ಗದಗ

ಸ್ವಾಭಿಮಾನದ ಬದುಕು ಕಟ್ಟಲು ಹೋರಾಟ ಹಾಡು ಅವಶ್ಯ

Published On :

ಗದಗ: ಹೋರಾಟದ ಹಾಡುಗಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮತ್ತು ಹೋರಾಟ ಕಾರ್ಯಕ್ರಮಗಳಿಗೆ ಒಂದು ರೀತಿ ಸಂದೇಶವಾಣಿ. ಅವು ಹೋರಾಟಗಾರರಿಗೆ ಸ್ವಾಭಿಮಾನದ ಹುರುಪನ್ನು ತುಂಬುವ ಮತ್ತು ಹೋರಾಟಕ್ಕೆ ಹೆಚ್ಚಿನ ಬಲವನ್ನು ನೀಡುವಲ್ಲಿ ಪೂರಕವಾಗಿವೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೆಂಕಟೇಶಯ್ಯ ಹೇಳಿದರು.
ಅವರು ಶನಿವಾರ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿಯ ಸ್ಲಂ ಯುವ ಘಟಕದಿಂದ ಸಮಿತಿ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಹೋರಾಟದ ಹಾಡಿನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಮುಖವಾಗಿ ದಲಿತರ ನೋವುಗಳು, ಅವರ ಸಂಕಟಗಳಿಗೆ ಯಾವುದೇ ಭಾವನೆ ತೋರದ ಸಮಾಜದಲ್ಲಿ ನಮ್ಮ ನಮ್ಮ ಬದುಕಿನ ಅಳಲನ್ನು ತೋಡಿಕೊಳ್ಳಲು ನಾವೂ ಮನುಷ್ಯರು ಎಂಬ ಕಾರಣಕ್ಕೆ ದಲಿತ ಸಾಹಿತ್ಯದ ಮೂಲಕ ಹೋರಾಟದ ಹಾಡುಗಳು ಮೂಡಿ ಬರಲಿವೆ. ಒಂದು ಕಮಲದ ಹೂವಿನ ವರ್ಣನೆಯನ್ನು ವಿಧ-ವಿಧವಾಗಿ ಬರೆಯುವ ಸಾಹಿತಿಗಳಿಗೆ ಮನುಷ್ಯನ ಬದುಕಿನ ಭವಣೆಯ ನೋವು-ನಲಿವುಗಳು, ಜಾತಿ ತಾರತಮ್ಯದ ಹೀನಾಯ ಬದುಕಿನ ಕೈಗನ್ನಡಿಯಾಗಿ ಬಹಳ ಸಂಕಟ, ಅವಮಾನ, ದುಮ್ಮಾನಗಳನ್ನು ಹೋರಾಟದ ಹಾಡುಗಳ ಮೂಲಕ ಮೂಡಿ ಬಂದಿವೆ. ಇಂತಹ ಕಾರ್ಯಾಗಾರದಲ್ಲಿ ಇವುಗಳನ್ನು ಮತ್ತೆ ಮತ್ತೆ ಹಾಡುತ್ತಾ ಮುಂದಿನ ಪೀಳಿಗೆಗೆ ತರಬೇತಿ ನೀಡುತ್ತಿರುವುದು ಸಂಘಟನೆಯ ಹೋರಾಟಗಾರರಿಗೆ ಒಳ್ಳೆಯ ಬೆಳವಣಿಗೆಗೆ ಕಾರಣ ಎಂದರು.
ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ ಮಾತನಾಡಿ, ಈ ಹೋರಾಟದ ಹಾಡುಗಳು ಯಾರ ವಿರೋಧಕ್ಕಾಗಿ ಅಲ್ಲ, ಯಾರ ಮನಮೆಚ್ಚಿಸುವ ಕೆಲಸಕ್ಕಾಗಿಯೂ ಈ ಹಾಡುಗಳು ಹುಟ್ಟಿಕೊಂಡಿಲ್ಲ. ನಮ್ಮ ಬದುಕಿನ ಸುತ್ತಲೂ ನಡೆಯುವ ಹಲವಾರು ನೈಜ ಘಟನೆಗಳನ್ನಾಧರಿಸಿ ನಮ್ಮ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ಹಾಡುಗಳ ಮೂಲಕ ಒಂದು ಸಂದೇಶವನ್ನು ಬಿತ್ತುವ ಹಾಡುಗಳಾಗಿವೆ. ಇಂದು ಮುಖ್ಯವಾಗಿ ಹೋರಾಟಗಳಲ್ಲಿ ಮರೆಯಾಗುತ್ತಿವೆ. ಹೋರಾಟದ ಹಾಡುಗಳನ್ನು ಹಾಡುವ ಮತ್ತು ಬರೆಯುವ ಕಲಾವಿದರು ಈ ತರಬೇತಿ ಕಾರ್ಯಾಗಾರದ ಮೂಲಕ ಮುಂದೆ ಬರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಹೋರಾಟಕ್ಕೆ ಬೆಲೆಯ ಇರುವುದಿಲ್ಲ. ಹೀಗಾಗಿ ಇಂತಹ ಹೋರಾಟದ ಹಾಡುಗಳ ತರಬೇತಿ ಶಿಬಿರ ಇನ್ನೂ ಹೆಚ್ಚಾಗಿ ನಡೆದು ಹೊಸ ಹೊಸ ಕಲಾವಿದರು ಹುಟ್ಟಿಕೊಳ್ಳಬೇಕು ಎಂದರು.
ಜಿಲ್ಲಾ ಸ್ಲಂ ಸಮಿತಿಯ ಅಧ್ಯಕ್ಷ ಅಶೋಕ ಮ್ಯಾಗೇರಿ, ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ, ಮಹಿಳಾ ಸಮಿತಿಯ ಅಧ್ಯಕ್ಷೆ ಉಮಾದೇವಿ ಕಾತರಕಿ, ಕಾರ್ಯದರ್ಶಿ ತಿಪ್ಪವ್ವ ಮುಟಗಾರ, ಬಸವರಾಜ ಈರಣ್ಣವರ, ಜಯಂತಿ ಸವಡಿ, ಸ್ಲಂ ಸಮಿತಿ ಉಪಾಧ್ಯಕ್ಷ ಯಲ್ಲಪ್ಪ ರಾಮಗಿರಿ, ಸ್ಲಂ ಯುವ ಸಮಿತಿ ಅಧ್ಯಕ್ಷ ಶರೀಫ ಬಿಳೆಯಲಿ, ನಾಗರಾಜ ಮುಟಗಾರ, ಪರಶುರಾಮ ಕಾಳೆ, ಬಸವರಾಜ ಬಿಳೆಯಲಿ, ಕಾಶಪ್ಪ ಚಲವಾದಿ, ಅನೀಲ ಕಾಳೆ, ಯೂಸೂಫ್ ಮಜ್ಜಗಿ, ಅಬ್ದುಲ್ ನರಸಾಪುರ, ರಾಜು ಭರಮಣ್ಣವರ, ವಿರೂಪಾಕ್ಷ ರಾಮಗಿರಿ, ಎ.ಕೆ. ಮಲ್ದಾರ, ಯುನೂಸಅಲಿ ಹುಬ್ಬಳ್ಳಿ, ಕಾಶೀಮಸಾಬ್ ಉಮಚಗಿ, ವಸೀಮ ಎಂ. ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.