ರಾಣಿಬೆನ್ನೂರಲ್ಲೇ 81ನೇ ಸಾಹಿತ್ಯ ಸಮ್ಮೇಳನ
ರಾಣಿಬೆನ್ನೂರು: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಣಿಬೆನ್ನೂರಿನಲ್ಲೇ ನಡೆಸಲು ಕೇಂದ್ರ ಕಸಾಪ ಸಮಿತಿ ನಿರ್ಣಯ ತೆಗೆದುಕೊಂಡಿದ್ದು, ಯಾವುದೇ ಗೊಂದಲಕ್ಕೀಡಾಗದೆ ಎಲ್ಲರೂ ಸಹಕರಿಸಬೇಕು ಎಂದು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಎಚ್.ಎಸ್. ಮುದಿಗೌಡ್ರ ಮನವಿ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲಿಕ ಹಾಲಂಬಿ ಏ. 25ರಂದು ಬೆಂಗಳೂರಿನ ಸಾಹಿತ್ಯ ಭವನದಲ್ಲಿ ಕರೆದಿದ್ದ ಕೇಂದ್ರ ಕಸಾಪ ಸಮಿತಿ ಹಾಗೂ ಜಿಲ್ಲಾ ಸಮಿತಿ ಸಭೆಯಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿಯೇ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಉಪಸ್ಥಿತರಿದ್ದ ಕಸಾಪ ಕೇಂದ್ರ ಹಾಗೂ ಜಿಲ್ಲಾ ಸಮಿತಿ ಸದಸ್ಯರು ರಾಣಿಬೆನ್ನೂರಲ್ಲಿ ಸಮ್ಮೇಳನ ನಡೆಸಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ವಿನಾಕಾರಣ ಗೊಂದಲ ಬೇಡ: ಜಿಲ್ಲೆಯ ಶಾಸಕರ ಮತ್ತು ಮಠಾಧೀಶರ ಸಭೆ ಕರೆದು ಒಪ್ಪಿಗೆ ಪಡೆದು ಸಮ್ಮೇಳನ ನಡೆಸಲು ಮುಂದಾಗಿಲ್ಲ ಅಥವಾ ತಮ್ಮ ಸಮ್ಮತಿ ಇಲ್ಲ ಎಂಬುದಾಗಿ ಪತ್ರಿಕೆಗಳಿಗೆ ಹೇಳಿಕೆ ನೀಡಿ ವಿನಾಕಾರಣ ಗೊಂದಲ ಸೃಷ್ಟಿಸುವುದಕ್ಕಿಂತ ಕೇಂದ್ರ ಕಸಾಪ ಸಮಿತಿ ನಿರ್ಣಯದಂತೆ ರಾಣಿಬೆನ್ನೂರಿನಲ್ಲಿ 81ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಎಚ್.ಎಸ್. ಮುದಿಗೌಡ್ರ ತಿಳಿಸಿದ್ದಾರೆ.
ದೇವಸ್ಥಾನ ಮಾನಸಿಕ ನೆಮ್ಮದಿ ನೀಡುವ ತಾಣ
ಹಿರೇಕೆರೂರು: ಮಾನವ ಜೀವಿಯ ಮಾಸಿಕ ನೆಮ್ಮದಿಗೆ ಹಾಗೂ ಭಕ್ತಿ ಸಮರ್ಪಣೆಗೆ ದೇವಸ್ಥಾನಗಳ ಪಾತ್ರ ಬಹು ಪ್ರಮುಖವಾಗಿದೆ. ಮೌಲ್ಯದ ಬದುಕಿಗೆ ಮಠ, ಮಂದಿರಗಳು, ದೇವಸ್ಥಾನಗಳು ನೆಮ್ಮದಿ ನೀಡುವ ತಾಣಗಳಾಗಿವೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು. ಅವರು ತಾಲೂಕಿನ ಕೋಡ ಗ್ರಾಮದಲ್ಲಿ ನವೀಕರಣಗೊಳಿಸಿದ ಮೌನೇಶ್ವರ ದೇವಸ್ಥಾನ ಮತ್ತು ಮಹಾಗಣಪತಿ ಮೌನೇಶ್ವರ ಹಾಗೂ ಕಾಳಿಕಾದೇವಿ ದೇವರ ನೂತನ ಮೂರ್ತಿಗಳ ಪ್ರತಿಷ್ಠಾಪನೆ, ಕಳಸಾರೋಹಣ, ಧರ್ಮ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಧರ್ಮಸಭೆಗಳ ಮೂಲಕ ಪೂಜ್ಯರು ನೀಡುವ ಮಾರ್ಗದರ್ಶನ ನಮ್ಮ ಜೀವನಕ್ಕೆ ಬಹು ಅಮೂಲ್ಯ ಕೊಡುಗೆಗಳು. ಯುವಕರು ದುಷ್ಚಟಗಳಿಂದ ದೂರ ಇದ್ದು, ಧರ್ಮದ ಬದುಕನ್ನು ಅಳವಡಿಸಿಕೊಳ್ಳಬೇಕು. ಗುರು-ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ನಾಗರಿಕ ಸಮಾಜ ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು. ಹಾಸನ ಜಿಲ್ಲೆ ಅರಕಲಗೂಡು ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಕಾಶಿಬೆಲಗೂರು ವಿಶ್ವಕರ್ಮ ಮಹಾಸಂಸ್ಥಾನ ಸಾವಿತ್ರಿ ಪೀಠದ ಅಭಿನವ ದೇವಣಾಚಾರ್ಯ ಸ್ವಾಮೀಜಿ, ಗದಗ ಜಿಲ್ಲೆ ಶಿರಹಟ್ಟಿ ಸುಕ್ಷೇತ್ರ ವರವಿ ಮೌನೇಶ್ವರ ಮಠದ ವಿರೂಪಾಕ್ಷ ಸ್ವಾಮೀಜಿ, ಅಂತರವಳ್ಳಿ ಮೂರುಜಾವಧೀಶ್ವರ ಮಠದ ನಿರಂಜನ ಸ್ವಾಮೀಜಿ, ಸೊರಬ ತಾಲೂಕಿನ ಶಿಗ್ಗಾ ಅಂತರವಳ್ಳಿ ಮಹಾ ಸಂಸ್ಥಾನ ಮೂರುಜಾವಧೀಶ್ವರ ಮಠದ ಗುರುಫಣಿಭೂಷಣ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮೌನೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಪರಮೇಶ್ವರಾಚಾರ ಅರ್ಕಾಚಾರಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಬಸಮ್ಮ ಅಬಲೂರು, ತಾಪಂ ಸದಸ್ಯ ಸಣ್ಣಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ವಾಸವಾಂಬಾ ವಿಜಾಪುರ, ಚಾಮರಾಜ ಕಮ್ಮಾರ, ಲವಪ್ಪಚಾರ ಅರ್ಕಾಚಾರ, ಪರಮೇಶ್ವರಪ್ಪ ಕಮ್ಮಾರ, ಲಕ್ಷ್ಮಣ ಅರ್ಕಾಚಾರ, ಶಿದ್ದಪ್ಪ ಅರ್ಕಾಚಾರಿ, ರುದ್ರಾಚಾರಿ ಕಮ್ಮಾರ, ಡಾ. ಪಿ.ಇ. ಮಾಯಾಚಾರ, ವೀರಪ್ಪ ಬಡಿಗೇರ, ಬ್ರಹ್ಮಾಚಾರ ಅರ್ಕಾಚಾರ, ಮೌನೇಶಾಚಾರ ಕಮ್ಮಾರ, ಜಕಣಾಚಾರ ಕಮ್ಮಾರ, ಈರಣ್ಣಾಚಾರ ಕಮ್ಮಾರ, ಮಲ್ಲಿಕಾರ್ಜುನಾಚಾರ ಅರ್ಕಾಚಾರಿ, ಶಿವಾನಂದಾಚಾರ ಅರ್ಕಾಚಾರಿ, ಕುಬೇರಪ್ಪಾಚಾರ ಅರ್ಕಾಚಾರ, ಕಾಳಾಚಾರ ಅರ್ಕಾಚಾರ, ಚಿದಂಬರಾಚಾರ ಕಮ್ಮಾರ, ಚಾಮರಾಜ ಎಸ್. ಕಮ್ಮಾರ, ಹನುಮಂತಾಚಾರ ಅರ್ಕಾಚಾರ ಇದ್ದರು. ಬ್ರಹ್ಮಾಚಾರ ಬಡಿಗೇರ ನಿರೂಪಿಸಿ, ಈರಪ್ಪ ಗೋಣಿಮಠ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

