ಶಿಥಿಲ ಕಾಲುವೆಗಳು: ಮಲಪ್ರಭೆ ಮರೀಚಿಕೆ
ಕನ್ನಡಪ್ರಭ ವಾರ್ತೆ, ರೋಣ, ಮೇ 2
ಮಳೆ ಆಶ್ರಿತ ಬರಡು ಭೂಮಿಗೆ ನೀರುಣಿಸಿ, ರೈತರ ಬದುಕನ್ನು ಹಸನಾಗಿಸಬೇಕಿದ್ದ ಮಲಪ್ರಭೆ ಬಲದಂಡೆ ಕಾಲುವೆಗಳು ನೀರು ಹರಿಯುವ ಮುನ್ನವೇ ಶಿಥಿಲಾವಸ್ಥೆಗೆ ತಲುಪಿ, ರೈತರಿಗೆ ಕಾಲುವೆಗಳಿಂದ ನೀರಾವರಿ ಮರೀಚಿಕೆಯಾಗಿದೆ. ರೈತರ ನೀರಾವರಿ ಕನಸು ಕಮರಿದೆ.
ಬರದ ನಾಡೆಂದು ಕಾಯಂ ಹಣೆಪಟ್ಟಿ ಹಚ್ಚಿಕೊಂಡ ರೋಣ ತಾಲೂಕಿನ ರೈತರನ್ನು ಬರದಿಂದ ವಿಮುಕ್ತಿಗೊಳಿಸಿ, ಸರ್ವತೋಮುಖ ಅಭಿವೃದ್ಧಿಗೆ ನೆರವಾಗುವ ದೃಷ್ಟಿಯಿಂದ ಈ ಭಾಗದವರೇ ಆಗಿದ್ದ (ತಾಲೂಕಿನ ಜಕ್ಕಲಿ) ಅಂದಿನ ನೀರಾವರಿ ಸಚಿವ ಅಂದಾನಪ್ಪ ದೊಡ್ಡಮೇಟಿ ಮಲಪ್ರಭಾ ಬಲದಂಡೆ ಕಾಲುವೆಗಳ ಕೃಷಿಭೂಮಿಗೆ ನೀರುಣಿಸುವ ಯೋಜನೆಯನ್ನು 1970ರ ದಶಕದಲ್ಲಿ ಅನುಷ್ಠಾನಗೊಳಿಸಿದರು.
ಹೀಗಿತ್ತು ಯೋಜನೆ...: ಇದರಿಂದ ರೋಣ ತಾಲೂಕಿನಲ್ಲಿ 2005ರಲ್ಲಿ 27 ಕಿ.ಮೀ. ಉದ್ದದಷ್ಟು ಕಾಲುವೆಗಳನ್ನು ನಿರ್ಮಿಸಲಾಗಿದೆ. 2012ರಲ್ಲಿ ಕಾಲುವೆ ನಿರ್ಮಾಣ ಪೂರ್ಣಗೊಂಡಿತು. ದುರ್ದೈವ ಸಂಗತಿಯೆಂದರೆ, ನೀರು ಹರಿಯುವ ಮುನ್ನವೇ ಈ ಕಾಲುವೆಗಳು ಶಿಥಿಲಗೊಂಡಿವೆ. ಕಾಲುವೆಯುದ್ದಕ್ಕೂ ಜಾಲಿ, ಕಂಟಿಗಳು ಬೆಳೆದಿವೆ. ಸವದತ್ತಿ ಬಳಿಯ ನವಿಲತೀರ್ಥ (ರೇಣುಕಾ) ಜಲಾಶಯದಿಂದ ಮಲಪ್ರಭೆ ಬಲದಂಡೆಯ ಮೂಲಕ ರೋಣ ವಿಭಾಗಕ್ಕೆ ಒಳಪಡುವ 115ರಿಂದ 142 ಕಿ.ಮೀ.ವರೆಗೆ ನೀರು ಹರಿಸುವ ಯೋಜನೆ ಒಂದು ಹಂತಕ್ಕೆ ಬಂದು ನಿಂತಿತು.
