ತಡಹಾಳ, ಶೀಲಾ ಮುಳಗುಂದ ಮುಂತಾದವರು ಭಾಗವಹಿಸಿದ್ದರು.
ರೇಲ್ವೆ ಬೋರ್ಡ್ ಚೇರ್ಮನ್ಗೆ ಮನವಿ
ಗದಗ: ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಈಚೆಗೆ ಜರುಗಿದ ಗದಗ-ವಾಡಿ ರೈಲು ಮಾರ್ಗದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ರೇಲ್ವೆ ಬೋರ್ಡ್ ಚೇರ್ಮನ್ ಅರುನೆಂದ್ರಕುಮಾರ ಅವರನ್ನು ಸಂಸ್ಥೆಯ ರೇಲ್ವೆ ಉಪ ಸಮಿತಿ ಚೇರ್ಮನ್ ಹಾಗೂ ಜಡ್ಆರ್ಯುಸಿಸಿ ಸದಸ್ಯ ಜಿ.ಕೆ. ಆದಪ್ಪಗೌಡರ ಅವರು ಭೇಟಿ ಮಾಡಿ ಗದಗ ರೇಲ್ವೆ ನಿಲ್ದಾಣದ ಸುಧಾರಣೆ ಹಾಗೂ ಗದಗ ರೇಲ್ವೆ ನಿಲ್ದಾಣವನ್ನು ಎ ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳುವುದರ ಜತೆಗೆ ಮೂಲ ಸೌಲಭ್ಯ ಕಲ್ಪಿಸುವುದು ಹಾಗೂ ಹೊಸ ರೈಲುಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಹುಬ್ಬಳ್ಳಿಯಲ್ಲಿ ನೈಋತ್ಯ ರೇಲ್ವೆ ಜನರಲ್ ಮ್ಯಾನೇಜರ್, ಡಿವಿಜನಲ್ ರೇಲ್ವೆ ಮ್ಯಾನೇಜರ್ ಹಾಗೂ ಸಿಪಿಟಿಎಂ ಅವರನ್ನು ಭೇಟಿಯಾಗಿ ಹುಬ್ಬಳ್ಳಿ ಚೆನ್ನೈ ರೈಲನ್ನು ವಾರದಲ್ಲಿ 2 ಅಥವಾ 3 ದಿನ ಗದಗ ಮೂಲಕ ಪ್ರಾರಂಭಿಸುವಂತೆ ಒತ್ತಾಯಿಸಲಾಯಿತು. ಗದಗ ರೇಲ್ವೆ ನಿಲ್ದಾಣದ ಪಕ್ಕದ ರಸ್ತೆಗಳನ್ನು ಹಾಗೂ ಇತರೆ ವ್ಯವಸ್ಥೆಗಳನ್ನು ಸುಧಾರಿಸುವಂತೆ ಒತ್ತಾಯಿಸಿದ್ದಾರೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಕ್ಕಡಿಗೆ ಕ್ಯಾಂಟರ್ ಡಿಕ್ಕಿ: ಗಾಯ
ಗದಗ: ಯಮನೂರಿನಿಂದ ಉರೂಸ್ ಮುಗಿಸಿಕೊಂಡು ಬರುತ್ತಿದ್ದ ಚಕ್ಕಡಿಗೆ ತಾಲೂಕಿನ ಹುಲಕೋಟಿ ಗ್ರಾಮದ ಬಳಿ ಬೆಳಗಿನ ಜಾವ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಗಾಯಗೊಂಡವರನ್ನು ಗದಗ ನಗರದ ಸಿಕಂದರ್ ಬಾಬುಸಾಬ್ ವಾಲೀಕಾರ, ಅಣ್ಣಪ್ಪ ಮೋಕಾಸಿ, ಸಿದ್ದಲಿಂಗಯ್ಯ ಹಿರೇಗೌಡ್ರ, ಸಂಗಮೇಶ ಹೈದರ ಎಂದು ಗುರುತಿಸಲಾಗಿದೆ. ಇವರಲ್ಲಿ ಅಣ್ಣಪ್ಪ ಮೋಕಾಸಿ ಅವರ ಕಾಲಿಗೆ ತೀವ್ರ ಪೆಟ್ಟಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಳು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

