ವಿದ್ಯಾರ್ಥಿಗಳಿಗೆ ಆಟ-ಪಾಲಕರಿಗೆ ಸಂಕಟ
ಗದಗ: ಬಿಸಿಲಿನ ಪ್ರಖರತೆ ತೀವ್ರವಾಗಿದೆ. ಆದರೂ ಎಲ್ಲ ಆಟದ ಮೈದಾನ, ಗಲ್ಲಿ-ಗಲ್ಲಿಗಳು ಹುಡುಗರಿಂದ ತುಂಬಿ ತುಳುಕುತ್ತಿವೆ. ಮಕ್ಕಳೆಲ್ಲ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಸಿ ನಿರಾತಂಕವಾಗಿ ಆಟಗಳಲ್ಲಿ ನಿರತರಾಗಿದ್ದಾರೆ. ಪರೀಕ್ಷೆ ಚಿಂತೆ ಮಕ್ಕಳಿಗೆ ಮುಗಿದಿದ್ದರೆ ಈಗ ಪಾಲಕರಿಗೆ ಚಿಂತೆ ಶುರುವಾಗಿದೆ.
ತಮ್ಮ ಮಕ್ಕಳಿಗೆ ಎಷ್ಟು ಫಲಿತಾಂಶ ಬರುತ್ತದೋ? ಉತ್ತಮ ಕಾಲೇಜುಗಳಲ್ಲಿ ಸೀಟು ಸಿಗಬೇಕಾದರೆ ಎಷ್ಟೆಷ್ಟು ಅಂಕಗಳನ್ನು ಗಳಿಸಬೇಕು? ನಮ್ಮ ಸುತ್ತಮುತ್ತಲಿನ ಭಾಗದಲ್ಲಿ ಯಾವ ಕಾಲೇಜುಗಳು ಉತ್ತಮವಾಗಿವೆ? ಅಲ್ಲಿನ ಹಾಸ್ಟೆಲ್ ವ್ಯವಸ್ಥೆ, ಜತೆಗೆ ವಿದ್ಯಾರ್ಥಿನಿಯರಿಗೆ ಅಗತ್ಯ ಸೌಲಭ್ಯಗಳು ಆ ಕಾಲೇಜಿನಲ್ಲಿ ಇದೆಯೇ? ಎಂಬಿತ್ಯಾದಿ ಗೊಂದಲದಲ್ಲಿದ್ದಾರೆ.
ಫಲಿತಾಂಶ ನಿರ್ಧಾರ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಅವರು ಬರೆದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದೆ. ಸದ್ಯವೇ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಮಕ್ಕಳು ತಾವು ಬರೆದ ಉತ್ತರ ಪತ್ರಿಕೆ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ಅವರೆಲ್ಲ ಈಗ ಪರೀಕ್ಷೆಯ ಜಂಜಾಟ ಮರೆತು ಆಟಗಳಲ್ಲಿ ನಿರತರಾಗಿದ್ದಾರೆ. ಗ್ರಾಮೀಣ ಭಾಗದ ಕೆಲವು ವಿದ್ಯಾರ್ಥಿಗಳು ತಮ್ಮ ಕುಟುಂಬದವರೊಂದಿಗೆ ಹೊಲದ ಕೆಲಸದಲ್ಲಿ ನಿರತರಾಗಿದ್ದಾರೆ.
ಎಸ್‌ಎಸ್‌ಎಲ್‌ಸಿ ಅನಂತರ ಶಿಕ್ಷಣ ಮಹತ್ವದ್ದಾಗಿರುವುದರಿಂದ ಹೆಚ್ಚಿನ ಪಾಲಕರು ತಮ್ಮ ಮಕ್ಕಳ ಫಲಿತಾಂಶ, ಮುಂದಿನ ಶಿಕ್ಷಣದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಾರೆ. ಹೀಗಾಗಿ ಈಗ ಮಕ್ಕಳ ತಲೆಬಿಸಿ ಮುಗಿದು ಪಾಲಕರು ತಲೆಬಿಸಿ ಮಾಡಿಕೊಳ್ಳುವ ಸಮಯ. ಮಕ್ಕಳಿಗೆ ಮುಂದಿನ ಶಿಕ್ಷಣದ ವ್ಯವಸ್ಥೆ ಆಗುವ ವರೆಗೂ ಪಾಲಕರು ಬ್ಯುಸಿ.
ಗೇಮ್ ಸೆಂಟರ್ ಪುಲ್: ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಆಟದ ಮೈದಾನದಲ್ಲಿ ಬ್ಯುಸಿ ಇರುವ ಹುಡುಗರು ಇನ್ನುಳಿದ ಅವಧಿಯನ್ನು ಗೇಮ್ ಸೆಂಟರ್‌ಗಳಲ್ಲಿ, ಇಂಟರ್ನೆಟ್ ಸೆಂಟರ್‌ಗಳಲ್ಲಿ ಕಳೆಯುತ್ತಿದ್ದಾರೆ. ಮತ್ತೆ ಕೆಲವರು ರಜೆಯನ್ನು ದೂರದ ಊರುಗಳಿಗೆ ಪ್ರಯಾಣಿಸುವ ಮೂಲಕ, ಬಂಧು ಬಳಗದವರ ಊರಿನಲ್ಲಿ ಕಳೆಯುತ್ತಿದ್ದಾರೆ. ವರ್ಷಪೂರ್ತಿ ತಂದೆ ತಾಯಿಗಳು ಓದು ಹೆಚ್ಚಿನ ಅಂಕ ಗಳಿಸಬೇಕು ಎಂದು ಹೇಳುವುದನ್ನು ಕೇಳುತ್ತಲೇ ಬಂದಿದ್ದ ವಿದ್ಯಾರ್ಥಿಗಳಿಗೆ ಈಗ ಸಂತೋಷದ ಕಾಲವಾಗಿದೆ.