ನೀರು ಹಂಚಿಕೆಗಾಗಿ ಉಪ ಕಾಲುವೆಗಳನ್ನು ನಿರ್ಮಿಸಲಾಯಿತು. ಇದರಲ್ಲಿ ಮಲ್ಲಾಪುರ ಗ್ರಾಮದ ಬಳಿ 52 ಎಬಿ ಬ್ಲಾಕ್ನಲ್ಲಿ 24 ಕಿ.ಮೀ. ವಿಸ್ತೀರ್ಣ, ಕೌಜಗೇರಿ ಗ್ರಾಮ ಹತ್ತಿರ 53 ಎ, ಬಿ ಬ್ಲಾಕ್ನಲ್ಲಿ 16 ಕಿ.ಮೀ., ಸಂದಿಗವಾಡ ಗ್ರಾಮದ ಹತ್ತಿರ 55 ಎಬಿ ಬ್ಲಾಕ್ನಲ್ಲಿ 7 ಕಿ.ಮೀ., ಬಾಸಲಾಪುರ ಹತ್ತಿರ 56 ಎಬಿಸಿ ಬ್ಲಾಕ್ ಹತ್ತಿರ 8 ಕಿ.ಮೀ., ಜಿಗಳೂರ ಗ್ರಾಮದ 57ನೇ ಬ್ಲಾಕ್ನಲ್ಲಿ 24 ಕಿ.ಮೀ. ಮತ್ತು ಇಟಗಿ ಬ್ಲಾಕ್ನಲ್ಲಿ 24 ಕಿ.ಮೀ. ಉದ್ದದ ನೀರು ಹಂಚಿಕೆ ಉಪ ಕಾಲುವೆಗಳನ್ನು ನಿರ್ಮಿಸಲಾಗಿದೆ.
ನಿರ್ವಹಣೆ ಇಲ್ಲ: 2005ರಲ್ಲಿ ಪ್ರಾರಂಭವಾದ ಕಾಮಗಾರಿ 2011ಕ್ಕೆ ಮುಗಿಯಬೇಕಿತ್ತು. ಒಂದು ವರ್ಷ ತಡವಾಯಿತು. ವಿಪರ್ಯಾಸವೆಂದರೆ ಕಾಲುವೆಗಳ ನಿರ್ಮಾಣಕ್ಕೆ ಬಳಸಲಾದ 1.5 ್ಢ 1.5 ಅಡಿ ಅಳತೆಯ ಸ್ಲ್ಯಾಬ್ಗಳು ಉದ್ದಕ್ಕೂ ಅಲ್ಲಲ್ಲಿ ಕಿತ್ತಿದ್ದು, ಪಕ್ಕದ ತಡೆಗೋಡೆಗಳು ಸಂಪೂರ್ಣ ಕುಸಿದಿವೆ. ಸಮರ್ಪಕ ನಿರ್ವಹಣೆ ಕೊರತೆಯಿಂದ ಕಾಲುವೆಯುದ್ದಕ್ಕೂ ಜಾಲಿ ಕಂಟಿಗಳು ಹೆಮ್ಮರವಾಗಿ ಬೆಳೆದಿವೆ.
ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ನೀರುಣಿಸುವ ಯೋಜನೆ ಇಲ್ಲಿ ಬಹುತೇಕ ಹಳ್ಳ ಹಿಡಿದಿದೆ. ಐದು ವರ್ಷಗಳಿಂದ ಅನಾವೃಷ್ಟಿ ಎದುರಿಸುತ್ತಾ ಬಂದಿರುವ ತಾಲೂಕಿನ ರೈತ ಸಮುದಾಯಕ್ಕೆ ಆಸರೆಯಾಗಿಬೇಕಿದ್ದ ಕಾಲುವೆಗಳು ಹೊಲಗಳಿಗೆ ನೀರನ್ನೇ ಉಣಿಸುತ್ತಿಲ್ಲ. ಕಾಲುವೆಗಳ ನಿರ್ವಹಣೆ ಮರೆತ ನೀರಾವರಿ ಇಲಾಖೆ ಅಧಿಕಾರಿಗಳ ಧೋರಣೆಗೆ ತಾಲೂಕು ರೈತ ಸಮುದಾಯ ಹಿಡಿಶಾಪ ಹಾಕುತ್ತಿದೆ.