ಉತ್ತಮ ಫಲಿತಾಂಶದ ನಿರೀಕ್ಷೆ...
ವರ್ಷ ಪೂರ್ತಿ ಉತ್ತಮವಾಗಿ ಅಭ್ಯಸಿಸಿ ಉತ್ತಮವಾಗಿ ಪರೀಕ್ಷೆಗಳನ್ನು ಬರೆದಿದ್ದೇವೆ. ಫಲಿತಾಂಶ ನಿರ್ಧಾರವಾಗಿದೆ ಎನ್ನುವುದು ಗೊತ್ತಿದೆ. ಉತ್ತಮ ಫಲಿತಾಂಶ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದೇನೆ.
- ಶರಣು ಹಳ್ಳಿಕೇರಿ, ಗದಗ ನಗರದ ವಿದ್ಯಾರ್ಥಿ
ನನಗೆ ಭಯವಿಲ್ಲ...
ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮುಗಿದೆ. ಸದ್ಯದಲ್ಲಿಯೇ ಫಲಿತಾಂಶ ಬರುತ್ತದೆ ಎನ್ನುವುದನ್ನು ನೆನೆಸಿಕೊಂಡರೆ ಸ್ವಲ್ಪ ಆತಂಕವಾಗುತ್ತದೆ. ನಾನು ಉತ್ತಮವಾಗಿ ಓದಿದ್ದೇನೆ. ಅದಕ್ಕಾಗಿ ನನಗೆ ಭಯವಿಲ್ಲ. ಬಿಡುವಿನ ಸಮಯದಲ್ಲಿ ನಮ್ಮ ತಾಯಿಗೆ ಕೆಲಸದಲ್ಲಿ ಸಹಾಯ ಮಾಡುತ್ತೇನೆ. ಗೆಳತಿಯರೊಂದಿಗೆ ಆಟವಾಡುತ್ತೇವೆ.
- ಸಾವಿತ್ರಿ ನಿಂಗರಡ್ಡಿ, ಪರೀಕ್ಷೆ ಬರೆದ ವಿದ್ಯಾರ್ಥಿನಿ
ಅಂವ್ಗ ಬಿಟ್ಟಿದ್ದು...
ನಾವು ಒಕ್ಕಲುತನ ನಂಬಿ ಬದುಕುತ್ತಿರುವವರು. ಇದರ ಬಗ್ಗೆ ಗೊತ್ತಿಲ್ಲ. ಪಾಸು, ಫೇಲು ಹೇಳುವ ದಿನ ಅಷ್ಟೇ ವಿಚಾರ ಮಾಡ್ತಿವಿ. ಆದ್ರ ನಮ್ಮಗಾ ಚಲೋ ಓದ್ಯಾನಾ, ಹೆಚ್ಚಿಗೆ ಮಾರ್ಕ್ಸ್ ತೊಗೊಂತಾನಾ. ಅದೆಲ್ಲಿ ಕಾಲೇಜಿಗೆ ಹೊಕ್ಕಿನಿ ಅಂತನಾ ಅದು ಅಂವ್ಗ ಬಿಟ್ಟಿದ್ದು.
- ನಾಗಪ್ಪ ಬಾಚಲಾಪುರ,ಯಾವಗಲ್ಲ ಗ್ರಾಮದ ರೈತ
ಕೊಂಚ ದುಗುಡ...
ಎಲ್ಲ ಪಾಲಕರಿಗೂ ತಮ್ಮ ಮಕ್ಕಳು ಉತ್ತಮ ಫಲಿತಾಂಶ ತೆಗೆಯಲಿ ಎಂಬ ಆಸೆ. ಉನ್ನತ ಹುದ್ದೆಗಳಿಗೆ ಹೋಗಬೇಕಾದಲ್ಲಿ ಎಸ್ಸೆಸ್ಸೆಲ್ಸಿ ಅಡಿಪಾಯ. ಸದ್ಯದಲ್ಲಿಯೇ ಫಲಿತಾಂಶ ಹೊರಬರುತ್ತದೆ ಎನ್ನುವುದು ಸಹಜವಾಗಿ ನಮ್ಮಲ್ಲಿಯೂ ಕೊಂಚ ದುಗುಡಕ್ಕೆ ಕಾರಣವಾಗಿದೆ.
- ಕೆ.ಬಿ. ಕಬಾಡಿ, ಗದಗ ನಿವಾಸಿ
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