35,765 ಹೆಕ್ಟೇರ್ ನೀರಾವರಿ: ತಾಲೂಕಿನಲ್ಲಿ ಒಟ್ಟು 1,26,586 ಹೆಕ್ಟೇರ್ ಸಾಗುವಳಿ ಕ್ಷೇತ್ರವನ್ನು ಹೊಂದಿದ್ದು, ಯೋಜನೆಯ ಮೊದಲ ಹಂತವಾಗಿ ರೋಣ ತಾಲೂಕಿನ ಬೆಳವಣಕಿ, ಕೌಜಗೇರಿ, ಮಲ್ಲಾಪುರ, ಸವಡಿ, ಚಿಕ್ಕಮಣ್ಣೂರ, ಅರಹುಣಸಿ, ಸೋಮನಕಟ್ಟಿ ಗ್ರಾಮಗಳ ವ್ಯಾಪ್ತಿಯಲ್ಲಿ 35,765 ಹೆಕ್ಟೇರ್ ಪ್ರದೇಶವನ್ನು ಯೋಜನೆಯಡಿ ನೀರಾವರಿಗೆ ಒಳಪಡಿಸಲಾಗಿದೆ. ಸದ್ಯ ಇದರಲ್ಲಿ ಕೇವಲ ಮಾಳವಾಡ, ಸೋಮನಕಟ್ಟಿ ವ್ಯಾಪ್ತಿಯ12,710 ಹೆಕ್ಟೇರ್ ಪ್ರದೇಶದಲ್ಲಿ ನೀರುಣಿಸಲಾಗುತ್ತಿದೆ.
ಲಕ್ಷ್ಯ ಕೊಟ್ರ ಸರಿಯಾಗುತ್ರೀ: ಐದ್ ವರ್ಷ ಆತ್ರೀ. ಸರಿಯಾಗಿ ಮಳಿಯಾಗಿಲ್ರೀ. ಇದರಿಂದ ಬಿತ್ತಿದ ಬೆಳೆ ಭೂಮಿ ಬಿಟ್ಟ ಏಳ್ದೆ ಅಲ್ಲೆ ಕಮರೆವ್ರಿ. ಕಾಲುವೆದಾಗಿಂದ್ ನೀರ್ ಹಾಸ್ಯಾದ್ರು ಬೆಳೆ ತಗಿಬೇಕಂದ್ರ ಅದರಾಗು ನೀರು ಬರವಲ್ದು. ಕಾಲುವೆ ತುಂಬ ಜಾಲಿ, ಕಂಟಿ ಬೆಳದಾವ್ರೀ. ಇನ್ನ ನೀರು ಬರುದು ದೂರದ ಮಾತಾಗೇತ್ರಿ. ಇದ್ಕ ಸಂಬಂಧಪಟ್ಟ ಅಧಿಕಾರಿಗಳು ಮತ್ತ್ ಜನಪ್ರತಿನಿಧಿಗಳು ಲಕ್ಷ್ಯ ಕೊಟ್ರ ಎಲ್ಲ ಸರಿಯಾಗುತ್ರೀ - ಎಂದು ರೈತರಾದ ಮಲ್ಲಯ್ಯ ಮಹಾಪುರುಷಮಠ, ರಾಘವೇಂದ್ರ ಆರೇರ, ಶರಣಪ್ಪ ಮಲ್ಲಾಪುರ, ವೀರೇಶ ಅಡ್ನೂರ, ಬಸನಗೌಡ ಪ್ಯಾಟಿಗೌಡ್ರ, ಉಮೇಶ ಸಾಲಿಮಠ, ಅಮರೇಶ ಹದ್ಲಿ ಆಗ್ರಹಿಸಿದ್ದಾರೆ.
-ಪಿ.ಎಸ್. ಪಾಟೀಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

